ಮಂಗಳೂರು: ಈಗಾಗಲೆ ಕೋಮು ದಳ್ಳುರಿಯಲ್ಲಿ ಕುದಿಯುತ್ತಿರುವ ದಕ್ಷಿಣ ಕನ್ನಡದಲ್ಲಿ ಮನಸ್ಸಿಗೆ ಬಂದಂತೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದರೆ ವರ್ಷಗಟ್ಟಲೆ ಕೋರ್ಟ್‌ಗೆ ಅಲೆಯುವಂತೆ ಮಾಡುತ್ತೇವೆ ಹುಷಾರ್ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಫಾಜಿಲ್ ಹತ್ಯೆ ಕುರಿತು ಭಾನುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಶಿಕುಮಾರ್, ಪ್ರಕರಣದ ತನಿಖೆ ವೇಳೆ ಹಲವು ಜನರನ್ನು ವಿಚಾರಣೆ ಮಾಡಿದ್ದೇವೆ. ಇಲ್ಲಿಯವರೆಗೆ ಒಟ್ಟು 51 ಜನರನ್ನು ವಿಚಾರಣೆ ನಡೆಸಲಾಗಿದೆ. ಸಿಸಿಟಿವಿ ದೃಶ್ಯದಲ್ಲಿ ಸಿಕ್ಕ ಕಾರಿನ ಆಧಾರದಲ್ಲಿ ಎಂಟು ಕಾರ್‌ಗಳನ್ನು ವಶಕ್ಕೆ ಪಡೆದು ತನಿಖೆ ಮಾಡಿದ್ದೆವು. ಇದೇ ಹಿನ್ನೆಲೆಯಲ್ಲಿ ಸುರತ್ಕಲ್ ಹೊರವಲಯದಲ್ಲಿ ಕಾರು ಮಾಲೀಕ ಅಜಿತ್‌ನನ್ನು ವಶಕ್ಕೆ ಪಡೆದಿದ್ದೆವು.
ಪ್ರಕರಣದಲ್ಲಿ ಒಬ್ಬ ಆರೋಪಿಯ ಜತೆಗೆ ಅಜಿತ್ ಹೆಚ್ಚಿನ ಒಡನಾಟ ಹೊಂದಿದ್ದ. ಆರೋಪಿ ಹಲವು ಬಾರಿ ಕಾರನ್ನು ತೆಗೆದುಕೊಂಡು ಹೊಗುತ್ತಿದ್ದ. ಈ ಬಾರಿ ಅಜಿತ್ ಬಳಿಯಿಂದ ಕಾರನ್ನು ತೆಗೆದುಕೊಂಡು ಹೋದವರು ಯಾರು ಎನ್ನುವುದನ್ನು ಹೇಳಿದ್ದಾನೆ. ಅದಕ್ಕಾಗಿಯೇ ಕಾರಿನ ಬಣ್ಣ, ಮಾಡೆಲ್ ಆಧಾರದಲ್ಲಿ ಕಾರುಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದೇವೆ.
ಇದನ್ನೂ ಓದಿ | ಫಾಜಿಲ್ ಹತ್ಯೆಗೆ ಸಂಬಂಧಿಸಿ ಐವರು ಪೊಲೀಸ್ ವಶಕ್ಕೆ, ವಿಚಾರಣೆ ತೀವ್ರ
ಹಿರಿಯ ಅಧಿಕಾರಿಗಳಿಂದಲೇ ತನಿಖೆ ಮಾಡಿಸಿ ಎಂದು ಮೃತ ಫಾಜಿಲ್ ಕುಟುಂಬದವರು ಕೋರಿಕೊಂಡಿದ್ದರು. ಇದಕ್ಕಾಗಿ ಎಸಿಪಿ ನೇತೃತ್ವದಲ್ಲೆ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಸಾಕ್ಷಿಗಳನ್ನೂ ಕಲೆ ಹಾಕಲಾಗುತ್ತಿದೆ, ಹತ್ತಿರವಾಗಿರುವ ಎಲ್ಲರನ್ನೂ ವಿಚಾರಣೆ ಮಾಡಲಾಗುತ್ತಿದೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುತ್ತಿರುವವರ ಕುರಿತು ಪ್ರತಿಕ್ರಿಯಿಸಿದ ಶಶಿಕುಮಾರ್, ಈ ಕುರಿತು ಮೇಲಧಿಕಾರಿಗಳಿಂದಲೂ ನಮಗೆ ಸೂಚನೆ ಬಂದಿದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ. ಆದರೆ ಸದ್ಯಕ್ಕೆ ನಮ್ಮ ಆದ್ಯತೆ, ಹತ್ಯೆ ಆರೋಪಿಗಳನ್ನು ಬಂಧಿಸುವುದು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದಾಗಿತ್ತು. ಆದರೆ ಮುಂದೆಯೂ ಹೀಗೆಯೇ ಇರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ, ಪ್ರಚೋದನಕಾರಿ ಹಾಗೂ ಸುಳ್ಳು ಮಾಹಿತಿಯ ಪೋಸ್ಟ್ ಹಾಕುವವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಹೀಗೆ ಮಾಡಿದರೆ ವರ್ಷಗಟ್ಟಲೆ ಕೋರ್ಟ್‌ಗೆ ಅಲೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ | ಸುರತ್ಕಲ್ ಫಾಜಿಲ್ ಹತ್ಯೆ: ಮೊದಲ ಆರೋಪಿ ಅರೆಸ್ಟ್, ಇವನು ಹಂತಕರು ಬಂದ ಕಾರಿನ ಚಾಲಕ