ಬೆಂಗಳೂರು: ಎರಡು ದಿನದ ಹಿಂದೆ ಪತ್ತೆಯಾಗಿದ್ದ ಅಪರಿಚಿತ ಶವವನ್ನು ಗುರುತಿಸಲು ಪೊಲೀಸರಗೆ ನೆರವಾಗಿದ್ದು, ಕೋವಿಡ್ ತಡೆಗೆ ಧರಿಸಲಾಗುವ ಒಂದು ಮಾಸ್ಕ್. ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ತಮಿಳುನಾಡಿನಿಂದ ಮರಳು ತುಂಬಿಕೊಂಡು ಬಂದಿದ್ದ ಟಿಪ್ಪರ್ ಲಾರಿಯಲ್ಲಿ ಪತ್ತೆಯಾಗಿದ್ದ ಯುವಕನ ಮೃತದೇಹದ ಗುರುತು ಹಿಡಿಯಲಾಗಿದೆ. ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಶವ ಪತ್ತೆಯಾದ ನಂತರ ತಮಿಳುನಾಡು ಕ್ವಾರಿ ಹಾಗೂ ಕೆ.ಆರ್.ಪುರಂನ ಲಾರಿ ತಂಗುದಾಣಗಳಲ್ಲಿ ವಿಚಾರಣೆ ನಡೆಸಿಲಾಗಿತ್ತು. ಆದರೆ, ಈ ಕುರಿತು ಯಾವುದೆ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೃತದೇಹದ ಪರಿಶೀಲನೆ ನಡೆಸಿದಾಗ, ಮುಖಕ್ಕೆ ಧರಿಸಿದ್ದ ಮಾಸ್ಕ್ ಪತ್ತೆಯಾಗಿತ್ತು. ನಂತರ ಮಾಸ್ಕ್ ಮೇಲಿನ ಹೆಸರು ನೋಡಿದಾಗ ಯುವಕನ ಬಗ್ಗೆ ಮಾಹಿತಿ ಪಡೆಯಲು ಸಹಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಯುವಕ ಹೊಸಕೋಟೆ ಬಳಿ ವಾಸ್ತವ್ಯದ ಬಗ್ಗೆ ಮಾಹಿತಿ ಸಂಗ್ರಹವಾಗಿದೆ. ಹೊಸಕೋಟೆಯಲ್ಲಿ ಪಿ.ಯು.ಸಿ ಓದುತ್ತಿದ್ದ ಸೋಮನಾಥ್(18) ಎಂದು ತಿಳಿದುಬಂದಿದೆ. ಇದೇ ತಿಂಗಳು ಐದನೇ ತಾರಿಖಿನಂದು ಮನೆಯಿಂದ ನಾಪತ್ತೆಯಾಗಿದ್ದು, ಕುಟುಂಬದವರು ಹೊಸಕೋಟೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು.
ನಂತರ ಮರಳು ಸಾಗಿಸುವ ಟಿಪ್ಪರ್ ಲಾರಿಯಲ್ಲಿ ಒಂದು ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಈ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಮಾರತಹಳ್ಳಿ ಪೊಲೀಸರು ಹೆಚ್ಚಿನ ತನಿಖೆ ನಡೆಸಿದರು. ಆಗ ಮುಖಕ್ಕೆ ಧರಿಸಿದ ಮಾಸ್ಕ್‌ನಿಂದ ಶವವನ್ನು ಗುರುತುಹಿಡಿಯಲು ಅನುಕೂಲವಾಗಿದೆ ಎಂದು ಪೊಲೀಸರು ತಿಳಿಸಿದರು.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಸಾವಿನ ಹಿನ್ನೆಲೆ ತಿಳಿದುಬಂದಿದೆ. ಸೋಮನಾಥ್ ಅಪರಿಚಿತ ಯುವತಿ ಜತೆ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟಿಂಗ್ ಮಾಡುತ್ತಿದ್ದ. ಅಲ್ಲಿನ ಮೆಸೇಜ್‌ಗಳನ್ನು ಸ್ನೇಹಿತರು ಸ್ಕ್ರೀನ್‌ಶಾಟ್ ತೆಗೆದಿದ್ದರು. ನಂತರ ಅವುಗಳನ್ನು ಕಾಲೇಜು ಸ್ನೇಹಿತರ ಗ್ರೂಪ್ ನಲ್ಲಿ ಹಾಕಿ ತಮಾಷೆ ಮಾಡಿದ್ದರು. ಇಪ್ಪತ್ತು ಮಂದಿ ಇದ್ದ ಆ ಗುಂಪಿನಲ್ಲಿ ಆ ಹುಡುಗಿ ಹಾಗೂ ಸೋಮನಾಥ್ ಬಗ್ಗೆ ಚರ್ಚೆ ನಡೆಸಿ ತಮಾಷೆ ಮಾಡಿದ್ದರು. ಈ ಕಾರಣದಿಂದ ಬೇಸರಗೊಂಡು ಸೋಮನಾಥ್ ಆ ಗುಂಪನ್ನು ಬಿಟ್ಟು ಹೊರಹೋಗಿದ್ದ.. ಆದರೆ, ಅದೇ ರಾತ್ರಿ ಡೆತ್ ನೋಟ್ ಬರೆದು ಮನೆ ಬಿಟ್ಟು ಹೋಗಿದ್ದ.
ಆದರೆ, ಕಾಣೆಯಾದ ಸೋಮನಾಥ್ ಶವವಾಗಿ ಪತ್ತೆಯಾಗಿದ್ದು ಕುಟುಂಬದವರಿಗೆ ಆಘಾತ ಉಂಟುಮಾಡಿದೆ. ಪ್ರಾಥಮಿಕ ತನಿಖೆಯಲ್ಲಿ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡಿಬಂದಿಲ್ಲ. ಹಾಗಾಗಿ ಯುವಕ ವಿಷ ಸೇವಿಸಿ ಲಾರಿ ಹತ್ತಿ ಮಲಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸೋಮವಾರ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಸಾವಿನ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಅಕ್ಕ ಎಷ್ಟೇ ಗೋಗರೆದರೂ ಕೇಳದೆ ನೇಣು ಬಿಗಿದುಕೊಂಡ ಎಂಬಿಬಿಎಸ್ ವಿದ್ಯಾರ್ಥಿ