Site icon Vistara News

Crime News: ಇನ್ಶೂರೆನ್ಸ್‌ ಹಣಕ್ಕಾಗಿ ಗೆಳೆಯನನ್ನೇ ಕೊಂದ ಪಾಪಿಯನ್ನು ಪತ್ತೆ ಹಚ್ಚಿದ್ದು ಫೋನ್‌ ಕರೆ

crime news

crime news

ಚೆನ್ನೈ: ಕೆಲವು ದಿನಗಳ ಹಿಂದೆ ಜೀವ ವಿಮೆಯ ಹಣ (Insurance money) ಪಡೆಯಲು ಭಿಕ್ಷುಕನನ್ನು ಕೊಂದ ಪ್ರಕರಣದಲ್ಲಿ ಸುಮಾರು 17 ವರ್ಷಗಳ ಬಳಿಕ ಆರೋಪಿಯನ್ನು ಗುಜರಾತ್‌ನ ಅಹಮದಾಬಾದ್‌ನ ನಿಕೋಲ್‌ ಏರಿಯಾದಲ್ಲಿ ಬಂಧಿಸಲಾಗಿತ್ತು. ಇದೀಗ ಅದೇ ಮಾದರಿಯ ಘಟನೆಯೊಂದು ತಮಿಳುನಾಡಿನಲ್ಲಿ ವರದಿಯಾಗಿದೆ. 1 ಕೋಟಿ ರೂ.ಯ ವಿಮೆ ಹಣಕ್ಕಾಗಿ ಗೆಳೆಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ (Crime News).

ಘಟನೆಯ ವಿವರ

2023ರ ಸೆಪ್ಟಂಬರ್‌ 16ರಂದು ದಕ್ಷಿಣ ಚೆನ್ನೈಯ ಚೆಂಗಲ್‌ಪೇಟೆ ಬಳಿಯ ಅಲ್ಲನೂರ್ ಗ್ರಾಮದಲ್ಲಿ ಗುಡಿಸಲೊಂದಕ್ಕೆ ಬೆಂಕಿ ಹತ್ತಿಕೊಂಡಿತ್ತು. ಘಟನೆಯ ಬಳಿಕ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಇದು ದೈಹಿಕ ತರಬೇತುದಾರ ಸುರೇಶ್ ಆರ್. (38) ಶವ ಎಂದು ಅವರ ತಾಯಿ ಗುರುತಿಸಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಸುರೇಶ್‌ ಚೆನ್ನೈಯಿಂದ ತಮ್ಮ ಊರಾದ ಅಲ್ಲನೂರ್‌ಗೆ ತೆರಳಿದ್ದರು ಎಂದು ಅವರ ತಾಯಿ ತಿಳಿಸಿದ್ದರು.

ಇನ್ನೇನು ಈ ಪ್ರಕರಣವನ್ನು ಜನರು ಮರೆಯತೊಡಗಿದರು ಎನ್ನುವಷ್ಟರಲ್ಲಿ ಬಹುದೊಡ್ಡ ಟ್ವಿಸ್ಟ್‌ ಎದುರಾಗಿತ್ತು. ಬೆಂಕಿ ಅಪಘಾತ ಎಂದು ಮೇಲ್ನೋಟಕ್ಕೆ ತೋರುತ್ತಿದ್ದ ಈ ಪ್ರಕರಣವು ಡಿಸೆಂಬರ್ ಅಂತ್ಯದ ವೇಳೆಗೆ ಆಘಾತಕಾರಿ ತಿರುವು ಪಡೆದುಕೊಂಡಿತು. ಮೃತಪಟ್ಟಿದ್ದಾನೆ ಎಂದು ಭಾವಿಸಲಾಗಿದ್ದ ಸುರೇಶ್ ಜೀವಂತವಾಗಿದ್ದಾನೆ ಎನ್ನುವುದು ಗೊತ್ತಾಗುವುದರೊಂದಿಗೆ ಮರೆತೇ ಹೋಗಬಹುದಾಗಿದ್ದ ಪ್ರಕರಣಕ್ಕೆ ಮತ್ತೆ ಜೀವ ಬಂತು. ಪಾಲಿಟೆಕ್ನಿಕ್ ಪದವೀಧರ ಸುರೇಶ್ ಜನ ವಿರಳ ಪ್ರದೇಶದಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ಸುಟ್ಟು ಕರಕಲಾಗಿದ್ದು ಯಾರ ದೇಹ?

ಹಾಗಾದರೆ ಗುಡಿಸಲಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು ಯಾರ ದೇಹ ಎನ್ನುವ ಸಂದೇಹ ಪೊಲೀಸರನ್ನು ಕಾಡ ತೊಡಗಿತು. ಇದರ ಜಾಡು ಹಿಡಿದು ಹೊರಟ ಪೊಲೀಸರ ಮುಂದೆ ಒಂದೊಂದೆ ರಹಸ್ಯಗಳು ಅನಾವರಣಗೊಳ್ಳತೊಡಗಿದವು. ಸುರೇಶ್ ಸ್ನೇಹಿತ ದೆಹಲಿ ಬಾಬು (39) ಬೆಂಕಿ ಆಕಸ್ಮಿಕ ಘಟನೆಯ ಒಂದು ವಾರದ ಮೊದಲು ನಾಪತ್ತೆಯಾಗಿರುವುದು ಪತ್ತೆಯಾಗಿತ್ತು. ಸೆಪ್ಟಂಬರ್‌ 23ರಂದು ಚೆನ್ನೈಯ ಎನ್ನೋರ್ ಪೊಲೀಸ್ ಠಾಣೆಯಲ್ಲಿ ಬಾಬು ಅವರ ಕುಟುಂಬವು ಬಾಬು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿತ್ತು.

ನಾಪತ್ತೆ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಕಾರಣ ಬಾಬು ಅವರ ಕುಟುಂಬವು ಆವಡಿ ನಗರ ಪೊಲೀಸ್ ಕಮಿಷನರೇಟ್‌ನಲ್ಲಿ ಮತ್ತೆ ಹೊಸ ದೂರು ದಾಖಲಿಸಿತ್ತು ಮತ್ತು ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತು. ವಾರಗಳ ನಂತರ ಪೊಲೀಸರು ಬಾಬು ಅವರ ಹಿರಿಯ ಸಹೋದರ ಪಳನಿಯನ್ನು ಪ್ರಶ್ನಿಸಿದಾಗ ಮಹತ್ವದ ಸುಳಿವೊಂದು ಲಭಿಸಿತ್ತು. “ಸುರೇಶ್ ಆಗಾಗ್ಗೆ ತಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ಬಾಬು ಮತ್ತು ಸುರೇಶ್ ಜತೆಗೆ ವಾಸಿಸುತ್ತಿದ್ದರು ಎಂದು ಪಳನಿ ತಿಳಿಸಿದ್ದರು. ಬೆಂಕಿ ಅವಘಡದ ದಿನ ಬಾಬು ಅವರ ಫೋನ್ ಸುರೇಶ್ ವಾಸಿಸುತ್ತಿದ್ದ ಗುಡಿಸಲಿನ ಬಳಿ ಇತ್ತು ಎನ್ನುವುದು ತನಿಖೆ ವೇಳೆ ಕಂಡು ಬಂತುʼʼ ಎಂದು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಆರ್. ಶಿವಕುಮಾರ್ ಹೇಳಿದ್ದಾರೆ. ಘಟನೆಯ ವೇಳೆ ಸುರೇಶ್ ಮತ್ತು ಇತರರನ್ನು ಗುಡಿಸಲಿನ ಆಸುಪಾಸಿನಲ್ಲಿ ನೋಡಿದ್ದೆ ಎಂದು ಮಹಿಳೆಯೊಬ್ಬರು ನೀಡಿದ್ದ ಹೇಳಿಕೆ ಮಹತ್ವದ ಸಾಕ್ಷಿ ಒದಗಿಸಿತ್ತು.

“ತನಿಖೆ ಮುಂದುವರಿಯುತ್ತಿದ್ದ ಹಾಗೆ ಇನ್ನೂ ಹಲವು ಶಂಕಿತ ವ್ಯಕ್ತಿಗಳ ಪತ್ತೆಯಾಗಿತ್ತು. ಸುರೇಶ್ ಅವರ ನಿಕಟವರ್ತಿ ಹರಿಕೃಷ್ಣನ್ ಎಂಬ ವ್ಯಕ್ತಿಯ ಬಗ್ಗೆ ಅನುಮಾನ ಮೂಡಿತು. ವೆಲ್ಲೂರಿನ ಹರಿಕೃಷ್ಣನ್‌ನ ಮನೆಗೆ ತೆರಳಿದಾಗ, ಆತ ಹಲವು ವಾರಗಳಿಂದ ಬಂದಿಲ್ಲ ಎಂದು ತಂದೆ ತಿಳಿಸಿದರು. ಹರಿಕೃಷ್ಣನ್ ಕರೆ ಮಾಡುತ್ತಿದ್ದ ಫೋನ್ ನಂಬರ್‌ ಅನ್ನು ಅವರು ನೀಡಿದರು. ಆ ಫೋನ್‌ ನಂಬರ್‌ನ ಜಾಡು ಹಿಡಿದು ವೆಲ್ಲೂರು ಬಳಿಯ ಅರಕ್ಕೋಣಂಗೆ ತೆರಳಿದಾಗ ಅಲ್ಲಿ ಹರಿಕೃಷ್ಣನ್ ಜತೆಗೆ ಸುರೇಶ್ ಇರುವುದೂ ಕಂಡು ಬಂತುʼʼ ಎಂದು ಶಿವಕುಮಾರ್ ವಿವರಿಸಿದ್ದಾರೆ.

ಸತ್ಯ ಬಾಯಿ ಬಿಟ್ಟ ಆರೋಪಿ

ವಿಚಾರಣೆ ವೇಳೆ ಸುರೇಶ್ ತನ್ನ ಪೈಶಾಚಿಕ ಕೃತ್ಯವನ್ನು ಒಂದೊಂದಾಗಿ ಒಪ್ಪಿಕೊಂಡಿದ್ದಾನೆ. 1 ಕೋಟಿ ರೂ.ಗಳ ಇನ್ಶೂರೆನ್ಸ್‌ ಹಣವನ್ನು ಪಡೆಯಲು ಬಾಬುವನ್ನು ಕೊಂದಿರುವ ವಿಷಯ ಬಾಯ್ಬಿಟ್ಟಿದ್ದಾನೆ. ಸುರೇಶ್ ಎರಡು ವರ್ಷಗಳಲ್ಲಿ 50,000 ರೂ.ಗಿಂತ ಹೆಚ್ಚು ವಿಮಾ ಪ್ರೀಮಿಯಂ ಪಾವತಿಸಿದ್ದ. ಆಗಲೇ ಹಣವನ್ನು ಮರಳಿ ಪಡೆಯಲು ತಂತ್ರ ರೂಪಿಸಿದ್ದ ಆತ ಮೊದಲು ಸರ್ಕಾರಿ ಆಸ್ಪತ್ರೆಯಿಂದ ಶವವನ್ನು ಪಡೆದು ತನ್ನ ಸಾವಿನ ನಾಟಕ ನಡೆಸಲು ತೀರ್ಮಾನಿಸಿದ್ದ. ಆದರೆ ಬಳಿಕ ತನ್ನ ಯೋಜನೆಯನ್ನು ಬದಲಾಯಿಸಿದ್ದ.

ಹರಿಕೃಷ್ಣನ್ ಮತ್ತು ಬಾಬು ಸೆಪ್ಟಂಬರ್‌ 9ರಂದು ಅಲ್ಲನೂರು ಗ್ರಾಮದ ಸುರೇಶ್ ಮನೆಗೆ ಬಂದಿದ್ದರು. ಜತೆಗೆ ಸ್ಥಳೀಯ ಯುವಕ ಕೀರ್ತಿ ರಾಜನ್ (23) ಕೂಡ ಇದ್ದ. ಸೆಪ್ಟೆಂಬರ್ 13ರಂದು ಬಾಬು ಇಲ್ಲದ ವೇಳೆ ಸುರೇಶ್ ತನ್ನ ಯೋಜನೆಯನ್ನು ಹರಿಕೃಷ್ಣನ್ ಮತ್ತು ರಾಜನ್ ಬಳಿ ಹಂಚಿಕೊಂಡಿದ್ದ. ಅದರಂತೆ ಸೆಪ್ಟೆಂಬರ್ 15ರಂದು ಕುಡಿದ ಮತ್ತಿನಲ್ಲಿದ್ದ ಬಾಬು ಅವರನ್ನು ಜನರೇಟರ್ ದಾರದಿಂದ ಕತ್ತು ಹಿಸುಕಿ ಕೊಲೆ ಮಾಡಲಾಯಿತು. ಬಳಿಕ ಬಾಬು ಅವರ ದೇಹವನ್ನು ಗುಡಿಸಲಿನ ಒಳಗೆ ಇಟ್ಟು ಆರೋಪಿಗಳು ಬೆಂಕಿ ಹಚ್ಚಿದರು. ನಂತರ ಬೆಂಕಿ ಆಕಸ್ಮಿಕದಿಂದ ಸುರೇಶ್‌ ಮೃತಪಟ್ಟಿದ್ದಾನೆ ಎಂದು ಬಿಂಬಿಸಲಾಯಿತು. ಸದ್ಯ ರಾಜನ್‌ ಕೂಡ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: Crime News: ಇನ್ಶೂರೆನ್ಸ್‌ ಹಣಕ್ಕಾಗಿ ಭಿಕ್ಷುಕನನ್ನು ಕೊಂದವ 17 ವರ್ಷದ ಬಳಿಕ ಸಿಕ್ಕಿಬಿದ್ದಿದ್ದು ಹೇಗೆ?

Exit mobile version