Site icon Vistara News

ವರದಕ್ಷಿಣೆಯಾಗಿ 150 ಗ್ರಾಂ ಚಿನ್ನ, 15 ಎಕರೆ ಭೂಮಿ, ಬಿಎಂಡಬ್ಲ್ಯು ಕಾರಿಗೆ ಬೇಡಿಕೆ; ವೈದ್ಯೆ ಆತ್ಮಹತ್ಯೆ

shahana

shahana

ತಿರುವನಂತಪುರಂ: ವರದಕ್ಷಿಣೆ (Dowry demands) ವಿಚಾರಕ್ಕೆ ಮತ್ತೊಂದು ಸಾವು ಸಂಭವಿಸಿದೆ. ದುಬಾರಿ ಮೊತ್ತದ ವರದಕ್ಷಿಣೆಗೆ ಬೇಡಿಕೆ ಇಟ್ಟು ಪ್ರಿಯತಮ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದು ವೈದ್ಯೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ಸಂಭವಿಸಿದೆ. ತಿರುವನಂತಪುರಂನ 26 ವರ್ಷದ ಡಾ. ಶಹನಾ ಆತ್ಮಹತ್ಯೆ ಮಾಡಿಕೊಂಡವರು (Crime News).

ಡಾ. ಶಹನಾ ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು. ವರನ ಮನೆಯವರು ವರದಕ್ಷಿಣೆಯಾಗಿ 150 ಗ್ರಾಂ ಚಿನ್ನ, 15 ಎಕರೆ ಭೂಮಿ ಮತ್ತು ಬಿಎಂಡಬ್ಲ್ಯು ಕಾರಿಗೆ ಬೇಡಿಕೆ ಇಟ್ಟಿದ್ದರು. ಅಷ್ಟು ಕೊಡಲು ಸಾಧ್ಯವಿಲ್ಲ ಎಂದಾಗ ವರನ ಕಡೆಯವರು ಸಿಟ್ಟಿನಿಂದ ಮದುವೆ ರದ್ದು ಮಾಡಿದ್ದಾರೆ. ಇದರಿಂದ ಶಹನಾ ದಿಢೀರ್ ಖಿನ್ನತೆಗೆ ಒಳಗಾಗಿದ್ದರು. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತನಿಖೆಗೆ ಆದೇಶ

ಘಟನೆ ಕುರಿತು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆಘಾತ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವರದಕ್ಷಿಣೆ ಬೇಡಿಕೆ, ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಹಲವು ಪ್ರಕರಣ ದಾಖಲಿಸಲಾಗಿದೆ.

ಘಟನೆಯ ವಿವರ

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಡಾ. ಶಹನಾ ತನ್ನ ತಾಯಿ ಮತ್ತು ಇಬ್ಬರು ಒಡಹುಟ್ಟಿದವರೊಂದಿಗೆ ವಾಸಿಸುತ್ತಿದ್ದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಆಕೆಯ ತಂದೆ ಎರಡು ವರ್ಷಗಳ ಹಿಂದೆ ನಿಧನ ಹೊಂದಿದ್ದರು. ಡಾ. ಶಹನಾ ಮತ್ತು ಡಾ. ಇ.ಎ. ರುವೈಸ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಮದುವೆಯಾಗಲು ನಿರ್ಧರಿಸಿದ್ದರು. ಈ ಮಧ್ಯೆ ಡಾ. ರುವೈಸ್ ಕುಟುಂಬವು ವರದಕ್ಷಿಣೆಯಾಗಿ 150 ಗ್ರಾಂ. ಚಿನ್ನ, 15 ಎಕರೆ ಭೂಮಿ ಮತ್ತು ಬಿಎಂಡಬ್ಲ್ಯು ಕಾರಿಗೆ ಬೇಡಿಕೆ ಇಟ್ಟಿತ್ತು ಎಂದು ಶಹನಾ ಕುಟುಂಬಸ್ಥರು ಆರೋಪಿಸಿದ್ದಾರೆ. ಡಾ. ಶಹನಾ ಅವರ ಕುಟುಂಬವು ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಹೇಳಿದಾಗ ಮದುವೆಯನ್ನು ರದ್ದುಗೊಳಿಸಲಾಗಿತ್ತು ಎಂದು ಮೂಲಗಳು ವರದಿ ಮಾಡಿವೆ. ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾದ ಡೆತ್‌ನೋಟ್‌ನಲ್ಲಿ “ಎಲ್ಲರಿಗೂ ಹಣ ಮಾತ್ರ ಬೇಕು” ಎಂದು ಬರೆಯಲಾಗಿತ್ತು.

ಇದನ್ನೂ ಓದಿ: Crime News: ಖಿನ್ನತೆ, ಕೊಲೆ, ಆತ್ಮಹತ್ಯೆ; ವೈದ್ಯನ ಮನೆಯಲ್ಲಿ ನಡೆದಿದ್ದು ಬೆಚ್ಚಿ ಬೀಳಿಸುವ ಘಟನೆ!

ವರದಕ್ಷಿಣೆ ಬೇಡಿಕೆಯ ಆರೋಪದ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ. ರಾಜ್ಯ ಅಲ್ಪಸಂಖ್ಯಾತ ಆಯೋಗ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಸಮಿತಿಯ ಅಧ್ಯಕ್ಷ ಎ.ಎ.ರಶೀದ್ ಅವರು ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಡಿಸೆಂಬರ್ 14ರಂದು ಆಯೋಗದ ಮುಂದೆ ಹಾಜರಾಗಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪಿ.ಸತಿದೇವಿ ಅವರು ಡಾ. ಶಹನಾ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆಯೂ ಕೇರಳದಲ್ಲಿ ವರದಕ್ಷಿಣೆ ಕಿರುಕುಳ ಪ್ರಕಣಗಳು ವರದಿಯಾಗಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version