ಕಲಬುರಗಿ: ಸಿಬಿಐ ಅಧಿಕಾರಿಗಳ (CBI Officers) ಹೆಸರಿನಲ್ಲಿ ಸಂಪರ್ಕಿಸಿ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರೊಬ್ಬರಿಂದ 76 ಲಕ್ಷ ರೂ.ಗಳಷ್ಟು ಹಣವನ್ನು ವಂಚಿಸಿದ (Cyber Crime) ಘಟನೆ ನಡೆದಿದೆ. ಕಲಬುರಗಿಯ (Kalaburagi news) ಪ್ರತಿಷ್ಠಿತ ವೈದ್ಯ ಪಿ. ಎಸ್ ಶಂಕರ್ ಎಂಬವರು ಹೀಗೆ ವಂಚನೆಗೆ (Fraud Case) ಒಳಗಾಗಿ 76 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಡಾ. ಪಿ.ಎಸ್ ಶಂಕರ್ ಅವರು ಕಲಬುರಗಿ ನಗರದ ಕೆಬಿಎನ್ ಆಸ್ಪತ್ರೆಯಲ್ಲಿ ಎಮಿರೆಟ್ಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೇ 14ರಂದು ವೈದ್ಯರಿಗೆ ವಿಜಯ್ ಕುಮಾರ್ ಚೌಬೆ ಎಂಬಾತ ಕರೆ ಮಾಡಿದ್ದು, ತಾನು ಮುಂಬಯಿ ಕ್ರೈಂ ಬ್ರಾಂಚ್ ಆಫೀಸರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಮುಂಬಯಿಯಲ್ಲಿ ನಿಮ್ಮ ವಿರುದ್ಧ ಮನಿ ಲಾಂಡ್ರಿಂಗ್ ಕೇಸ್ ಆಗಿದೆ ಎಂದು ಬೆದರಿಸಿದ್ದಾನೆ.
ಮನಿ ಲಾಂಡ್ರಿಂಗ್ (Money Laundering) ಕೇಸ್ ಸಂಬಂಧ ನಿಮ್ಮನ್ನು ವಿಚಾರಣೆ ಮಾಡಬೇಕಾಗಿದೆ. ನಿಮ್ಮ ಹೆಸರಲ್ಲಿ ಎಲ್ಲೆಲ್ಲಿ ಬ್ಯಾಂಕ್ ಅಕೌಂಟ್ ಇದೆ, ಯಾವ್ಯಾವ ಬ್ಯಾಂಕ್‌ನಲ್ಲಿ ಎಷ್ಟು ಹಣ ಇದೆ ಎಂದು ಮಾಹಿತಿ ನೀಡಿ ಎಂದು ಬೆದರಿಸಿ ಮಾಹಿತಿ ಪಡೆದಿದ್ದಾನೆ. ಈ ವಿಚಾರ ಹೊರಗಡೆ ಎಲ್ಲೂ ಹೇಳದಂತೆ ಹಾಗೂ ತಾವಿರುವ ಸ್ಥಳ ಬಿಟ್ಟು ಹೋಗದಂತೆ ಸೂಚನೆ ನೀಡಿದ್ದಾನೆ. ಬಳಿಕ, ನಿಮ್ಮ ವಿರುದ್ಧ ಸುಪ್ರೀಂ ಕೋರ್ಟ್ ಆರೆಸ್ಟ್ ವಾರೆಂಟ್ ಜಾರಿ ಮಾಡಿದೆ, ಸಿಬಿಐನವರು ನಿಮ್ಮನ್ನು ಆರೆಸ್ಟ್ ಮಾಡಬಹುದು ಎಂದು ಹೆದರಿಸಿದ್ದಾನೆ.
ನಿಮಗೆ ತೊಂದರೆ ಆಗಬಾರದು ಅಂದರೆ ಸಿಬಿಐ ಹಿರಿಯ ಅಧಿಕಾರಿಗಳಿಗೆ ಪ್ರಿಯಾರಿಟಿ ಎನ್‌ಕ್ವೈಯರಿ ಮಾಡುವಂತೆ ಮನವಿ ಮಾಡಿಕೊಳ್ಳಬೇಕು ಎಂದಿದ್ದಾನೆ. ಅದರಂತೆ ಸಿಬಿಐ ಅಧಿಕಾರಿಗಳಿಗೆ ಪತ್ರ ಬರೆಯಲು ಮುಂದಾದ ವೈದ್ಯ ಶಂಕರ್‌ಗೆ, ಸಿಬಿಐ ಅಧಿಕಾರಿ ಆಕಾಶ್ ಪುಲ್ಹರಿ ಎಂಬ ಹೆಸರಿನವನನ್ನು ಪರಿಚಯಿಸಿದ್ದಾನೆ. ಪುಲ್ಹರಿಗೆ ಪತ್ರ ಬರೆದು ವೈದ್ಯರು ಮನವಿ ಮಾಡಿಕೊಂಡಿದ್ದಾರೆ. ಸ್ಕೈಪ್ ಆಪ್ ಮೂಲಕ ವೈದ್ಯರನ್ನು ಸಂಪರ್ಕಿಸಿದ ಆಕಾಶ್ ಪುಲ್ಹರಿ, ಬಳಿಕ ವೈದ್ಯರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ದಾಖಲಾಗಿರುವುದಾಗಿ ನಂಬಿಸಿದ್ದಾನೆ.
ನಂತರ ವೈದ್ಯರ ಅಕೌಂಟ್‌ನಲ್ಲಿರುವ ಹಣದ ಬಗ್ಗೆ ಮಾಹಿತಿ ಪಡೆದು, ತಕ್ಷಣ ತನ್ನ ಅಕೌಂಟ್‌ಗೆ ಹಣ ಟ್ರಾನ್ಸ್‌ಫರ್ ಮಾಡಿಸಿಕೊಂಡಿದ್ದಾನೆ. ಹಣ ಕಳೆದುಕೊಂಡ ಬಳಿಕ ವೈದ್ಯರಿಗೆ ತಾವು ಮೋಸ ಹೋಗಿರುವ ಕುರಿತು ಜ್ಞಾನೋದಯವಾಗಿದೆ. ಈ ಬಗ್ಗೆ ದೂರು ದಾಖಲು ಮಾಡಿದ್ದಾರೆ. ಕಲಬುರಗಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ನಕಲಿ ಸಿಬಿಐ ಅಧಿಕಾರಿಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ಹಿಂಡಲಗಾ ಜೈಲಿನಲ್ಲಿ ಸಿಬ್ಬಂದಿಗಳಿಗೇ ಕೈದಿಗಳಿಂದ ಹಲ್ಲೆ
ಬೆಳಗಾವಿ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ (Hindalaga Jail) ಸಿಬ್ಬಂದಿಗಳಿಗೇ ರಕ್ಷಣೆ ಇಲ್ಲದಂತಾಗಿದೆ. ಕೈದಿಗಳು (Prisoners) ಸೃಷ್ಟಿಸಿರುವ ಜೀವಭಯದಲ್ಲಿ ಸಿಬ್ಬಂದಿಗಳೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ. ರೂಲ್ಸ್ ಫಾಲೋ ಮಾಡು ಎಂದಿದ್ದಕ್ಕೆ ಕೈದಿಗಳಿಂದ ಸಿಬ್ಬಂದಿ ಮೇಲೆ ಗೂಂಡಾಗಿರಿ (Assault Case) ನಡೆದಿದ್ದು, ಮಾರಣಾಂತಿಕವಾಗಿ ಹಲ್ಲೆಗೊಳಗಾದ ಸಿಬ್ಬಂದಿ ಈ ಬಗ್ಗೆ ದೂರು ನೀಡಿದ್ದಾರೆ.
ಒಂದೆರಡಲ್ಲ, ಕಳೆದ ಕೆಲವು ದಿನಗಳಿಂದ ನಾಲ್ಕೈದು ಬಾರಿ ಸಿಬ್ಬಂದಿ ಮೇಲೆ ಕೈದಿಗಳು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದು, ಒಂದು ಪ್ರಕರಣ ಬೆಳಕಿಗೆ ಬಂದಿದೆ. ಹಿಂಡಲಗಾ ಜೈಲಿನ ವಾರ್ಡರ್ ವಿನೋದ್ ಲೋಕಾಪುರ್ ಎಂಬವರ ಮೇಲೆ ಹಲ್ಲೆಯಾಗಿದೆ. ಹಲ್ಲೆಗೊಳಗಾದ ವಿನೋದ್ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೈಲಿನ ನಿಯಮಾವಳಿ ಉಲ್ಲಂಘಿಸಿ ನಡೆದುಕೊಳ್ಳುತ್ತಿದ್ದ ಕೈದಿ ರಾಹಿಲ್ ಅಲಿಯಾಸ್ ರೋಹನ್ ಎಂಬವನಿಗೆ ರೂಲ್ಸ್ ಫಾಲೋ ಮಾಡು ಎಂದು ಹೇಳಿದ್ದಕ್ಕೆ ವಾರ್ಡರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಕೈದಿ ರಾಹಿಲ್ ಹಾಸನದಿಂದ ಗಡೀಪಾರಾಗಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಆಗಿದ್ದು, ಅತೀ ಭದ್ರತೆ ವಿಭಾಗದಲ್ಲಿದ್ದಾನೆ.
ಈತ ಆಸ್ಪತ್ರೆಗೆ ಹೋಗಲು ಸ್ಥಳೀಯ ಸಿಬ್ಬಂದಿಯ ಅನುಮತಿ ಬೇಕಿದ್ದು, ತಡವಾಗಿ ಅನುಮತಿ ನೀಡಿದರು ಎನ್ನುವ ಕಾರಣಕ್ಕೆ ಹೊರ ಬಂದು ವಿನೋದ್ ಮೇಲೆ ಹಲ್ಲೆ ನಡೆಸಿದ್ದಾನೆ. ಕಾಲಿನಿಂದ ಒದ್ದು ಕೈಯಿಂದ ಹಿಗ್ಗಾಮಗ್ಗಾ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ವಿನೋಸ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ತೋರಿಸಿದ್ದಾರೆ. ಕೈದಿಗಳ ಗೂಂಡಾಗಿರಿಗೆ ಬೇಸತ್ತು ಕೆಲಸಕ್ಕೆ ಬರಲು ಭಯ ಪಡುವ ಸ್ಥಿತಿ ಸಿಬ್ಬಂದಿಯದ್ದಾಗಿದೆ. ಈ ಹಿಂದೆಯೂ ಸಿಬ್ಬಂದಿ ಮೇಲೆ ಹಲ್ಲೆಯಾಗಿದೆ, ಆದರೆ ಕ್ರಮ ಆಗಿಲ್ಲ ಎಂದು ವಿನೋದ್ ದೂರಿದ್ದಾರೆ. ಮೇಲಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಲ್ಲೆಗೊಳಗಾದ ಸಿಬ್ಬಂದಿ ವಿನೋದ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Mandya News : ಬೆಳ್ಳೂರಿನಲ್ಲಿ ಮುಸ್ಲಿಮ್ ಯುವಕರ ಗುಂಪಿನಿಂದ ಅಭಿಲಾಷ್ ಎಂಬುವರ ಮೇಲೆ ಮಾರಕ ಹಲ್ಲೆ