ಬೆಂಗಳೂರು: ಗಾಂಜಾ ನಶೆಯಲ್ಲಿ ನಗರದಲ್ಲಿ ಮತ್ತೆ ಪುಂಡರು ತಮ್ಮ ಕುಕೃತ್ಯವನ್ನು ಮುಂದುವರೆಸಿದ್ದಾರೆ. ಕೊತ್ತನೂರಿನಲ್ಲಿ ನಡೆದ ಖೊಖೊ ಟೂರ್ನಮೆಂಟ್ ವೇಳೆ ವಿಕೆಟ್, ಡ್ರ್ಯಾಗರ್ ಝಳಪಿಸಿದ್ದು, ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಸರಿಯಾಗಿ ತೀರ್ಪು ಕೊಟ್ಟಿಲ್ಲ ಎಂದು ತಕರಾರು ಎತ್ತಿದ ಪುಂಡರು ಡ್ರ್ಯಾಗರ್, ವಿಕೆಟ್ ಹಿಡಿದು ತೀರ್ಪುಗಾರರು ಬೆದರಿಸಿದ್ದಾರೆ. ಸದ್ಯ ಈ ಸಂಬಂಧ ಕೊತ್ತನೂರು ಪೊಲೀಸರು ಸುದೀಪ್ ಹಾಗೂ ಪವನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ (Crime News).
ಕೊತ್ತನೂರು ಬಳಿ ಇರುವ ಬಿಳಿ ಶಿವಾಲಯ ಸರ್ಕಾರಿ ಪ್ರೌಢಶಾಲೆಯ ಮೈದಾನಕ್ಕೆ ಸಿನಿಮಾ ಶೈಲಿಯಲ್ಲಿ ನುಗ್ಗಿದ್ದ ಆರೋಪಿಗಳು ಸದ್ಯ ಪೊಲೀಸ್ ಠಾಣೆಯ ಸೆಲ್‌ನ ಹಿಂದೆ ಕಂಬಿ ಎಣಿಸುತ್ತಿದ್ದಾರೆ.
ಘಟನೆ ಹಿನ್ನೆಲೆ
ಕೊತ್ತನೂರು ಬಳಿ ಇರುವ ಬಿಳಿ ಶಿವಾಲಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಘಟನೆ ಇದು. ಮಂಗಳವಾರ ಸೊಣ್ಣಪ್ಪನಹಳ್ಳಿ ಶಾಲಾ ಬಾಲಕರ ಜತೆ ಇಲ್ಲಿನ ಶಾಲೆಯ ವಿದ್ಯಾರ್ಥಿಗಳ ಖೊಖೊ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ತೀರ್ಪುಗಾರರು ತಪ್ಪು ತೀರ್ಪು ನೀಡಿದ್ದಾರೆ ಎಂದು ಸೊಣ್ಣಪ್ಪನಹಳ್ಳಿಯ ವಿದ್ಯಾರ್ಥಿಗಳು ಆರೋಪಿಸಿದರು. ಈ ವೇಳೆ ಡ್ರ್ಯಾಗರ್, ವಿಕೇಟ್ ಹಾಗೂ ಚಾಕು ಹೊರ ಬಂದಿದೆ.
ಬಿಳೆಶಿವಾಲಯ ಗ್ರಾಮದ ನಿವಾಸಿಗಳು ಬಹುತೇಕ ಹಳ್ಳಿಗರು. ಹೀಗಾಗಿ ಯಾವುದೇ ಪಂದ್ಯಾವಳಿ, ಕಾರ್ಯಕ್ರಮ ನಡೆಯಲಿ ಗ್ರಾಮದ ಪ್ರತಿಷ್ಠೆ ಎಂಬಂತೆ ನೋಡುತ್ತಾರೆ. ಎರಡೂ ಗ್ರಾಮಗಳ ಹುಡುಗರ ನಡುವೆ ಆಯೋಜಿಸಿದ್ದ ಖೊಖೊ ಪಂದ್ಯಾವಳಿಯೂ ಇದಕ್ಕೆ ಹೊರತಾಗಿರಲಿಲ್ಲ. ಈ ವೇಳೆ ತೀರ್ಪುಗಾರರು ತಪ್ಪು ತೀರ್ಪು ನೀಡಿದ್ದಾರೆಂದು ಹೇಳಿ ಕಿರಿಕ್ ಆರಂಭವಾಗಿತ್ತು.
ಈ ವೇಳೆ ಪವನ್, ಸುದೀಪ್ ಹಾಗೂ ಇತರರೂ ಏಕಾಏಕಿ ತೀರ್ಪುಗಾರರ ಮೇಲೆ ಮುಗಿ ಬಿದ್ದಿದ್ದರು. ಪಂದ್ಯದ ವೇಳೆ ಇವೆಲ್ಲ ಮಾಮೂಲಿ ಎಂದುಕೊಂಡು ಹಲವರು ಸುಮ್ಮನಾಗಿದ್ದರು. ಆದರೆ ಈ ಕಿರಿಕ್ ಅಷ್ಟಕ್ಕೆ ಮುಗಿಯಲಿಲ್ಲ. ಮತ್ತೆ ಕಿರಿಕ್ ಶುರುವಾಗಿತ್ತು. ಬಿಸಿ ಹೆಚ್ಚಾಗುತ್ತಿದ್ದಂತೆ ಚಾಕು, ಡ್ರ್ಯಾಗರ್, ವಿಕೆಟ್‌ಗಳು ಹೊರಬಿದ್ದವು. ಆಯುಧಗಳನ್ನು ಝಳಪಿಸಿ ಮಕ್ಕಳನ್ನೂ ಭಯಭೀತಗೊಳಿಸಿದರು. ಈ ವೇಳೆ ಪಂದ್ಯ ನೋಡಲು ಬಂದಿದ್ದ ಶಬ್ಬೀರ್ ಎಂಬಾತ ಸುಮ್ಮನಿರುವಂತೆ ಮನವಿ ಮಾಡಿದ್ದ. ಗಾಂಜಾ ಕಿಕ್‌ನಲ್ಲಿದ್ದ ಯುವಕರಿಗೆ ಇದು ಕಿರಿಕಿರಿ ಉಂಟು ಮಾಡಿತ್ತು. ಹೀಗಾಗಿ ಶಬ್ಬೀರ್‌ನ ತಲೆಗೆ ಚಾಕವಿನಿಂದ ಗುದ್ದಿ ಹಲ್ಲೆ ನಡೆಸಿದರು. ಈ ವೇಳೆ ಶಬ್ಬೀರ್‌ನ ಮೊಬೈಲ್ ಕೂಡ ಚೂರು ಚೂರಾಗಿದೆ. ಸದ್ಯ ಆರೋಪಿಗಳ ವಿರುದ್ಧ ಆರ್ಮ್ಸ್ ಆ್ಯಕ್ಟ್‌ನಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Self Harming : ಅನಾರೋಗ್ಯದಿಂದ ಬೇಸತ್ತು ಕ್ರಿಮಿನಾಶಕ ಸೇವಿಸಿ ದಂಪತಿ ಆತ್ಮಹತ್ಯೆ; ಸಾಲಗಾರರ ಕಾಟಕ್ಕೆ ಹೆದರಿ ವ್ಯಕ್ತಿ ನಾಪತ್ತೆ
ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ
ಉಡುಪಿ: ಜಿಲ್ಲೆಯ ಮಣಿಪಾಲ ಸಮೀಪದ ಹಿರಿಯಡ್ಕ ಬಳಿ ನೇಣು ಬಿಗಿದುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ. ಮನೆಯ ಉಪ್ಪರಿಗೆ ಮಾಡಿದ ಜಂತಿಗೆ ಚೂಡಿದಾರದ ಶಾಲು ಕಟ್ಟಿ ನೇಣಿಗೆ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಪೆರ್ಡೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಯನ (17) ಆತ್ಮಹತ್ಯೆಗೆ ಶರಣಾದವಳು. ವಿದ್ಯಾರ್ಥಿನಿ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.