Site icon Vistara News

Crime News: 9 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ನಿರ್ಜನ ಪ್ರದೇಶದಲ್ಲಿ ಪತ್ತೆ

crime news

crime news

ಜೈಪುರ: ರಾಜಸ್ಥಾನದ ಕೋಟಾದಿಂದ 9 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಚಂಬಲ್ ಕಣಿವೆಯಲ್ಲಿ ಪತ್ತೆಯಾಗಿದೆ. 16 ವರ್ಷದ ಐಐಟಿ-ಜೆಇಇ ಆಕಾಂಕ್ಷಿ ರಚಿತ್ ಸೋಂಧಿಯಾ ಅವರ ಮೃತದೇಹ ಒಂಬತ್ತು ದಿನಗಳ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಸೋಮವಾರ (ಫೆಬ್ರವರಿ 19)ರಂದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ (Crime News).

ಜೆಇಇಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ರಚಿತ್ ಸೋಂಧಿಯಾ ಫೆಬ್ರವರಿ 11ರಿಂದ ನಾಪತ್ತೆಯಾಗಿದ್ದರು. ಹಾಸ್ಟೆಲ್‌ನಿಂದ ಕೋಚಿಂಗ್ ಸೆಂಟರ್‌ಗೆ ಹೊರಟ ಬಳಿಕ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮಧ್ಯಪ್ರದೇಶದ ರಚಿತ್ ಸೋಂಧಿಯಾ ಜೆಇಇ ತಯಾರಿಗಾಗಿ ಒಂದು ವರ್ಷದ ಹಿಂದೆ ಕೋಟಾಕ್ಕೆ ಆಗಮಿಸಿದ್ದರು. ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಅವರು ಫೆಬ್ರವರಿ 11ರಂದು ಕೊನೆಯ ಬಾರಿಗೆ ಗರಡಿಯಾ ಮಹಾದೇವ್ ದೇವಾಲಯದ ಬಳಿಯ ಅರಣ್ಯ ಪ್ರದೇಶವನ್ನು ಪ್ರವೇಶಿಸುತ್ತಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಕಂಡುಬಂದಿತ್ತು. ಇದೀಗ ಅವರ ಶವ ಚಂಬಲ್ ಕಣಿವೆಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಮಗ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಆತಂಕಗೊಂಡ ರಚಿತ್ ಪೋಷಕರು ಆತನ ಪತ್ತೆಗೆ ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಶಿಕ್ಷಣ ಸಚಿವ ಮದನ್ ದಿಲಾವರ್ ಅವರನ್ನು ಸಂಪರ್ಕಿಸಿ, ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ವಿನಂತಿಸಿದ್ದರು. ಅದರಂತೆ ರಚಿತ್ ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಸಲಾಯಿತು. ಈ ವೇಳೆ ಗರಡಿಯಾ ಮಹಾದೇವ್ ದೇವಾಲಯದ ಬಳಿ ಸೋಂಧಿಯಾ ಅವರ ಬ್ಯಾಗ್, ಮೊಬೈಲ್ ಫೋನ್, ಕೊಠಡಿಯ ಕೀಗಳು ಮತ್ತು ಇತರ ವಸ್ತುಗಳು ಪತ್ತೆಯಾಗಿದ್ದವು. ಬಳಿಕ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳು ಆ ಪರಿಸರದಲ್ಲಿ ತಮ್ಮ ಹುಟುಕಾಟ ತೀವ್ರಗೊಳಿಸಿದ್ದವು. ”ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು. ಸಹಪಾಠಿಗಳು, ಶಿಕ್ಷಕರು, ಪೋಷಕರ ಬಳಿಯಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಪ್ರಕರಣ

ಇದರ ಜತೆಗೆ ಕೋಟಾದಲ್ಲಿ ಇನ್ನೋರ್ವ ವಿದ್ಯಾರ್ಥಿಯ ನಾಪತ್ತೆ ಪ್ರಕರಣವೂ ಆತಂಕ ಸೃಷ್ಟಿಸಿದೆ. ಉತ್ತರ ಪ್ರದೇಶದ ವಿದ್ಯಾರ್ಥಿ ಪಿಯೂಷ್ ಕಪಾಸಿಯಾ ಕಳೆದ ವಾರದಿಂದ ನಾಪತ್ತೆಯಾಗಿದ್ದಾರೆ. ಜೆಇಇ ಆಕಾಂಕ್ಷಿಯಾಗಿದ್ದ ಪಿಯೂಷ್ ಕಪಾಸಿಯಾ ಕೂಡ ಫೆಬ್ರವರಿ 13ರಂದು ಕಣ್ಮರೆಯಾಗಿದ್ದಾರೆ. ಅವರು ಎರಡು ವರ್ಷಗಳಿಂದ ಕೋಟಾದ ಇಂದ್ರ ವಿಹಾರ್‌ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ: Self Harming: ಪಪ್ಪಾ… ನಾನು ಲೂಸರ್, ಕೆಟ್ಟ ಮಗಳು! ಕೋಟಾದಲ್ಲಿ 18 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

ʼʼಪಿಯೂಷ್ ಫೆಬ್ರವರಿ 13ರಂದು ಬೆಳಗ್ಗೆ ತನ್ನ ತಾಯಿಯೊಂದಿಗೆ ಕೊನೆಯದಾಗಿ ಮಾತನಾಡಿದ್ದ. ನಂತರ ಆತ ಯಾವುದೇ ಕರೆಗಳನ್ನು ಸ್ವೀಕರಿಸಲಿಲ್ಲʼʼ ಎಂದು ಬಾಲಕನ ತಂದೆ ಹೇಳಿದ್ದಾರೆ. ಹೀಗಾಗಿ ನಾಪತ್ತೆ ದೂರು ದಾಖಲಾಗಿದ್ದು, ಕಪಾಸಿಯಾ ಅವರನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ಕೋಟಾ ಕೋಚಿಂಗ್ ಸೆಂಟರ್‌ಗಳ ಕೇಂದ್ರವಾಗಿದ್ದು ದೇಶದಾದ್ಯಂತದ ವಿದ್ಯಾರ್ಥಿಗಳು ಅಧ್ಯಯನ ನಡೆಸಲು ಇಲ್ಲಿಗೆ ಆಗಮಿಸುತ್ತಾರೆ. ಪ್ರತಿ ವರ್ಷ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಅಧ್ಯಯನ ಮಾಡಲು ನಗರಕ್ಕೆ ಭೇಟಿ ನೀಡುತ್ತಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ. ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Exit mobile version