ಬೆಂಗಳೂರು: ಬೆಂಗಳೂರಿನಲ್ಲಿ ದಿನಕ್ಕೊಂದು ಹೊಸ ಹೊಸ ರೀತಿಯಲ್ಲಿ ಮೋಸ ಮಾಡುವ ದಂಧೆ ನಡೆಯುತ್ತಿದೆ. ಇದಕ್ಕೆ ಇನ್ನೊಂದು ಸೇರ್ಪಡೆ ಇದು. ರಮ್ಜಾನ್ ಕಿಟ್ ಕೊಡಿಸುವ ನೆಪದಲ್ಲಿ ದಂಪತಿಯನ್ನು ಮೋಸಗೊಳಿಸಿ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಖತರ್ನಾಕ್ ಕಳ್ಳ ಅಬ್ದುಲ್ಲಾ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ (Crime News).
ಇನ್ನೊಂದು ವಿಶೇಷ ಎಂದರೆ, ಜೈಲಿನಲ್ಲಿದ್ದ ಆರೋಪಿ ಅಬ್ದುಲ್ಲಾ ಬಿಡುಗಡೆಯಾದ ದಿನವೇ ಈ ಕೃತ್ಯ ಎಸಗಿದ್ದಾನೆ. ಈ ಹಿಂದೆ ಈತ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿ ರಾಬರಿ ಮಾಡಿ ಜೈಲು ಸೇರಿದ್ದ. ಕಳೆದ ತಿಂಗಳು 26ರಂದು ಜೈಲಿಂದ ಹೊರಗೆ ಬಂದಿದ್ದ ಆತ ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದ್ದ. ಮತ್ತೆ ಅದೇ ರೀತಿ ಜನರನ್ನು ದೋಚಲು ಪ್ಲಾನ್ ಮಾಡಿದ್ದ ಕಾರ್ಯ ಪ್ರವೃತ್ತನಾಗಿದ್ದ.
ಪ್ರಕರಣದ ಹಿನ್ನೆಲೆ
ಮಾರ್ಚ್ 26ರಂದು ರಮ್ಜಾನ್ ಕಿಟ್ ಕೊಡಿಸ್ತೀನಿ ಬನ್ನಿ ಎಂದು ರಶೀದ್ ಎಂಬವರನ್ನು ಅಬ್ದುಲ್ಲಾ ತನ್ನ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ. ಈತನ ಮಾತು ನಂಬಿದ್ದ ರಶೀದ್ ಆತನೊಂದಿಗೆ ತೆರಳಿದ್ದರು. ಹೊಸೂರು ರಸ್ತೆಯ ಆನೇಪಾಳ್ಯ ಮೋರಿ ಬಳಿ ಬರುತ್ತಿದ್ದಂತೆ ಅಬ್ದುಲ್ಲಾ ತನ್ನ ನಿಜ ಮುಖ ತೋರಿದ್ದ. ರಶೀದ್‌ಗೆ ಚಾಕು ತೋರಿಸಿ 5 ಸಾವಿರ ರೂ. ದೋಚಿ ಆತನನ್ನು ಅಲ್ಲೇ ಬಿಟ್ಟು ಬಂದಿದ್ದ.
ಬಳಿಕ ರಶೀದ್ ಪತ್ನಿ ಅಕಿಲಾ ಬಳಿ ಆಗಮಿಸಿ, ʼʼನಿಮ್ಮ ಗಂಡ ಕಿಟ್ ಪಡೆಯುತ್ತಿದ್ದಾರೆ. ಅವರಿಗೆ ಎಲ್ಲವನ್ನೂ ತೆಗೆದುಕೊಂಡು ಬರಲು ಆಗುವುದಿಲ್ಲ. ನೀವು ಕೂಡ ಬನ್ನಿʼʼ ಎಂದು ಅಕಿಲಾ ಬಳಿ ಬುರುಡೆ ಬಿಟ್ಟಿದ್ದ. ಇದನ್ನು ನಂಬಿ ಅಕಿಲಾ ಕೂಡ ಅಬ್ದುಲ್ಲಾ ಜತೆಗೆ ತೆರಳಿದ್ದರು. ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿದ ಅಬ್ದುಲ್ಲಾ ಚಾಕು ತೋರಿಸಿ, ಬೆದರಿಕೆ ಹಾಕಿ ಅಕಿಲಾ ಬಳಿಯಿದ್ದ 21 ಗ್ರಾಂ ಚಿನ್ನ, 4 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದ.
ಈ ಹಿನ್ನೆಲೆಯಲ್ಲಿ ದಂಪತಿ ಅಶೋಕ ನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಸದ್ಯ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ಲಾನನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Fraud Case : ಕೆಪಿಎಸ್‌ಸಿ ಸದಸ್ಯತ್ವ ಕೊಡಿಸುವುದಾಗಿ ಮಹಿಳೆಯಿಂದ 4 ಕೋಟಿ ರೂ. ಪೀಕಿದ ವಂಚಕರು