ಲಖನೌ: ಮಳೆ, ಚಳಿ, ಬಿಸಿಲು, ಹಗಲು, ರಾತ್ರಿ ಎನ್ನದೆ ಕಾರ್ಯನಿರ್ವಹಿಸುವ, ಜನರಿಗೆ ರಕ್ಷಣೆ ಒದಗಿಸುವ ಪೊಲೀಸರ ಬಗ್ಗೆ ಸಮಾಜದಲ್ಲಿ ಗೌರವ ಇದೆ. ಸೈನಿಕರು ಗಡಿ ರಕ್ಷಣೆ ಮಾಡಿದರೆ, ಪೊಲೀಸರು ದೇಶವನ್ನು ಆಂತರಿಕವಾಗಿ ರಕ್ಷಣೆ ಮಾಡುತ್ತಾರೆ. ಹೀಗೆ, ಜನರನ್ನು ಕಾಯಬೇಕಾದ, ಅವರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಯೊಬ್ಬ ಉತ್ತರ ಪ್ರದೇಶದಲ್ಲಿ (Uttar Pradesh) ಹೀನ ಕೃತ್ಯ ಎಸಗಿದ್ದಾನೆ. ದೂರು ನೀಡಲೆಂದು ಪೊಲೀಸ್ ಠಾಣೆಗೆ ಬಂದ ದಲಿತ ಮಹಿಳೆಯೊಬ್ಬರ (Dalit Woman) ಮೇಲೆಯೇ ಅತ್ಯಾಚಾರ ಎಸಗುವ ಮೂಲಕ ಪೊಲೀಸ್ ವೃತ್ತಿ ಮಾತ್ರವಲ್ಲ ಮನುಷ್ಯ ಕುಲಕ್ಕೇ ಕಂಟಕ ಎನಿಸುವ ಕೆಲಸ ಮಾಡಿದ್ದಾನೆ.
ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಝಂಘಾಯಿ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿರುವ ಸುಧೀರ್ ಕುಮಾರ್ ಎಂಬಾತನು ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 21ರಂದು ಮಹಿಳೆಯೊ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆಕೆಯ ದೂರು ದಾಖಲಿಸಿಕೊಂಡು, ನ್ಯಾಯ ಒದಗಿಸಬೇಕಾದ ಎಸ್‌ಐ, ಮಹಿಳೆಗೆ ಮತ್ತು ಬರುವ ಔಷಧ ಇರುವ ಪಾನೀಯ ನೀಡಿ, ಬಳಿಕ ಕಾರಿನಲ್ಲಿ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಇದಾದ ಬಳಿಕ ಮಹಿಳೆಯು ಸುಧೀರ್ ಕುಮಾರ್ ಪಾಂಡೆ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 376 (ಅತ್ಯಾಚಾರ), 120 ಬಿ (ಕ್ರಿಮಿನಲ್ ಪಿತೂರಿ) ಹಾಗೂ ಎಸ್‌ಸಿ, ಎಸ್‌ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ, ಕೂಡಲೇ ಸುಧೀರ್ ಕುಮಾರ್ ಪಾಂಡೆಯನ್ನು ಅಮಾನತುಗೊಳಿಸಲಾಗಿದೆ. ಕೃತ್ಯ ಎಸಗಿದ ಸುಧೀರ್ ಕುಮಾರ್ ಪಾಂಡೆ ಈಗ ತಲೆಮರಿಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Physical Abuse : ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ; ನೊಂದ ದಂಪತಿಯ ಆತ್ಮಹತ್ಯೆ
ದಲಿತ ಮಹಿಳೆಗೆ ಹಲವು ದಿನಗಳಿಂದ ಕೆಲವು ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದರು. ಹಾಗೆಯೇ, ಆಕೆಗೆ ಜೀವ ಬೆದರಿಕೆಯನ್ನೂ ಹಾಕಿದ್ದರು. ಇದರಿಂದ ವಿಚಲಿತರಾದ ಮಹಿಳೆಯು ಅವರ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ, ಆ ಮಹಿಳೆ ಮೇಲೆಯೇ ಪೊಲೀಸ್ ಅಧಿಕಾರಿ ಅತ್ಯಾಚಾರ ಎಸಗಿರುವುದು ನೀಚ ಕೃತ್ಯವಾಗಿದೆ. ಇನ್ನುಮುಂದೆ ಹೆಣ್ಣುಮಕ್ಕಳು ಪೊಲೀಸ್ ಠಾಣೆಗೂ ಒಬ್ಬರೇ ಹೋಗಬಾರದು ಎಂಬ ಸಂದೇಶ ರವಾನೆಯಾದಂತಾಗಿದೆ.