ಹೊಸದಿಲ್ಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಬಳಿ ಇದ್ದ ಸುಮಾರು 81.5 ಕೋಟಿ ಭಾರತೀಯ ನಾಗರಿಕರ Covid-19 ಪರೀಕ್ಷಾ ಮಾಹಿತಿ ಮಾರಾಟವಾಗಿದೆ ಎಂಬ ರಹಸ್ಯ ಬಹಿರಂಗವಾಗಿದೆ. ಇದುವರೆಗೆ ಭಾರತದಲ್ಲಿ ನಡೆದಿರಬಹುದಾದ ಡೇಟಾ ಸೋರಿಕೆ ಅವ್ಯವಹಾರಗಳಲ್ಲೇ ಅತಿ ದೊಡ್ಡದು ಎಂದು ಈ ಪ್ರಕರಣವನ್ನು ಶಂಕಿಸಲಾಗಿದೆ.
ಘಟನೆಯ ಗಂಭೀರ ಸ್ವರೂಪವನ್ನು ಗಮನಿಸಿದರೆ, ಐಸಿಎಂಆರ್ ದೂರು ದಾಖಲಿಸಿದ ನಂತರ ಭಾರತದ ಪ್ರಧಾನ ತನಿಖಾ ಸಂಸ್ಥೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಈ ವಿಷಯವನ್ನು ತನಿಖೆ ಮಾಡುವ ಸಾಧ್ಯತೆಯಿದೆ.
Xನಲ್ಲಿ ಹ್ಯಾಂಡಲ್ ಹೊಂದಿರುವ ಸೈಬರ್ ದುಷ್ಕರ್ಮಿಯೊಬ್ಬ ಡಾರ್ಕ್ ವೆಬ್‌ನಲ್ಲಿ ಈ ಡೇಟಾ ಉಲ್ಲಂಘನೆಯ ಮಾಹಿತಿಯನ್ನು ಪ್ರಕಟಿಸಿದ್ದಾನೆ. ಇದು 81.5 ಕೋಟಿ ಭಾರತೀಯ ನಾಗರಿಕರ ದಾಖಲೆಗಳನ್ನು ಒಳಗೊಂಡಿದೆ. ಇವರ ಹೆಸರುಗಳು, ಫೋನ್ ಸಂಖ್ಯೆಗಳು, ವಿಳಾಸಗಳು, ಆಧಾರ್ ಮತ್ತು ಪಾಸ್‌ಪೋರ್ಟ್ ಮಾಹಿತಿಗಳು ಸೋರಿಕೆಯಾಗಿವೆ. ಕೋವಿಡ್- 19 ಸಂದರ್ಭದಲ್ಲಿ ಮಾಡಲಾದ ವೈದ್ಯಕೀಯ ಪರೀಕ್ಷಾ ವಿವರಗಳಿಂದ ಈ ಡೇಟಾವನ್ನು ಹೊರತೆಗೆಯಲಾಗಿದೆಯಂತೆ. ಇದನ್ನು ICMRನಿಂದ ಪಡೆಯಲಾಗಿದೆ ಎಂದು ಈ ದುಷ್ಕರ್ಮಿ ಹೇಳಿಕೊಂಡಿದ್ದಾನೆ.
ಫೆಬ್ರವರಿಯಿಂದ ಐಸಿಎಂಆರ್ ಅನೇಕ ಸೈಬರ್ ದಾಳಿಯ ಪ್ರಯತ್ನಗಳನ್ನು ಎದುರಿಸಿದೆ. ಕೇಂದ್ರೀಯ ತನಿಖಾ ಏಜೆನ್ಸಿಗಳಿಗೆ ಇದು ತಿಳಿದಿತ್ತು. ಐಸಿಎಂಆರ್ ಸರ್ವರ್‌ಗಳನ್ನು ಹ್ಯಾಕ್ ಮಾಡಲು ಕಳೆದ ವರ್ಷ 6,000ಕ್ಕೂ ಹೆಚ್ಚು ಪ್ರಯತ್ನಗಳನ್ನು ಮಾಡಲಾಗಿದೆ. ಯಾವುದೇ ಡೇಟಾ ಸೋರಿಕೆಯನ್ನು ತಪ್ಪಿಸಲು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಏಜೆನ್ಸಿಗಳು ಐಸಿಎಂಆರ್ ಅನ್ನು ಕೇಳಿಕೊಂಡಿದ್ದವು.
CERT-In ಡೇಟಾ ಉಲ್ಲಂಘನೆಯ ಬಗ್ಗೆ ICMRಗೆ ಮಾಹಿತಿ ನೀಡಿದೆ. ಮಾರಾಟದಲ್ಲಿರುವ ಮಾದರಿ ಡೇಟಾದ ಪರಿಶೀಲನೆ, ICMRನ ನೈಜ ಡೇಟಾದೊಂದಿಗೆ ಹೊಂದಾಣಿಕೆಯಾಗುತ್ತದೆ ಎಂದೂ ಗೊತ್ತಾಗಿದೆ. ಕೇಂದ್ರ ತನಿಖಾ ಏಜೆನ್ಸಿಗಳು ಈ ಬಗ್ಗೆ ತನಿಖೆಗಿಳಿದಿವೆ.
ವಿಷಯದ ಸೂಕ್ಷ್ಮತೆಯನ್ನು ಪರಿಗಣಿಸಿ, ವಿವಿಧ ತನಿಖಾ ಏಜೆನ್ಸಿಗಳು ಮತ್ತು ಸಚಿವಾಲಯಗಳ ಎಲ್ಲಾ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಮಾಹಿತಿ ಸೋರಿಕೆಯಲ್ಲಿ ವಿದೇಶಿ ಶಕ್ತಿಗಳು ಶಾಮೀಲಾಗಿರುವುದರಿಂದ, ಅದನ್ನು ಪ್ರಧಾನ ತನಿಖಾ ಏಜೆನ್ಸಿಯಿಂದಲೇ ತನಿಖೆ ಮಾಡಬೇಕಿದೆ. ಪ್ರಸ್ತುತ ಹಾನಿ ತಡೆಗೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಕೋವಿಡ್-19 ಪರೀಕ್ಷಾ ದತ್ತಾಂಶದ ಭಾಗಗಳು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ), ಐಸಿಎಂಆರ್ ಮತ್ತು ಆರೋಗ್ಯ ಸಚಿವಾಲಯದ ನಡುವೆ ಹಂಚಿಕೆಯಾಗಿವೆ. ಹೀಗಾಗಿ ಸೋರಿಕೆಯ ಕೇಂದ್ರಬಿಂದುವನ್ನು ಇನ್ನೂ ಗುರುತಿಸಲಾಗಿಲ್ಲ. ಆರಂಭದಲ್ಲಿ ಈ ಸೋರಿಕೆಯನ್ನು ಗಮನಿಸಿದ್ದು ಅಮೇರಿಕನ್ ಸೈಬರ್ ಸೆಕ್ಯುರಿಟಿ ಮತ್ತು ಗುಪ್ತಚರ ಸಂಸ್ಥೆ ರೆಸೆಕ್ಯುರಿಟಿ. ʻpwn0001′ ಎಂಬ ಅಲಿಯಾಸ್ ಹೆಸರಿನ ಮೂಲಕ ಸೈಬರ್ ದುಷ್ಕರ್ಮಿಯೊಬ್ಬ ಅಕ್ಟೋಬರ್ 9ರಂದು ಅಕ್ರಮ ಜಾಲತಾಣಗಳಲ್ಲಿ ಇದರ ಥ್ರೆಡ್ ಅನ್ನು ಪೋಸ್ಟ್ ಮಾಡಿದ್ದಾನೆ. 81.5 ಕೋಟಿ ಭಾರತೀಯ ನಾಗರಿಕರ ಆಧಾರ್ ಮತ್ತು ಪಾಸ್‌ಪೋರ್ಟ್ ದಾಖಲೆಗಳನ್ನು ಮಾರಿದ್ದಾನೆ.
ಭಾರತದ ಸಂಪೂರ್ಣ ಜನಸಂಖ್ಯೆ 148.6 ಕೋಟಿ. ಹೀಗಾಗಿ ಬಹುದೊಡ್ಡ ಸಂಖ್ಯೆಯ ಮಾಹಿತಿ ಸೋರಿಕೆಯಾಗಿದೆ. ಪುರಾವೆಯಾಗಿ ಆಧಾರ್ ಡೇಟಾದ ತುಣುಕುಗಳೊಂದಿಗೆ ನಾಲ್ಕು ದೊಡ್ಡ ಸೋರಿಕೆ ಮಾದರಿಗಳನ್ನು Pwn0001 ಹಂಚಿಕೊಂಡಿದೆ.
ಭಾರತದ ಆರೋಗ್ಯ ವ್ಯವಸ್ಥೆಯು ಹ್ಯಾಕರ್‌ಗಳಿಂದ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ AIIMS ಸೈಬರ್ ದಾಳಿಯನ್ನು ಎದುರಿಸಿತು. ಅದು ವಿವಿಧ ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ಉಂಟುಮಾಡಿತು. ಈ ದಾಳಿಯು “ಭಾರತದ ನೆರೆಯ ರಾಷ್ಟ್ರಗಳಲ್ಲಿ ಒಂದಕ್ಕೆ” ಸಂಪರ್ಕವನ್ನು ಹೊಂದಿದೆ ಎಂದು ಗೊತ್ತಾಗಿತ್ತು. ಏಜೆನ್ಸಿಗಳು ಅಲ್ಲಿನ ಐಪಿ ವಿಳಾಸವನ್ನು ಕಂಡುಹಿಡಿದಿದ್ದವು.
ನವೆಂಬರ್ 23ರಂದು ಸರ್ವರ್‌ಗಳು ಸ್ಥಗಿತಗೊಂಡಾಗ ತೊಂದರೆ ಪ್ರಾರಂಭವಾಯಿತು. ಹೊರರೋಗಿ ವಿಭಾಗ (OPD) ಮತ್ತು ಮಾದರಿ ಸಂಗ್ರಹ ಸೇವೆಗಳ ಮೇಲೆ ಪರಿಣಾಮ ಬೀರಿತು. ಕೆಲವು ದಿನಗಳ ನಂತರ, AIIMS ಅಂತಿಮವಾಗಿ ತನ್ನ OPD ಅನ್ನು ಆನ್‌ಲೈನ್ ಬುಕಿಂಗ್ ಮೂಲಕ ಮರುಪ್ರಾರಂಭಿಸಬೇಕಾಯಿತು.
ಇದನ್ನೂ ಓದಿ: Cyber Crime: ಬೆಂಗಳೂರಿನಲ್ಲಿ ಖತರ್ನಾಕ್ ಹ್ಯಾಕರ್ ಬಂಧನ; 4.16 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ