ಮಂಡ್ಯ: ಕಾವೇರಿ ನದಿಯಲ್ಲಿ ಮಹಿಳೆ ಹಾಗೂ ಪುರುಷನ ಶವ (Dead Body Found) ಪತ್ತೆಯಾಗಿದೆ. ಮಂಡ್ಯದ ಶ್ರೀರಂಗಪಟ್ಟಣದ ಸಂತೆಮಾಳದ ಬಳಿಯ ಕಾವೇರಿ ನದಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವಗಳು ತೇಲಿ ಬಂದಿವೆ.
ಸ್ಥಳೀಯರೊಬ್ಬರ ಮಾಹಿತಿ ಮೇರೆಗೆ ಸ್ಥಳಕ್ಕೆ ಶ್ರೀರಂಗಪಟ್ಟಣದ ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಯಿಂದ ಶವಗಳ ಹೊರ ತೆಗೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಮೃತರ ಗುರುತು ಪತ್ತೆಗಾಗಿ ಪೊಲೀಸರಿಂದ ತನಿಖೆ ಶುರು ಮಾಡಿದ್ದಾರೆ.
ಇನ್ನೂ ನದಿಯಲ್ಲಿ ಶವಗಳು ತೇಲುತ್ತಿದೆ ಎಂಬ ವಿಷಯ ಹಬ್ಬುತ್ತಿದ್ದಂತೆ ಜನರುಸೇತುವೆ ಮೇಲೆ ಮುಗಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸದ್ಯ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ: Drowns in Lake: ಕೆರೆಯಲ್ಲಿ ಮುಳುಗಿ ಯುವಕ ಸಾವು; ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಕೊಟ್ಟಿಗೆಗೆ ಬೆಂಕಿ ತಗುಲಿ ಭಾರೀ ಅಗ್ನಿ ಅವಘಡ
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಕೆಂಚಗದ್ದೆ ಗ್ರಾಮದಲ್ಲಿ ಕೊಟ್ಟಿಗೆಗೆ ಬೆಂಕಿ ತಗುಲಿ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ನಯನ ಮಂಜುನಾಥ ಹೆಗಡೆ ಎಂಬುವವರ ಮನೆಯ ಕೊಟ್ಟಿಗೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿತ್ತು. ನೋಡನೋಡುತ್ತಿದ್ದಂತೆ ಬೆಂಕಿಯು ಕೊಟ್ಟಿಗೆಯಲ್ಲಿದ್ದ ಹುಲ್ಲು ಎಲ್ಲವೂ ಸುಟ್ಟು ಕರಕಲಾಗಿತ್ತು. ಇದರಿಂದಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿತ್ತು. ತೀವ್ರ ಕಾರ್ಯಾಚರಣೆ ನಡೆಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅಡುಗೆ ಸಿಲಿಂಡರ್ ಸಿಡಿದು ಅಪಾರ ಹಾನಿ
ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದ ನಿರ್ಮಲನಗರದಲ್ಲಿ ತಡರಾತ್ರಿ ಅಡುಗೆ ಸಿಲಿಂಡರ್ ಸಿಡಿದು ಅಪಾರ ಹಾನಿಯಾಗಿದೆ. ಮಹಮ್ಮದ್ ಶಹಾಬುದ್ದೀನ್ ರಾಝ್ವಿ ಎಂಬುವವರು ಇದ್ದ ಬಾಡಿಗೆ ಮನೆಯಲ್ಲಿ ಸ್ಫೋಟಗೊಂಡಿದೆ. ಮನೆಯಲ್ಲಿ ಗ್ಯಾಸ್ ಆನ್ ಮಾಡುವಾಗ ಅನಿಲ ಸೋರಿಕೆಯಾಗಿ ಸಿಲಿಂಡರ್ ಸಿಡಿದಿದೆ.
ಸ್ಫೋಟದಿಂದಾಗಿ ಮನೆಯ ಗೋಡೆ, ಚಾವಣಿ ಬಿರುಕು ಬಿಟ್ಟಿದೆ. ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕಾಗಮಿಸಿದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಬ್ಲ್ಯಾಸ್ಟ್ ಆದ ಸಿಲಿಂಡರ್ ಸೇರಿ ಎರಡು ಸಿಲಿಂಡರ್ ಹೊರತೆಗೆದರು. ದಾಂಡೇಲಿ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡದಲ್ಲಿ ಶಾಲಾ ವಾಹನದಲ್ಲಿ ಕಾಣಿಸಿಕೊಂಡ ಬೆಂಕಿ
ನವಲೂರು ಬಳಿಯ ಖಾಸಗಿ ರೆಸಿಡೆನ್ಸಿ ಶಾಲಾ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಧಾರವಾಡದ ಕೋರ್ಟ್ ವೃತ್ತದಲ್ಲಿ ಘಟನೆ ನಡೆದಿದೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ವಾಹನ ಚಾಲಕ ಬಸ್ ನಿಲ್ಲಿಸಿ ವಾಹನದಲ್ಲಿದ್ದ ಮಕ್ಕಳನ್ನು ಕೆಳಗಿಸಿದ್ದಾನೆ. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ