ಬೆಂಗಳೂರು: ಕಳೆದ 18 ತಿಂಗಳಲ್ಲಿ ಸೈಬರ್ ಖದೀಮರು (Cyber Crime) 105 ಕೋಟಿ ರೂ. ಹಣ ದೋಚಿದ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 15 ಕೋಟಿ ರೂ. ಹಣವನ್ನು ಗೋಲ್ಡನ್ ಅವರ್ ಉಪಕ್ರಮದ ಮೂಲಕ ಫ್ರೀಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2020ರಲ್ಲಿ ಜಾರಿಗೆ ತರಲಾಗಿದ್ದ ಗೋಲ್ಡನ್ ಅವರ್ ಉಪಕ್ರಮ ಕೊಂಚ ಯಶಸ್ಸು ಕಂಡಿದೆ ಎಂದು ಈ ಮೂಲಕ ತಿಳಿದುಬಂದಿದೆ.
ಸೈಬರ್ ಖದೀಮರು ಬ್ಯಾಂಕಿನಿಂದ ಹಣವನ್ನು ದೋಚುತ್ತಿದ್ದ ಪ್ರಕರಣ ಹೆಚ್ಚಾಗಿತ್ತು. ಕಳೆದ 18 ತಿಂಗಳಲ್ಲಿ ಒಟ್ಟು 105 ಕೋಟಿ ಹಣವನ್ನು ಲಪಟಾಯಿಸಿದ ಪ್ರಕರಣ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂತ್ ಗೋಲ್ಡನ್ ಅವರ್ ಎಂಬ ಉಪಕ್ರಮವನ್ನು ಜಾರಿ ತಂದಿದ್ದರು. ಈ ಮೂಲಕ ಬ್ಯಾಂಕ್ ಮಟ್ಟದಲ್ಲೇ ಸೈಬರ್ ಖದೀಮರು ಹಣ ದೋಚದಂತೆ ತಡೆಯಲಾಗುತ್ತದೆ ಎಂದು ತಿಳಿಸಲಾಗಿತ್ತು. ಹೀಗೆ 15 ಕೋಟಿ ರೂ. ಹಣವನ್ನು ಫ್ರೀಜ್ ಮಾಡಿದ್ದು ಈ ಉಪಕ್ರಮ ಯಶಸ್ಸಿನತ್ತ ಸಾಗುತ್ತಿರುವುದು ಕಂಡುಬಂದಿದೆ.
ಹಾಗದರೆ, ಏನಿದು ಗೋಲ್ಡನ್ ಅವರ್?
ಜನರಿಗೆ ಅನುಕೂಲವಾಗುವಂತೆ ಪೊಲೀಸ್ ಇಲಾಖೆ ಪರಿಚಯಿಸಿದ ಯೋಜನೆ ಇದು. ಸೈಬರ್ ಕ್ರೈಂ ಮೂಲಕ ಅನೇಕರು ಹಣ ಕಳೆದುಕೊಳ್ಳುತ್ತಿದ್ದ ಪ್ರಕರಣ ದಾಖಲಾಗುತ್ತಿದ್ದು, ಇದಕ್ಕೆ ಪರಿಹಾರವಾಗಿ ಈ ಯೋಜನೆಯನ್ನು ರೂಪಿಸಲಾಗಿತ್ತು. ಈ ಯೋಜನೆಯ ಸ್ವರೂಪ ಹೇಗಿದೆ ಎಂದರೆ; ಯಾರಾದರೂ ತಮ್ಮ ಖಾತೆಯಿಂದ ಹಣ ಕಳೆದುಕೊಂಡರೆ, ಅವರು ಒಂದು ಗಂಟೆಯೊಳಗೆ ಪೊಲೀಸರಿಗೆ ಮಾಹಿತಿ ನೀಡಬೇಕು.
ಹೀಗೆ ದೂರು ನೀಡಿದರೆ ಪೊಲೀಸರು ಕೂಡಲೇ ಆ ಬಗ್ಗೆ ವಿವರ ಸಂಗ್ರಹಿಸಿ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ರವಾನೆ ಮಾಡುತ್ತಾರೆ. ಇದರಿಂದ ಹಣ ವರ್ಗಾವಣೆಯಾಗುವ ಖದೀಮರ ಖಾತೆಯ ಬಗ್ಗೆ ಮಾಹಿತಿ ಬ್ಯಾಂಕಿನವರಿಗೆ ದೊರಕುತ್ತದೆ. ಹೀಗೆ ಹಣ ದೋಚುವ ಬ್ಯಾಂಕ್ ಖಾತೆಯನ್ನು ಕೂಡಲೇ ಜಪ್ತಿ ಮಾಡಲಾಗುತ್ತದೆ. ಇದರಿಂದ ಖದೀಮರು ಹಣವನ್ನು ದೋಚದಂತೆ ತಡೆಯಲಾಗುತ್ತದೆ.
2020ರ ಡಿಸೆಂಬರ್ ತಿಂಗಳಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಈವರೆಗೆ ಒಟ್ಟು 12,126 ದೂರುಗಳು ದಾಖಲಾಗಿವೆ. ಒಟ್ಟು ಸುಮಾರು 105 ಕೋಟಿ ರೂ. ಹಣ ಕಳೆದುಕೊಂಡಿದ್ದು, ಇದರಲ್ಲಿ 15 ಕೋಟಿ ರೂ. ಮುಟ್ಟುಗೋಲು ಹಾಕಿರುವುದು ತಿಳಿದುಬಂದಿದೆ.
ಗೋಲ್ಡನ್ ಅವರ್‌ನಲ್ಲಿ ಪೊಲೀಸರನ್ನು ಹೇಗೆ ಸಂಪರ್ಕಿಸಬೇಕು?
ಹಣ ಕಳೆದುಕೊಂಡಿರುವ ಬಗ್ಗೆ ತಿಳಿದುಬರುತ್ತಿದ್ದಂತೆ ಕೂಡಲೇ 112 ಸಂಪರ್ಕ ಸಂಖ್ಯೆಗೆ ಕರೆ ಮಾಡಬೇಕು. ಇದು ಪೊಲೀಸ್ ಕಮೀಷನರ್ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ಸೈಬರ್ ಕ್ರೈಂ ವಿಭಾಗಕ್ಕೆ ಕರೆ ಹೋಗುತ್ತದೆ. ಅಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿ ದೂರು ದಾಖಲಿಸಬೇಕು. ನಂತರ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳು ನಿಮ್ಮನ್ನು ಸಂಪರ್ಕ ಮಾಡುತ್ತಾರೆ.
ಆ ಬಳಿಕ ಆರೋಪಿಗಳ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿ, ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಹೀಗೆ ಸೈಬರ್ ಕ್ರೈಂ ಪೊಲೀಸರು ಈವರೆಗೆ ಒಟ್ಟು 15 ಕೋಟಿ ರೂ. ಹಣವನ್ನು ಫ್ರೀಜ್ ಮಾಡಿದ್ದಾರೆ. ಪ್ರತಿನಿತ್ಯ ದಿನಕ್ಕೆ 20ರಿಂದ 30 ಕರೆಗಳು ಬರುತ್ತಿದ್ದು, ದಿನಕ್ಕೆ ನಗರದಲ್ಲಿ 25 ಲಕ್ಷ ರೂ. ಹಣ ವಂಚನೆ ಆಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸಂಭವನೀಯ ಸೈಬರ್ ದಾಳಿ ಬಗ್ಗೆ ಗೂಗಲ್ ಕ್ರೋಮ್ ಬಳಕೆದಾರರಿಗೆ ಸರ್ಕಾರ ಎಚ್ಚರಿಕೆ