Site icon Vistara News

Cyber Crime: ಸೈಬರ್ ಕ್ರೈಂ ಜಾಲ ಪತ್ತೆ; ಬಲೆಗೆ ಬಿದ್ದ ಸಿಮ್ ಕಾರ್ಡ್ ಪೂರೈಸುತ್ತಿದ್ದ ವ್ಯಕ್ತಿ

Cyber Crime

Cyber Crime

ಬೆಂಗಳೂರು: ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ (Cyber Crime) ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದೆ. ಸದ್ಯ ವಂಚಕ ಜಾಲಕ್ಕೆ ಸಿಮ್ ಕಾರ್ಡ್ ಪೂರೈಸುತ್ತಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ವಿಶಾಖಪಟ್ಟಣಂ ಮೂಲದ ಈತನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ವಂಚಕರ ಜಾಲ ನಕಲಿ ದಾಖಲೆ ನೀಡಿ ಏಜೆಂಟ್‌ಗಳ ಮೂಲಕ ವಿವಿಧ ಕಂಪನಿಗಳ ಸಿಮ್ ಖರೀದಿ ಮಾಡುತ್ತಿತ್ತು. ಬೆಂಗಳೂರು, ಚೆನ್ನೈ, ವಿಶಾಖಪಟ್ಟಣ ಸೇರಿ ದೇಶದ ಬೇರೆ ಬೇರೆ ಮಹಾನಗರಗಳಿಂದ ಸಿಮ್ ಖರೀದಿಸಿ ನಂತರ ಆಕ್ಟೀವ್ ಮಾಡಿ ವಿಯೆಟ್ನಾಂ ಹಾಗೂ ಕಾಂಬೋಡಿಯಾಕ್ಕೆ ಕೊರಿಯರ್ ಮೂಲಕ ಕಳುಹಿಸಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚೆನ್ನೈನಿಂದ ಬೆಂಗಳೂರಿಗೆ ಬಳಿಕ ಬೆಂಗಳೂರಿಂದ ವಿಯೆಟ್ನಾಂಗೆ ಸಿಮ್ ರವಾನಿಯಾಗುತ್ತಿತ್ತು. ಜತೆಗೆ ವಿಶಾಖಪಟ್ಟಣದಿಂದ ಬೆಂಗಳೂರಿಗೆ ಬಂದು ಇಲ್ಲಿಂದ ಕಾಂಬೋಡಿಯಾಗೆ ಸಿಮ್ ಕಳುಹಿಸಲಾಗುತ್ತಿತ್ತು. ಭಾರತದಿಂದ ಕೊರಿಯರ್ ಮೂಲಕ ವಿದೇಶಕ್ಕೆ ಹೋದ ಸಿಮ್‌ಗಳಿಂದ ವಾಟ್ಸಾಪ್‌ ಓಪನ್‌ ಮಾಡಿಕೊಳ್ಳುತ್ತಿದ್ದ ವಂಚಕರು ಬಳಿಕ ಬಲೆ ಬೀಸುತ್ತಿದ್ದರು. ಭಾರತೀಯ ನಂಬರ್‌ಗಳೇ ಇವರ ಟಾರ್ಗೆಟ್‌. ದೇಶದ ಬೇರೆ ಬೇರೆ ಭಾಗದ ಜನರನ್ನು ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕಿಸಿ ವಂಚನೆ ನಡೆಸುತ್ತಿತ್ತು.

ವಂಚನೆ ಹೇಗೆ?

ವಾಟ್ಸಾಪ್‌ನಲ್ಲಿ ಷೇರು ಮಾರ್ಕೆಟ್ ಹೂಡಿಕೆ, ಮನೆಯಲ್ಲಿ ಕೂತು ಮಾಡಬಹುದುದಾದ ಪಾರ್ಟ್ ಟೈಂ ಜಾಬ್ ಆಫರ್ ನೀಡುವ ಮೂಲಕ ವಂಚಕರು ಗ್ರಾಹಕರನ್ನು ನಂಬಿಸುತ್ತಿದ್ದರು. ಆರೋಪಿಗಳು ಕಳುಹಿಸುವ ಜಾಹೀರಾತು ನಂಬಿ ಲಿಂಕ್ ಒಪನ್ ಮಾಡಿದರೆ, ಓಟಿಪಿ ಶೇರ್ ಮಾಡಿದರೆ ಸಾಕು ವಂಚಕರು ಹಣ ಎಗರಿಸುತ್ತಿದ್ದರು. ಸದ್ಯ ವಂಚಕ ಜಾಲಕ್ಕೆ ಸಿಮ್ ಕಾರ್ಡ್ ಪೂರೈಸುತ್ತಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಈಶಾನ್ಯ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ | Anjali Murder Case: ನನ್ನ ಮಗ ಮಾಡಿದ್ದು ತಪ್ಪು, ಕೋರ್ಟ್ ಅವನಿಗೆ ಯಾವ ಶಿಕ್ಷೆಯಾದ್ರೂ ಕೊಡಲಿ: ಆರೋಪಿ ಗಿರೀಶ್ ತಾಯಿ

ಹು-ಧಾ ಐಪಿಎಸ್ ಅಧಿಕಾರಿಯ ತಲೆದಂಡ

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಬೆನ್ನಲ್ಲೇ ನಡೆದ ಅಂಜಲಿ ಹತ್ಯೆ ಪ್ರಕರಣ (Anjali Murder Case) ಅವಳಿ ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಅಂಜಲಿ ಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್‌ ಹಾಗೂ ಮಹಿಳಾ ಪೇದೆಯನ್ನು ಅಮಾನತು ಮಾಡಿದ ಬೆನ್ನಲ್ಲೇ ಇದೀಗ ಐಪಿಎಸ್ ಅಧಿಕಾರಿಯ ತಲೆದಂಡವಾಗಿದೆ. ಕಾನೂನು ಸುವ್ಯವಸ್ಥೆ‌ ಕಾಪಾಡುವಲ್ಲಿ ಲೋಪ ಎಸಗಿದ್ದರಿಂದ ಹುಬ್ಬಳ್ಳಿ-ಧಾರವಾಡ ಡಿಸಿಪಿ ರಾಜೀವ್ ಅಮಾನತುಗೊಂಡಿದ್ದಾರೆ.

ಡಿಸಿಪಿ ರಾಜೀವ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಗೃಹ ಸಚಿವರು ಹುಬ್ಬಳ್ಳಿ‌ಗೆ ಭೇಟಿ ನೀಡುವ ಮುನ್ನಾ ಅಮಾನತು ಆದೇಶ ಹೊರಬಿದ್ದಿದ್ದು, ಸೋಮವಾರ ಹುಬ್ಬಳ್ಳಿಗೆ ಗೃಹ ಸಚಿವ ಪರಮೇಶ್ವರ್ ಆಗಮಿಸಲಿದ್ದಾರೆ. ಹುಬ್ಬಳ್ಳಿಯಲ್ಲಿ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ವಿರುದ್ಧ ಕ್ರಮವಾಗಿದೆ. ಇನ್ನು ಈ ಪ್ರಕರಣದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತರ ತಲೆದಂಡವೂ ಆಗಲಿದೆ ಎನ್ನಲಾಗುತ್ತಿದೆ.

Exit mobile version