ಲಖನೌ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೈದ್ಯರೊಬ್ಬರು ಪತ್ನಿ, ತನ್ನಿಬ್ಬರು ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ರಾಯ್‌ಬರೇಲಿ (Rae Bareli) ರೈಲ್ವೇ ಕಾಲೊನಿಯಲ್ಲಿ ನಡೆದಿದೆ. ರೈಲ್ವೆಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನೇತ್ರ ತಜ್ಞ, 45 ವರ್ಷದ ಡಾ. ಅರುಣ್ ಕುಮಾರ್ ಈ ಕೃತ್ಯ ಎಸಗಿದ್ದಾರೆ. ಅವರನ್ನು ರಾಯ್ ಬರೇಲಿಯ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ನಿಯೋಜಿಸಲಾಗಿತ್ತು. ಡಾ. ಅರುಣ್ ಕುಮಾರ್ ಡಿಪ್ರೆಶನ್‌ನಿಂದ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ (Crime News).
ಮಿರ್ಜಾಪುರದ ನಿವಾಸಿಯಾಗಿರುವ ಡಾ. ಅರುಣ್ ಕುಮಾರ್ ರೈಲ್ವೇಸ್ ಕ್ವಾಟರ್ಸ್‌ನಲ್ಲಿ ಪತಿ, ಮಕ್ಕಳೊಂದಿಗೆ ವಾಸವಾಗಿದ್ದರು. ಭಾನುವಾರ ಡಾ. ಅರುಣ್ ಕುಮಾರ್ ಅವರನ್ನು ಸಹೋದ್ಯೋಗಿಗಳು ಕೊನೆಯ ಬಾರಿ ಮಾತನಾಡಿಸಿದ್ದರು. ಅದಾಗಿ ಎರಡು ದಿನಗಳಿಂದ ಅವರ ಪತ್ತೆ ಇರಲಿಲ್ಲ. ಹೀಗಾಗಿ ಅನುಮಾನಗೊಂಡು ಅವರ ಮನೆಗೆ ತೆರಳಿದ್ದರು. ಮನೆಯ ಬೆಲ್ ಮಾಡಿದಾಗ ಯಾರೂ ಬಾಗಿಲು ತೆರೆಯಲಿಲ್ಲ. ಕೊನೆಗೆ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಸಾಮೂಹಿಕ ಕೊಲೆಯ ಪ್ರಕರಣ ಬಯಲಾಗಿದೆ. ಡಾ. ಅರುಣ್ ಕುಮಾರ್, ಪತ್ನಿ ಅರ್ಚನಾ, ಪುತ್ರಿ ಆದಿವಾ (12) ಮತ್ತು ಪುತ್ರ ಆರವ್ (12) ಮೃತದೇಹ ಕಂಡು ಬಂದಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮನೆಯೊಳಗೆ ರಕ್ತಸಿಕ್ತವಾದ ಸುತ್ತಿಗೆ ಮತ್ತು ರಾಸಾಯನಿಕ ತುಂಬಿದ ಇಂಜೆಕ್ಷನ್ ಕಂಡು ಬಂದಿದೆ. ಡಾ. ಅರುಣ್ ಕುಮಾರ್ ಮೊದಲು ಮಕ್ಕಳು ಮತ್ತು ಪತ್ನಿಗೆ ಇಂಜೆಕ್ಷನ್ ಚುಚ್ಚಿ ಪ್ರಜ್ಞೆ ತಪ್ಪಿಸಿ ಬಳಿಕ ಅವರ ತಲೆಗೆ ಸುತ್ತಿಗೆಯಿಂದ ಬಡಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಾ. ಅರುಣ್ ಕುಮಾರ್ ಕೈ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು. ಅದು ಸಾಧ್ಯವಾಗದಿದ್ದಾಗ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ʼʼಮೇಲ್ನೋಟಕ್ಕೆ ಈ ರೀತಿಯ ಸಾಧ್ಯತೆ ಕಂಡು ಬಂದಿದೆ. ಪೋಸ್ಟ್ ಮಾರ್ಟಮ್ ಬಳಿಕ ಇನ್ನೂ ಹೆಚ್ಚಿನ ವಿವರ ತಿಳಿದು ಬರಲಿದೆʼʼ ಎಂದು ರಾಯ್ ಬರೇಲಿಯ ಎಸ್.ಪಿ. ಅಲೋಕ್ ಪ್ರಿಯದರ್ಶನ್ ತಿಳಿಸಿದ್ದಾರೆ.
ಇದನ್ನೂ ಓದಿ: Cyber crime : ಹೈಕೋರ್ಟ್ ಲೈವ್ ಸ್ಟ್ರೀಮಿಂಗ್‌ನಲ್ಲಿ ಹರಿದಾಡಿದ ಅಶ್ಲೀಲ ದೃಶ್ಯ!
“ವೈದ್ಯರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಅವರ ಸ್ನೇಹಿತರು, ಕುಟುಂಬ, ಸಹೋದ್ಯೋಗಿಗಳು ಮತ್ತು ಪರಿಚಿತರಿಂದ ಹೇಳಿಕೆಗಳನ್ನು ಸಂಗ್ರಹಿಸುತ್ತಿದ್ದೇವೆʼʼ ಎಂದು ಅಲೋಕ್ ಪ್ರಿಯದರ್ಶನ್ ಹೇಳಿದ್ದಾರೆ.
ನೆರೆ ಮನೆಯವರು ಹೇಳಿದ್ದೇನು?
ನೆರೆಮನೆಯ ಕಮಲ್ ಕುಮಾರ್ ದಾಸ್ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ʼʼಡಾ. ಅರುಣ್ ಕುಮಾರ್ ರೋಗಿಗಳು ಮತ್ತು ಇತರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಕುಟುಂಬದೊಳಗಿನ ಸಮಸ್ಯೆಯಿಂದ ಡಾ. ಅರುಣ್ ಕುಮಾರ್ ಇಂತಹ ಕೃತ್ಯ ಎಸಗಿರುವ ಸಾಧ್ಯತೆ ಇದೆʼʼ ಎಂದು ಅವರು ಊಹಿಸಿದ್ದಾರೆ. ಇನ್ನು ಕೆಲವರು ಡಾ. ಅರುಣ್ ಕುಮಾರ್ ಸದಾ ಜಗಳವಾಡುತ್ತಿದ್ದರು ಎಂದು ತಿಳಿಸಿದ್ದಾರೆ. ʼʼನೆರೆ ಮನೆಯವರು, ಸಂಬಂಧಿಕರ ಹೇಳಿಕೆ ಪಡೆದು, ಎಲ್ಲ ಕೋನಗಳಿಂದ ತನಿಖೆ ನಡೆಸಲಾಗುವುದುʼʼ ಲಕ್ನೋ ವಲಯ ಐಜಿ ತರುಣ್ ಗೌಬಾ ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ