ನವದೆಹಲಿ: ದೆಹಲಿಯ ಶಾಲೆಯೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ಎಂಟನೇ ತರಗತಿಯ ಬಾಲಕ ವಿರುದ್ಧ ಸಹಪಾಠಿಗಳು ಕ್ರೂರವಾಗಿ ನಡೆದುಕೊಂಡಿದ್ದು, ಆತನ ಖಾಸಗಿ ಅಂಗಕ್ಕೆ ಮರದ ಕೋಲನ್ನು ತೂರಿಸಿ ವಿಕೃತಿ ಮರೆದಿದ್ದಾರೆ. ಮಾರ್ಚ್ 18ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾಲಾಪರಾಧಿಯನ್ನು ಬಂಧಿಸಲಾಗಿದೆ (Crime News).
14 ವರ್ಷದ ಈ ಸಂತ್ರಸ್ತ ಬಾಲಕ ಮತ್ತು ಇತರ ನಾಲ್ವರು ವಿದ್ಯಾರ್ಥಿಗಳ ನಡುವೆ ಯಾವುದೋ ಕಾರಣಕ್ಕೆ ಜಗಳ ನಡೆದಿದೆ. ಬಳಿಕ ನಾಲ್ವರು ಸೇರಿ ಈ ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯನ್ನು ಯಾರಿಗೂ, ಅದೇ ಶಾಲೆಯಲ್ಲಿ ಓದುತ್ತಿರುವ ತನ್ನ ಸಹೋದರಿಗೂ ತಿಳಿಸದಂತೆ ಹಲ್ಲೆ ನಡೆಸಿದ ಸಹಪಾಠಿಗಳು ಬೆದರಿಕೆ ಹಾಕಿದ್ದರು ಎಂದು ಬಾಲಕ ಹೇಳಿದ್ದಾನೆ.
ಘಟನೆ ವಿವರ
ಬಾಲಕ ಮತ್ತು ಸಹಪಾಠಿಗಳ ನಡುವೆ ಮಾರ್ಚ್ 13ರಂದು ಜಗಳ ನಡೆದಿತ್ತು. ಮಾರ್ಚ್ 18ರಂದು ಆರೋಪಿಗಳು ಹಲ್ಲೆ ನಡೆಸಿದ್ದರು. ಮಾರ್ಚ್ 20ರಂದು ಬಾಲಕನಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವೈದ್ಯರ ಬಳಿಗೆ ಕರೆದೊಯ್ಯಲಾಗಿತ್ತು. ಆದರೂ ಆತನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರಲಿಲ್ಲ. ಬಳಿಕ ಮತ್ತೆ ಮಾರ್ಚ್ 28ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ವೇಳೆ ವೈದ್ಯರು ಹುಡುಗನ ಕುಟುಂಬಕ್ಕೆ ಆತನ ಮೇಲೆ ಹಲ್ಲೆ ನಡೆದಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.
ಏಪ್ರಿಲ್ 2ರಂದು ಚೇತರಿಸಿಕೊಂಡ ಬಾಲಕ ಘಟನೆಯನ್ನು ವಿವರಿಸಿದ್ದನು. ನಂತರ ಪೊಲೀಸರಿಗೆ ದೂರು ನೀಡಲಾಯಿತು. ವೈದ್ಯಕೀಯ ವರದಿಯು ಬಾಲಕನ ಗುದ ದ್ವಾರಕ್ಕೆ ಮರದ ಕೋಲನ್ನು ತೂರಿಸಿದ್ದರಿಂದ ಗಂಭೀರ ಗಾಯವಾಗಿದೆ ಎಂದು ತಿಳಿಸಿದೆ. “ಸಹಪಾಠಿಯೊಬ್ಬ ಗುದಕ್ಕೆ ಮರದ ಕೋಲನ್ನು ತೂರಿಸಿದ ಘಟನೆಯ ಬಗ್ಗೆ ವಿದ್ಯಾರ್ಥಿ ಹೇಳಿಕೊಂಡಿದ್ದಾನೆ. ಘಟನೆಯನ್ನು ಯಾರಿಗೂ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದರಿಂದ ಇದುವರೆಗೆ ಆತ ಈ ವಿಷಯವನ್ನು ಬಾಯಿ ಬಿಟ್ಟಿರಲಿಲ್ಲʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 323 (ಸ್ವಯಂ ಪ್ರೇರಿತವಾಗಿ ನೋವುಂಟು ಮಾಡುವುದು), 341, 34 ಮತ್ತು 377 (ಅಸ್ವಾಭಾವಿಕ ಅಪರಾಧಗಳು), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 6 ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಮಾತು ಬಾರದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಗುದ ದ್ವಾರಕ್ಕೆ ಪೆನ್ ತುರುಕಿಸಿ ವಿಕೃತಿ ಮೆರೆದ ಸಂಬಂಧಿಕರು
ಕೆಲವು ದಿನಗಳ ಹಿಂದೆ ಇದೇ ಮಾದರಿಯ ಘಟನೆ ಉತ್ತರ ಪ್ರದೇಶಲ್ಲಿ ನಡೆದಿತ್ತು. ಉತ್ತರ ಪ್ರದೇಶದ ಆಗ್ರಾದಲ್ಲಿ ಮಾತು ಬಾರದ ಮತ್ತು ಶ್ರವಣದೋಷವುಳ್ಳ ಅಪ್ರಾಪ್ತ ಬಾಲಕನ ಮೇಲೆ ಸಂಬಂಧಿಕರು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಜತೆಗೆ ಆತನ ಗುದ ದ್ವಾರಕ್ಕೆ ಪೆನ್ ತುರುಕಿಸಿ ವಿಕೃತಿ ಮೆರೆದಿದ್ದರು. ಇದರಿಂದ ಸುಮಾರು ಮೂರು ವಾರಗಳ ಕಾಲ ಬಾಲಕ ನೋವು ಅನುಭವಿಸಿದ್ದು, ಕೊನೆಗೂ ಗುದ ದ್ವಾರದಿಂದ ಪೆನ್ ಹೊರಕ್ಕೆ ತೆಗೆಯಲಾಗಿತ್ತು. ಬಾಯಿ ಬಾರದ ಹಿನ್ನೆಲೆಯಲ್ಲಿ ಈ 16 ವರ್ಷದ ಬಾಲಕನಿಗೆ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಮನೆಯವರ ಬಳಿ ಹೇಳಲು ಸಾಧ್ಯವಾಗಿರಲಿಲ್ಲ. ಕೊನೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಬಳಿಕ ವಿಷಯ ಬಹಿರಂಗಗೊಂಡಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ