ಗಾಂಧಿನಗರ: ಪತ್ನಿಯ ಪ್ರಿಯಕರನ ರೋಷಕ್ಕೆ ಪತಿ ಮತ್ತು ಮಗಳು ಬಲಿಯಾಗಿದ್ದಾರೆ. ಪತ್ನಿಯ ಪ್ರಿಯಕರ ಕಳುಹಿಸಿದ್ದ ಪಾರ್ಸೆಲ್ ಬಾಂಬ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ. ಗುಜರಾತ್‌ನ ವಡಾಲಿಯಲ್ಲಿ ಈ ಘಟನೆ ನಡೆದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ (Crime News).
ಮೃತರನ್ನು 32 ವರ್ಷದ ಕೂಲಿ ಕಾರ್ಮಿಕ ಜೀತುಭಾಯಿ ಹೀರಾಭಾಯ್ ಮತ್ತು ಅವರ ಮಗಳು 12 ವರ್ಷದ ಭೂಮಿಕಾ ಎಂದು ಗುರುತಿಸಲಾಗಿದೆ. ಬಾಂಬ್ ಸ್ಫೋಟಿಸಿ ಪಾರ್ಸೆಲ್ ತೆರೆದ ಜೀತುಭಾಯ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಭೂಮಿಕಾ ಆಸ್ಪತ್ರೆಗೆ ಸಾಗಿಸುವ ವೇಳೆ ಅಸುನೀಗಿದ್ದಳು. 31 ವರ್ಷದ ಜಯಂತಿಭಾಯ್ ಬಾಲುಸಿಂಗ್ ವಂಜಾರ ಆರೋಪಿ.
ಘಟನೆಯ ವಿವರ
ಜೀತುಭಾಯ್ ಹೀರಾಭಾಯ್ ಪತ್ನಿಯ ಪ್ರಿಯಕರ ಜಯಂತಿಭಾಯ್ ಬಾಲುಸಿಂಗ್ ಆಟೋ ರಿಕ್ಷಾದಲ್ಲಿ ಪಾರ್ಸಲ್ ಬಾಂಬ್ ಕಳುಹಿಸಿದ್ದ. ಪಾರ್ಸಲ್ ಟೇಪ್ ರೆಕಾರ್ಡ್ ರೀತಿಯಲ್ಲಿ ಇದ್ದ ಕಾರಣ ಜೀತುಭಾಯ್ ಹೀರಾಭಾಯ್ ಅದನ್ನು ಆನ್ ಮಾಡಿದಾಗ ಸ್ಫೋಟಗೊಂಡಿತ್ತು. ಘಟನೆ ಬಗ್ಗೆ ಮಾಹಿತಿ ನೀಡಿದ ಹಿರಿಯ ಪೊಲೀಸ್ ಆಫೀಸರ್, ʼʼಆಟೋ ರಿಕ್ಷಾ ಚಾಲಕ ಪಾರ್ಸಲ್ ಅನ್ನು ಡೆಲಿವರಿ ಮಾಡುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಆಧಾರದಲ್ಲಿ ತನಿಖೆ ನಡೆಸುತ್ತಿದ್ದೇವೆʼʼ ಎಂದು ತಿಳಿಸಿದ್ದಾರೆ. ಆಟೋ ರಿಕ್ಷಾ ಚಾಲಕನ ಹೇಳಿಕೆ ಆಧಾರದಲ್ಲಿ ಆರೋಪಿಯನ್ನು ಗುರುತಿಸಲಾಗಿದ್ದು, ಸ್ಫೋಟ ನಡೆದು ಕೆಲವೇ ಗಂಟೆಗಳಲ್ಲಿ ಜಯಂತಿ ಭಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಪ್ರೇಯಸಿಯನ್ನು ಮದುವೆಯಾದ ಜೀತುಭಾಯ್ ಅನ್ನು ಕೊಲ್ಲುವ ಉದ್ದೇಶದಿಂದಲೇ ಆತ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಂಬ್ ಸ್ಫೋಟದಲ್ಲಿ ಜೀತುಭಾಯ್ ಅವರ 9 ಮತ್ತು 10 ವರ್ಷ ಇಬ್ಬರು ಪುತ್ರಿಯರೂ ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬಾಕೆಯ ಸ್ಥಿತಿ ಗಂಭೀರವಾಗಿದ್ದು, ತುರ್ತು ಚಿಕಿತ್ಸಾ ಘಟಕ್ಕಕ್ಕೆ ದಾಖಲಿಸಲಾಗಿದೆ.
ಇದನ್ನೂ ಓದಿ: Viral Video:ಶಾಕಿಂಗ್ ವಿಡಿಯೋ! ಮಗನನ್ನು ಟ್ರೆಡ್‌ಮಿಲ್‌ನಲ್ಲಿ ಓಡಿಸಿ ಪ್ರಾಣವನ್ನೇ ತೆಗೆದ ಪಾಪಿ ತಂದೆ
ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ
17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮದುವೆ ಮುನ್ನವೇ ಎರಡು ಬಾರಿ ಗರ್ಭ ಧರಿಸಿರುವ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಸದ್ಯ ಈ ಘಟನೆ ಸಿನಿಮೀಯ ತಿರುವು ಪಡೆದುಕೊಂಡಿದೆ. ತನ್ನ ಒಂದು ಮಗುವನ್ನು ತನಗೆ ತಿಳಿಯದಂತೆಯೇ ಮಾರಾಟ ಮಾಡಲಾಗಿದೆ ಎಂದು ದೂರಿರುವ ಆಕೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಪೋಷಕರು, ಶಿಕ್ಷಕರು, ವಕೀಲ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 17 ವರ್ಷದ ಬಾಲಕಿ ಇಬ್ಬರು ವಿಭಿನ್ನ ಪುರುಷರ ಜತೆ ದೇಹ ಸಂಬಂಧ ಬೆಳೆಸಿದ್ದಳು. ಹೀಗಾಗಿ ಎರಡು ಬಾರಿ ಗರ್ಭ ಧರಿಸಿದ್ದಳು. ಈ ಪೈಕಿ ಒಂದು ನವಜಾತ ಶಿಶುವನ್ನು ತನ್ನ ಪೋಷಕರು, ಶಾಲಾ ಪ್ರಾಂಶುಪಾಲರು, ಇಬ್ಬರು ಮಹಿಳಾ ವೈದ್ಯರು, ಸಾಮಾಜಿಕ ಕಾರ್ಯಕರ್ತೆ, ವಕೀಲರು ಮತ್ತು ಇತರರು ಸೇರಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಅಪ್ರಾಪ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಲಕಿಯ ಪೋಷಕರು ಸೇರಿದಂತೆ ಕನಿಷ್ಠ 16 ಮಂದಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಮತ್ತು ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.