ಬೆಂಗಳೂರು: ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ರಕ್ತದ ಕೋಡಿಯೇ ಹರಿದಿದ್ದು ನಗರವೇ ಬೆಚ್ಚಿ ಬಿದ್ದಿದೆ. ಲೇಡಿಸ್ ಪಿಜಿಯೊಂದಕ್ಕೆ ನುಗ್ಗಿದ ದುಷ್ಕರ್ಮಿ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೋರಮಂಗಲದಲ್ಲಿರುವ ಲೇಡಿಸ್ ಪಿಜಿಯಲ್ಲಿ ಈ ಬರ್ಬರ ಘಟನೆ ನಡೆದಿದ್ದು, ಮೃತ ಯುವತಿಯನ್ನು ಕೃತಿ ಕುಮಾರಿ (24) ಎಂದು ಗುರುತಿಸಲಾಗಿದೆ (Crime News).
ರಾತ್ರಿ 11.10ರಿಂದ 11.30ರ ಸುಮಾರಿಗೆ ಈ ಹತ್ಯೆ ನಡೆದಿದೆ. ಬಿಹಾರ ಮೂಲದ ಕೃತಿ ಕುಮಾರಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೋರಮಂಗಲದ ವಿಆರ್ ಲೇಔಟ್ನ ಪಿಜಿಯಲ್ಲಿ ವಾಸವಾಗಿದ್ದರು.
ಘಟನೆ ಹಿನ್ನೆಲೆ
ರಾತ್ರಿ ಸುಮಾರು 11.10ಕ್ಕೆ ಯುವಕನೋರ್ವ ಚಾಕು ಇಟ್ಟುಕೊಂಡು ಯುವತಿ ಇದ್ದ ಲೇಡಿಸ್ ಪಿಜಿಯೊಳಗೆ ನುಗ್ಗಿದ್ದು 3ನೇ ಮಹಡಿಯಲ್ಲಿರುವ ಕೃತಿ ಕುಮಾರಿ ಅವರ ಕೊಠಡಿ ಬಳಿ ಹಲ್ಲೆ ಮಾಡಿದ್ದಾನೆ. ಬಳಿಕ ಕತ್ತು ಕೊಯ್ದಿದ್ದಾನೆ. ತೀವ್ರ ಗಾಯಗೊಂಡ ಕೃತಿ ಕುಮಾರಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಳಿಕ ಯುವಕ ಪರಾರಿಯಾಗಿದ್ದಾನೆ. ಪರಿಚಯಸ್ಥ ಯುವಕನಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಪಿಜಿ ಮಾಲೀಕರ ನಿರ್ಲಕ್ಷ್ಯದ ಆರೋಪ
ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದೆ ಪಿಜಿ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದೇ ಘಟನೆಗೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಯುವಕನ ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಪೊಲೀಸರು ಮೃತ ಕೃತಿ ಕುಮಾರಿ ಅವರ ಮೊಬೈಲ್ ಪರಿಶೀಲಿಸುತ್ತಿದ್ದಾರೆ. ಕಾಲ್ ಡಿಟೈಲ್ಸ್ ಹಾಗೂ ಸಿಡಿಆರ್ ಪಡೆದು ಶೋಧಿಸುತ್ತಿದ್ದಾರೆ. ಕೊನೆಯದಾಗಿ ಯಾರಿಗೆ ಕರೆ ಮಾಡಿದ್ದಾರೆ, ಯಾವ ಯಾವ ನಂಬರ್‌ನಿಂದ ಕಾಲ್ ಬಂದಿದೆ ಎಂದು ಪರಿಶೀಲಿಸುತ್ತಿದ್ದಾರೆ.
ಪಾರಿವಾಳದ ಜೀವ ಉಳಿಸಲು ಹೋಗಿ ಬಾಲಕ ಸಾವು
ಚಿತ್ರದುರ್ಗ: ಪಾರಿವಾಳದ ಜೀವ ಉಳಿಸಲು ಹೋಗಿ ಬಾಲಕನೋರ್ವ ಪ್ರಾಣ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಹನುಮಾಪುರ ಗ್ರಾಮದ ಓಬಳಸ್ವಾಮಿ ಎಂಬವರ ಪುತ್ರ ರಾಮಚಂದ್ರ (12) ಮೃತ ಬಾಲಕ.
ಗ್ರಾಮದ ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಪಾರಿವಾಳ ಕಂಡು ಜೀವ ಉಳಿಸಲು ಕಂಬ ಏರಿದ್ದ ಬಾಲಕ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ. ಪಾರಿವಾಳದ ಜೀವ ಉಳಿಸಿ ಕಂಬದ ಮೇಲೆಯೇ ಜೀವ ಕಳೆದುಕೊಂಡ ಬಾಲಕನನ್ನು ನೋಡಿ ಪೋಷಕರು ನೋವು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ರಾಂಪುರ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Victoria Hospital: 11ನೇ ಮಹಡಿಯಿಂದ ಬಿದ್ದು ಕಾರ್ಮಿಕನಿಗೆ ಗಂಭೀರ ಗಾಯ
ಬಸ್-ಕಾರು ಡಿಕ್ಕಿಯಾಗಿ ಶಿಕಾರಿಪುರ ಶಾಲೆಯ ಫಾದರ್ ಸಾವು
ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಶಿಕಾರಿಪುರದ ಶಾಲೆಯ ಫಾದರ್ ಮೃತಪಟ್ಟು, ಚಾಲಕನಿಗೆ ಗಂಭೀರಗಾಯಗಳಾಗಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಬಳಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಪುಷ್ಪ ಶಾಲೆಯ ಫಾದರ್ ಅಂತೋನಿ (60) ಮೃತರು. ಚಾಲಕ ಸ್ಟೀಫನ್ ಗಾಯಾಳು. ಸವಳಂಗ ಕಡೆಯಿಂದ ಶಿಕಾರಿಪುರಕ್ಕೆ ಹುಂಡೈ ಕಾರಿನಲ್ಲಿ ಫಾದರ್ ಪ್ರಯಾಣಿಸುತ್ತಿದ್ದರು. ಎದುರಿಗೆ ಬಂದ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.