ಬೆಂಗಳೂರು: ಬೆಂಗಳೂರಿನಲ್ಲಿ ಮೊಬೈಲ್ ಚಾರ್ಜರ್ (Mobile Charger) ಬಳಸುವಾಗ ಎಲೆಕ್ಟ್ರಿಕ್ ಶಾಕ್ (Electric Shock) ಹೊಡೆದು ವಿದ್ಯಾರ್ಥಿಯೊಬ್ಬ (Student Death) ಸಾವಿಗೀಡಾಗಿದ್ದಾನೆ. ಮಂಜುನಾಥ್ ನಗರದ ಪಿಜಿಯಲ್ಲಿ ವಾಸವಿದ್ದ ವಿದ್ಯಾರ್ಥಿ ದುರ್ಮರಣ (Death by shock) ಹೊಂದಿದ್ದಾನೆ.
ಬೀದರ್ ಮೂಲದ ಶ್ರೀನಿವಾಸ್ (24) ಸಾವನ್ನಪ್ಪಿದ ವಿದ್ಯಾರ್ಥಿ. ಇವರು ಬೀದರ್‌ನಿಂದ ಬೆಂಗಳೂರಿಗೆ ಬಂದು ಸಾಫ್ಟ್‌ವೇರ್ ಕೋರ್ಸ್ ಮಾಡುತ್ತಿದ್ದರು. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಪಿಜಿಯಲ್ಲಿ ಶ್ರೀನಿವಾಸ್ ಇದ್ದ ರೂಮ್‌ನಲ್ಲೇ ಘಟನೆ ನಡೆದಿದೆ. ಮೊಬೈಲ್ ಚಾರ್ಜ್ ಹಾಕಲು ಹೋದಾಗ ಎಲೆಕ್ಟ್ರಿಕ್ ಶಾಕ್ ಹೊಡೆದಿದ್ದು, ಚಾರ್ಜಿಂಗ್ ವೈರ್ ಅಥವಾ ಸ್ವಿಚ್ ಬೋರ್ಡ್‌ನಿಂದ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಅವರು ಬಳಸುತ್ತಿದ್ದ ಮೊಬೈಲ್ ಚಾರ್ಜರ್ ವೈರ್ ಕೂಡ ಸ್ವಲ್ಪ ಡ್ಯಾಮೇಜ್ ಆಗಿತ್ತು ಎನ್ನಲಾಗಿದೆ. ಕರೆಂಟ್ ಶಾಕ್ ತಗುಲಿ ಅಂಗಾತ ಬಿದ್ದಿದ್ದ ಶ್ರೀನಿವಾಸ್‌ರನ್ನು, ಈ ವೇಳೆ ಊಟಕ್ಕೆ ಬಾ ಎಂದು ಕರೆಯಲು ಬಂದ ಪಕ್ಕದ ಬೆಡ್ ಹುಡುಗ ಕಂಡು ಮೈಮುಟ್ಟಿ ಕರೆಯಲು ಮುಂದಾಗಿದ್ದಾನೆ. ಈ ವೇಳೆ ಆತನಿಗೂ ಶ್ರೀನಿವಾಸ್ ಮೈಯಿಂದ ಕರೆಂಟ್ ಶಾಕ್ ತಗುಲಿದೆ. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪಿಜಿ ಸಿಬ್ಬಂದಿ ತಕ್ಷಣ ಬಸವೇಶ್ವರ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.
ಪರ ಸ್ತ್ರೀಯೊಂದಿಗೆ ಲಾಡ್ಜಿಗೆ ಬಂದು ಶವವಾದ ಭೂಪ!
ಚಿತ್ರದುರ್ಗ: ವಿವಾಹಿತೆ ಪರ ಸ್ತ್ರೀಯ ಜೊತೆಗೆ ಲಾಡ್ಜಿಗೆ ಹೋದ ವಿವಾಹಿತನೊಬ್ಬ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದಾನೆ. ಚಿತ್ರದುರ್ಗ ನಗರದ ಸರ್ಕಾರಿ ಬಸ್ ನಿಲ್ದಾಣದ ಎದುರಿನ ಲಾಡ್ಜ್‌ನಲ್ಲಿ ಘಟನೆ ನಡೆದಿದೆ.
ಹರಿಹರ ಮೂಲದ ಗೋಪಾಲ ಟಿ. ಸಾವನ್ನಪ್ಪಿದ ದುರ್ದೈವಿ. ಇವರು ವಿವಾಹಿತೆಯಾದ ಪರಸ್ತ್ರೀ ಪವಿತ್ರ ಎಂಬಾಕೆಯೊಂದಿಗೆ ಲಾಡ್ಜ್‌ಗೆ ಬಂದಿದ್ದರು. ಪವಿತ್ರ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದವಳು. ಕಳೆದ ಒಂದು ವರ್ಷದ ಹಿಂದೆ ಪವಿತ್ರ-ಗೋಪಾಲ ಪರಸ್ಪರ ಪರಿಚಯವಾಗಿದ್ದರು. ಕಳೆದ 6 ತಿಂಗಳಿಂದ ಪರಸ್ಪರ ದೈಹಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಗೋಪಾಲ ಕಳೆದ 5 ವರ್ಷದ ಹಿಂದೆ ದಾವಣಗೆರೆಯ ದುರ್ಗಮ್ಮ ಎಂಬವರನ್ನು ವಿವಾಹವಾಗಿದ್ದ. ಹೆಂಡತಿ ಇದ್ದರೂ ಪರಸ್ತ್ರೀ ಸಹವಾಸ ಬಿಡದ ಗೋಪಾಲ, ಪವಿತ್ರ ಜೊತೆಗೆ ಕಳೆದ ಜುಲೈ 4ರ ಮಧ್ಯಾಹ್ನ 3:11ಕ್ಕೆ ಲಾಡ್ಜ್‌ಗೆ ಬಂದಿದ್ದ. ಅದೇ ರಾತ್ರಿ ಲಾಡ್ಜಿನಲ್ಲೇ ಕುಸಿದು ಬಿದ್ದಿದ್ದ. ರಾತ್ರಿ 7:15ಕ್ಕೆ ಎದೆ ನೋವಿನಿಂದ ಕುಸಿದು ಬಿದ್ದಿದ್ದ ಎಂದು ಪವಿತ್ರ ತಿಳಿಸಿದ್ದಾಳೆ.
ಗೋಪಾಲ- ಪವಿತ್ರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಗೋಪಾಲ ಕುಟುಂಬ ಹೆಚ್ಚಿನ ತನಿಖೆಗೆ ಆಗ್ರಹಿಸಿದೆ. ಪೊಲೀಸರು ಪವಿತ್ರಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!