ಬೆಂಗಳೂರು: ಗುರಾಯಿಸಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಯುವಕನನ್ನು ಕೊಲೆ ಮಾಡಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಯ್ಸಳ ನಗರದ ಮನೋಜ್ (22) ಕೊಲೆಯಾದ ವ್ಯಕ್ತಿ. ಶನಿವಾರ ಮುಂಜಾನೆ 3 ಗಂಟೆಗೆ ಹೊಯ್ಸಳ ನಗರ ಮೂರನೇ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಪ್ರಕರಣ ಸಂಬಂಧ ಸದ್ಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ (Crime News).
ಘಟನೆ ವಿವರ
ಮನೋಜ್ ಮತ್ತು ಆತನ ಸ್ನೇಹಿತ ಆಂಟೋನಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ವ್ಯಕ್ತಿ ಮನೋಜ್‌ನನ್ನು ಗುರಾಯಿಸಿದ್ದಾನೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಪರಿಸ್ಥಿತಿ ಕೈ ಮೀರಿ ಆರೋಪಿಗಳು ಮನೋಜ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಆರೋಪಿಗಳು ಚಾಕುವಿನಿಂದ ಮನೋಜ್ ಮತ್ತು ಆಂಟೋನಿಗೆ ಚುಚ್ಚಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮನೋಜ್‌ನನ್ನು ಕೂಡಲೇ ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಮನೋಜ್ ಮೃತಪಟ್ಟಿದ್ದಾನೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿರುವ ರಾಮಮೂರ್ತಿನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ʼʼಹೊಯ್ಸಳ ನಗರದ 13 ಕ್ರಾಸ್‌ನಲ್ಲಿ ಮನೋಜ್ ಮತ್ತು ಸ್ನೇಹಿತರೊಂದಿಗೆ ನಡೆದುಕೊಂಡು ಬರುತ್ತಿದ್ದಾಗ ಅದೇ ಏರಿಯಾದ ಹುಡುಗರೊಂದಿಗೆ ಜಗಳ ನಡೆದಿದೆ. ಈ ವೇಳೆ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಮನೋಜ್ ಸಾವನ್ನಪ್ಪಿದರೆ ಸ್ನೇಹಿತ ಆಂಟೋನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆʼʼ ಎಂದು ಪೊಲೀಸರು ತಿಳಿದ್ದಾರೆ.
ಒನ್ ವೇಯಲ್ಲಿ ಬಂದು ಬೈಕ್ ಸವಾರನಿಗೆ ಅವಾಜ್ ಹಾಕಿದ ಕಾರು ಚಾಲಕ
ಬೆಂಗಳೂರು: ಒನ್ ವೇಯಲ್ಲಿ ಬಂದ ಕಾರು ಚಾಲಕ ಬೈಕ್ ಸವಾರನಿಗೆ ಅವಾಜ್ ಹಾಕಿರುವ ಘಟನೆ ಮಹದೇವಪುರದಲ್ಲಿ ನಡೆದಿದೆ. ಒನ್ ವೇಯಲ್ಲಿ ಬರುತ್ತಿದ್ದ ಸ್ವಿಫ್ಟ್ ಕಾರು ಚಾಲಕನನ್ನು ಬೈಕ್ ಸವಾರ ಪ್ರಶ್ನಿಸಿದ್ದ. ಈ ವೇಳೆ ರೊಚ್ಚಿಗೆದ್ದ ಕಾರು ಚಾಲಕ ನಾನು ಹೇಗಾದ್ರು ಬರ್ತೀನಿ ನಿಂಗೇನು ಎಂದು ಜಗಳವಾಡಿ ಹಲ್ಲೆ ಮಾಡಲು ಮುಂದಾಗಿದ್ದ.
ಇದೆಲ್ಲವನ್ನೂ ಬೈಕ್ ಸವಾರ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ. ತನ್ನ ತಪ್ಪಿದ್ದರೂ ಹಲ್ಲೆಗೆ ಮುಂದಾದ ಕಾರು ಚಾಲಕನ ವಿರುದ್ದ ಇದೀಗ ಬೈಕ್ ಸವಾರ ದೂರು ದಾಖಲಿಸಿದ್ದಾನೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಪೊಲೀಸರನ್ನು ಟ್ಯಾಗ್ ಮಾಡಿ ದೂರು ನೀಡಿದ್ದಾನೆ. ಸದ್ಯ ಘಟನೆ ಬಗ್ಗೆ ಮಾಹಿತಿ ಸಂಚಾರಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬೆಳಗಾವಿಯಲ್ಲಿ ಮದ್ದು ಕುಟ್ಟುವಾಗ ಭಾರಿ ಸ್ಫೋಟ
ಬೆಳಗಾವಿ: ಮದ್ದು ತಯಾರಿಸುವ ವೇಳೆ ಆಕಸ್ಮಿಕವಾಗಿ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಸಜೀವ ದಹನವಾಗಿದ್ದಾರೆ. ಬೆಳಗಾವಿಯ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮಲ್ಲಪ್ಪ ಸತ್ಯಪ್ಪ ಕಂಕಣವಾಡಿ (38) ಮೃತ ದುರ್ದೈವಿ. ಮಲ್ಲಪ್ಪ ಪಂಚಮಿ ಹಬ್ಬದಂದು ಮದ್ದು ಹಾರಿಸಲು ತಯಾರು ಮಾಡುತ್ತಿದ್ದರು. ಮದ್ದು ತಯಾರಿಸುವ ವೇಳೆ ಆಕಸ್ಮಿಕವಾಗಿ ಸ್ಫೋಟಗೊಂಡು ದುರ್ಘಟನೆ ಸಂಭವಿಸಿದೆ. ಏಕಾಏಕಿ ಬೆಂಕಿ ಎಲ್ಲೆಡೆ ಆವರಿಸಿದ್ದರಿಂದ ಮಲ್ಲಪ್ಪ ಸುಟ್ಟು ಭಸ್ಮವಾಗಿದ್ದಾರೆ. ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು