ಭೋಪಾಲ್: ಮಧ್ಯಪ್ರದೇಶದಲ್ಲಿ ಇಡೀ ದೇಶವೇ ಬೆಚ್ಚಿ ಬೀಳಿಸುವ ಭೀಕರ ಹತ್ಯಾಕಾಂಡವೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಅವಿಭಕ್ತ ಕುಟುಂಬದ 7 ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದು ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ (Crime News).
ಬೋಡಾಲ್ ಕಛರ್ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಮಹುಲ್ಜಿರಿ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ʼʼಘಟನೆ ಕಾರಣ ಇದುವರೆಗೆ ತಿಳಿದು ಬಂದಿಲ್ಲ. ತನಿಖೆ ಆರಂಭಿಸಲಾಗಿದೆʼʼ ಎಂದು ಅವರು ಹೇಳಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಈ ಗ್ರಾಮಕ್ಕೆ ಚಿಂದ್ವಾರಾ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಧಾವಿಸಿದ್ದಾರೆ.
ಆರೋಪಿ ಮಾನಸಿಕ ಅಸ್ವಸ್ಥ?
ʼʼಮಾನಸಿಕ ಅಸ್ವಸ್ಥನಾಗಿದ್ದ ಕುಟುಂಬದ ಸದಸ್ಯನೊಬ್ಬ ಈ ಕೊಲೆ ಮಾಡಿದ್ದಾನೆʼʼ ಎಂದು ಚಿಂದ್ವಾರದ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಖತ್ರಿ ಅಂದಾಜಿಸಿದ್ದಾರೆ. ʼʼತನ್ನ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ ನಂತರ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆʼʼ ಎಂದು ಅವರು ತಿಳಿಸಿದ್ದಾರೆ. ʼʼಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದ ಆತ ಮಂಗಳವಾರ ರಾತ್ರಿ ತನ್ನ ಕುಟುಂಬದ ಮೇಲೆ ದಾಳಿ ನಡೆಸಿ, ತನ್ನ ಸಹೋದರ, ಅತ್ತಿಗೆ, ಪತ್ನಿ, ಚಿಕ್ಕ ಮಗು ಮತ್ತಿತರರನ್ನು ಕೊಂದಿದ್ದಾನೆ. ಬಳಿಕ ಆತ ಗ್ರಾಮದಿಂದ ಸುಮಾರು 100 ಮೀಟರ್ ದೂರದಲ್ಲಿರುವ ಚರಂಡಿಯ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆʼʼ ಎಂದು ಘಟನೆಯ ಭೀಕರತೆಯನ್ನು ತೆರೆದಿಟ್ಟಿದ್ದಾರೆ. ಈ ಪೈಕಿ ಮಗುವೊಂದು ಬದುಕುಳಿದಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದಲ್ಲಿಯೂ ನಡೆದಿತ್ತು
ಇದೇ ಮಾದರಿಯ ಘಟನೆ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿಯೂ ನಡೆದಿತ್ತು. ಈ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಪಾಲಾಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಕುಟುಂಬದ 5 ಸದಸ್ಯರನ್ನು ಕ್ರೂರವಾಗಿ ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದ. ಮಾನಸಿಕ ಅಸ್ವಸ್ಥನಾಗಿದ್ದ ಆರೋಪಿ ಮೊದಲು ಗುಂಡಿಕ್ಕಿ ತನ್ನ ತಾಯಿಯನ್ನು ಕೊಂದಿದ್ದ. ಬಳಿಕ ಚೂರಿ ಇರಿದು ಪತ್ನಿಯನ್ನು ಹತ್ಯೆ ಮಾಡಿದ್ದ. ನಂತರ ತನ್ನ ಮೂವರು ಮಕ್ಕಳನ್ನು ಟೆರೇಸ್‌ನಿಂದ ಎಸೆದು ಕೊಂದಿದ್ದ. ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: Crime News: ಪತ್ನಿಯನ್ನು ಕೊಂದು ಶವದ ಫೋಟೊ ಸಂಬಂಧಿಕರಿಗೆ ಕಳುಹಿಸಿ ನೇಣಿಗೆ ಶರಣಾದ ಪತಿ; ಅನಾಥವಾಯ್ತು ಹೆಣ್ಣು ಮಗು
ತಾಯಿ, ಮಗಳು, ಮೊಮ್ಮಗನ ಅನುಮಾನಾಸ್ಪದ ಸಾವು
ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಮಂಗಳವಾರ ವರದಿಯಾಗಿತ್ತು. ಮನೆಯಲ್ಲಿಯೇ ತಾಯಿ, ಮಗಳು ಹಾಗೂ ಮೊಮ್ಮಗನ ಮೃತದೇಹಗಳು ಪತ್ತೆಯಾಗಿದ್ದವು. ರಾಜೇಶ್ವರಿ (45), ವಸಂತಾ (22) ಹಾಗೂ ಸಾಯಿ (4) ಮೃತ ದುರ್ದೈವಿಗಳು.
ಹಂತಕರು ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಸೋಮವಾರ ರಾತ್ರಿ ತಾಯಿ ರಾಜೇಶ್ವರಿಗೆ ಮತ್ತೊಬ್ಬ ಮಗಳು ಫೋನ್ ಮಾಡಿದ್ದಾಳೆ. ಆದರೆ ಯಾರು ಫೋನ್ ರಿಸೀವ್ ಮಾಡಿರಲಿಲ್ಲ, ಮನೆಯ ಬಾಗಿಲು ತೆಗೆದಿರಲಿಲ್ಲ. ಹೀಗಾಗಿ ಅನುಮಾನಗೊಂಡು ಮುಂಜಾನೆ ಬಂದು ಪರಿಶೀಲನೆ ನಡೆಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಬೆಡ್ ರೂಮ್‌ನಲ್ಲಿ ಮಲಗಿದ್ದಲ್ಲಿ ಅಜ್ಜಿ ಮತ್ತು ಮೊಮ್ಮಗನ ಶವಗಳು ಪತ್ತೆಯಾದರೆ, ಮಗಳು ವಸಂತಾಳ ಶವ ಅಡುಗೆ ಮನೆಯಲ್ಲಿತ್ತು.