ಮುಂಬೈ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳನ್ನು ಕೊಂದು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೆ ಮುನ್ನ ವಿಡಿಯೊ ಮೆಸೇಜ್ ಮಾಡಿರುವ ಮಹಿಳೆ, ಪತಿಯ ಕಿರುಕುಳದಿಂದ ತಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಆರೋಪಿಸಿದ್ದಾಳೆ. ಮೃತರನ್ನು ಅಶ್ವಿನಿ ನಿಕುಂಭ್ (30) ಮತ್ತು ಮಕ್ಕಳಾದ ಆರಾಧ್ಯಾ (8) ಹಾಗೂ ಅಗಸ್ತ್ಯ (2) ಎಂದು ಗುರುತಿಸಲಾಗಿದೆ (Crime News).
ʼʼಅಶ್ವಿನಿ ಆತ್ಮಹತ್ಯೆ ಮಾಡುವ ಮುನ್ನ ಮಕ್ಕಳಿಗೆ ವಿಷ ನೀಡಿದ್ದಾರೆʼʼ ಎಂದು ಪೊಲೀಸರು ತಿಳಿಸಿದ್ದು, ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಬುಧವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಅಶ್ವಿನಿ ಕೋನಾರ್ಕ್ ನಗರದ ಅಪಾರ್ಟ್‌ಮೆಂಟ್‌ನ ಟೆರೇಸ್‌ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು. ಘಟನೆ ಸ್ಥಳಕ್ಕೆ ತಲುಪಿದ ಪೊಲೀಸರಿಗೆ ಬಳಿಕ ಆಕೆಯ ಮಕ್ಕಳ ಶವವೂ ಕಂಡು ಬಂದಿತ್ತು. ಈ ವೇಳೆ ಆಕೆಯ ಪತಿ ಊರಿನಲ್ಲಿ ಇರಲಿಲ್ಲ. ಹೀಗಾಗಿ ಆಕೆಯೇ ಮಕ್ಕಳಿಗೆ ವಿಷ ಉಣಿಸಿ ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಊಹಿಸಿದ್ದಾರೆ.
ಡೆತ್‌ನೋಟ್ ಪತ್ತೆ
ಪರಿಶೀಲನೆ ವೇಳೆ ಪೊಲೀಸರಿಗೆ ಅಶ್ವಿನಿ ಬರೆದಿದ್ದಾಳೆ ಎನ್ನಲಾದ ಡೆತ್‌ನೋಟ್ ಪತ್ತೆಯಾಗಿದೆ. ಇದರಲ್ಲಿ ಆಕೆ ಪತಿ ಸ್ವಪ್ನಿಲ್ ಕಿರುಕುಳ ನೀಡುತ್ತಿರುವ ಬಗ್ಗೆ ಉಲ್ಲೇಖಿಸಿದ್ದಾಳೆ. ಜತೆಗೆ ಸಾಯುವ ಮುನ್ನ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾಳೆ. ಸ್ವಪ್ನಿಲ್ ನಿರಂತರ ಹಿಂಸೆ ನೀಡುತ್ತಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಆಕೆ ತನ್ನ ಸಂಬಂಧಿಕರಿಗೆ ಕಳುಹಿಸಿದ ವಿಡಿಯೊದಲ್ಲಿ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಕೃತ್ಯ ನಡೆಯುವ ವೇಳೆ ಸ್ವಪ್ನಿಲ್ ಕೆಲಸದ ನಿಮಿತ್ತ ಪುಣೆಗೆ ತೆರಳಿದ್ದರು. ಸದ್ಯ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಇದನ್ನೂ ಓದಿ: ಶಾಲೆಗೆ ಹೋಗದ್ದಕ್ಕೆ ಬೈದ ತಾಯಿ, ಬಾಲಕ ಆತ್ಮಹತ್ಯೆ
ನೆಚ್ಚಿನ ಶ್ವಾನ ಮರಿ ನಾಪತ್ತೆಯಾದ ಕೊರಗಿನಿಂದ ಆತ್ಮಹತ್ಯೆ
ತನ್ನ ಪ್ರೀತಿಯ ಶ್ವಾನ ನಾಪತ್ತೆಯಾದ ಹಿನ್ನೆಲೆಯಲ್ಲಿ ಕೊರಗಿನಿಂದ 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಏಪ್ರಿಲ್ 27ರಂದು ಹರಿಯಾಣದಲ್ಲಿ ನಡೆದಿತ್ತು. ʼʼಐದು ದಿನಗಳ ಹಿಂದೆ ನಮ್ಮ ಸಾಕು ನಾಯಿ ಕಾಣೆಯಾಗಿತ್ತು. ಈ ಶ್ವಾನ ಮತ್ತು ಬಾಲಕಿಯ ಮಧ್ಯೆ ಸುಮಾರು 3 ತಿಂಗಳಿಂದ ಉತ್ತಮ ಬಾಂಧವ್ಯ ರೂಪುಗೊಂಡಿತ್ತುʼʼ ಎಂದು ಘಟನೆಯ ಬಗ್ಗೆ ಮನೆಯವರು ತಿಳಿಸಿದ್ದರು. ʼʼಶ್ವಾನ ಕಾಣೆಯಾದಾಗಿನಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು. ಬಳಿಕ ತೀವ್ರ ಚಿಂತೆಗೆ ಒಳಗಾಗಿದ್ದ ಅವಳು ಸರಿಯಾಗಿ ಆಹಾರವನ್ನೂ ಸೇವಿಸುತ್ತಿರಲಿಲ್ಲʼʼ ಎಂದು ಅವರು ಹೇಳಿದ್ದರು. ಕುಟುಂಬಸ್ಥರು ಆಕೆಯನ್ನು ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ ನಾಯಿಮರಿಯನ್ನು ಕಳೆದುಕೊಂಡ 6ನೇ ತರಗತಿಯ ವಿದ್ಯಾರ್ಥಿನಿಯ ದುಃಖವನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಬಾಲಕಿಯ ತಾಯಿ ಮತ್ತು ಸಹೋದರಿ ದಿನಸಿ ಖರೀದಿಗಾಗಿ ಮನೆಯಿಂದ ಹೊರ ಹೋಗಿದ್ದರು. ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿ ಈ ವೇಳೆ ಶಾಕಿಂಗ್ ನಿರ್ಧಾರ ಕೈಗೊಂಡಿದ್ದಳು. ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಳು.