ಉಡುಪಿ: ಪತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಪತ್ನಿಯ ಕುತ್ತಿಗೆ ಕಡಿದು ಕೈಯಲ್ಲಿ ಕತ್ತಿ ಹಿಡಿದು ನರ್ತಿಸಿ ವಿಚಿತ್ರವಾಗಿ ವರ್ತಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ. ಸದ್ಯ ಗಂಭೀರ ಗಾಯಗೊಂಡಿರುವ ಪತ್ನಿಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ (Crime News).
ಮಾರಣಾಂತಿಕವಾಗಿ ಹಲ್ಲೆಗೊಳಗಾದವರನ್ನು ಅನಿತಾ (38) ಎಂದು ಗುರುತಿಸಲಾಗಿದೆ. ಅವರ ಪತಿ, ಆರೋಪಿ ಲಕ್ಷ್ಮಣ ಯಾನೆ ರಮೇಶ್‌ನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ವಿವರ
ಸೊರಬ ತಾಲೂಕು ಮೂಲದ ಲಕ್ಷ್ಮಣ ಮತ್ತು ಅನಿತಾ ದಂಪತಿ ನಾಲ್ಕು ತಿಂಗಳ ಹಿಂದಯಷ್ಟೆ ಉಡುಪಿ ಜಿಲ್ಲೆಗೆ ಆಗಮಿಸಿದ್ದರು. ಕಾಶಿಮಠದ ತೋಟ ನೋಡಿಕೊಳ್ಳಲು ಇಲ್ಲಿಗೆ ಬಂದಿದ್ದ ಇವರು ಬಸ್ರೂರು ಕಾಶಿ ಮಠ ಸಂಬಂಧಿಸಿದ ರೆಸಿಡೆನ್ಶಿಯಲ್ ಬ್ಲಾಕ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶನಿವಾರ ರಾತ್ರಿ ಕುಡಿದ ಮತ್ತಿನಲ್ಲಿದ್ದ ಲಕ್ಷ್ಮಣ ಪತ್ನಿಯ ಕುತ್ತಿಗೆ ಕಡಿದು ಮಾರಣಾಂತಿಕ ಗಾಯಗೊಳಿಸಿದ್ದ.
ಮನೆಯ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಅನಿತಾ ಬಿದ್ದಿದ್ದರೂ ಲಕ್ಷ್ಮಣ ಮನೆಯ ಬಾಗಿಲ ಚಿಲಕ ಹಾಕಿ ಹಾಲ್‌ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ನರ್ತಿಸುತ್ತಿದ್ದ . ಘಟನೆ ಅರಿವಿಗೆ ಬರುತ್ತಲೇ ಸ್ಥಳೀಯರು ಕಿಟಕಿ ಒಡೆದು ಅಡುಗೆ ಕೋಣೆಗೆ ತೆರಳಿ ಅನಿತಾ ಅವರನ್ನು ರಕ್ಷಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಇಷ್ಟಾದರೂ ಲಕ್ಷ್ಮಣ ಮೈಮೇಲೆ ದೈವ ಬಂದವರಂತೆ ಕೈಯಲ್ಲಿ ಕತ್ತಿ ಹಿಡಿದು ನರ್ತಿಸುತ್ತಲೇ ಇದ್ದ. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಡಬೇಕಾಯಿತು. ಮನೆಯೊಳಗೆ ಅಶ್ರುವಾಯು ಪ್ರಯೋಗಿಸಿ ಸುಮಾರು ಒಂದೂವರೆ ಗಂಟೆಯ ಬಳಿಕ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Namma Metro: ಮೆಟ್ರೋ ಹಳಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ; ಹಸಿರು ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ
ಕಾಡಿನಲ್ಲಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಕೋಲಾರ: ಕೋಲಾರ ತಾಲೂಕಿನ ಕೋಟಿಗಾನಹಳ್ಳಿ ಗೇಟ್ ಬಳಿಯ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ವೇಮಗಲ್ ಗ್ರಾಮದ ನಾಗೇಶ್ (34) ಎಂದು ಗುರುತಿಸಲಾಗಿದೆ. ಸ್ಥಳದಲ್ಲೇ ಮೃತ ವ್ಯಕ್ತಿಯ ಬೈಕ್ ಪತ್ತೆಯಾಗಿದ್ದು, ಕೊಲೆಗೈದು ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಕೋಲಾರ ಎಸ್‌ಪಿ ಬಿ.ನಿಖಿಲ್ ಭೇಟಿ ನೀಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಚಿಕ್ಕಬಳ್ಳಾಪುರದ ಸ್ಕಂಧಗಿರಿ ಬೆಟ್ಟದಲ್ಲಿ ಚಿರತೆ ಕಾಟ
ಚಿಕ್ಕಬಳ್ಳಾಪುರ: ಎಕೋ ಟೂರಿಸಂಗೆ ಜನಪ್ರಿಯವಾಗಿರುವ ಕಳವಾರ ಗ್ರಾಮದ ಬಳಿ ಇರುವ ಸ್ಕಂಧಗಿರಿ ಬೆಟ್ಟದಲ್ಲಿ ಚಿರತೆ ಕಾಟ ಆರಂಭವಾಗಿದ್ದು, ಸ್ಥಳೀಯರು, ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. ವೀಕೆಂಡ್ ಹಿನ್ನೆಲೆ ಟ್ರಕ್ಕಿಂಗ್ ಮಾಡಲು ಬಂದಿರುವ ಪ್ರವಾಸಿಗರಿಗೆ ಬೆಟ್ಟದ ತಪ್ಪಲಿನಲ್ಲಿ ಚಿರತೆಗೆ ಬಲಿಯಾಗಿರುವ ಹಸುವಿನ ಮೃತದೇಹ ಕಂಡುಬಂದಿದೆ. ಕಳವಾರ ಗ್ರಾಮದ ಮಧುಸೂದನ್ ಎಂಬವರಿಗೆ ಸೇರಿದ ಸೀಮೆಹಸು ಚಿರತೆಗೆ ಬಲಿಯಾಗಿದ್ದು, ಸ್ಕಂದಗಿರಿಗೆ ಬೆಳಿಗ್ಗೆ ಐದು ಗಂಟೆಗೆ ಆಗಮಿಸಿದ್ದ ಪ್ರವಾಸಿಗರು ಹಸುವಿನ ಕಳೇಬರ ಕಂಡು ಗಾಬರಿಗೊಳಗಾಗಿದ್ದಾರೆ. ಈ ಹಿಂದೆ ಇಲ್ಲಿ ಕರಡಿಗಳ ಗುಂಪು ಕಂಡು ಪ್ರವಾಸಿಗರು ಭಯಭೀತರಾಗಿದ್ದರು.