Site icon Vistara News

Deepfake Case: ವಿದ್ಯಾರ್ಥಿನಿಯ ಡೀಪ್‌ ಫೇಕ್‌ ಫೋಟೋ ಸೃಷ್ಟಿ ಮಾಡಿದ ಅದೇ ಶಾಲೆಯ 2 ಹುಡುಗರು ಡಿಬಾರ್

deep fake case

ಬೆಂಗಳೂರು: ಖಾಸಗಿ ಶಾಲೆಯ (private school) ವಿದ್ಯಾರ್ಥಿನಿಯೊಬ್ಬರ ಫೋಟೋವನ್ನು ಡೀಪ್‌ ಫೇಕ್‌ ಮೂಲಕ ನಗ್ನವಾಗಿ ಕ್ರಿಯೇಟ್‌ ಮಾಡಿ (student Deepfake Photo case) ಇನ್‌ಸ್ಟಾಗ್ರಾಂನಲ್ಲಿ (Instagram) ಹಂಚಿಕೊಂಡ ಪ್ರಕರಣದಲ್ಲಿ, ಅದೇ ಶಾಲೆಯ 2 ವಿದ್ಯಾರ್ಥಿಗಳನ್ನು ಅಮಾನತು (debar) ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಶಾಲಾ ಪ್ರಿನ್ಸಿಪಾಲರು ಅಮಾನತು ಮಾಡಿದ್ದಾರೆ. ಡೀಪ್ ಫೇಕ್ ತಂತ್ರಜ್ಞಾನ ಬಳಸಿ ತಮ್ಮ ಶಾಲೆಯ ವಿದ್ಯಾರ್ಥಿನಿಯೊಬ್ಬರ ಅರೆನಗ್ನ ಫೋಟೋ ಸೃಷ್ಟಿಸಿ ಅದನ್ನು ವಿದ್ಯಾರ್ಥಿಗಳೇ ಇರುವ ಇನ್‌ಸ್ಟಗ್ರಾಂ ಗ್ರೂಪ್‌ ಒಂದರಲ್ಲಿ ಹಂಚಿಕೊಂಡು ವೈರಲ್‌ ಮಾಡಿದ ಆರೋಪ ಇವರ ಮೇಲಿದೆ.

ಮೇ 24ರಂದು 9ನೇ ತರಗತಿಯ ವಿದ್ಯಾರ್ಥಿನಿಯರ ಫೋಟೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು. ಇದರಿಂದ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಬೆಚ್ಚಿ ಬಿದ್ದಿದ್ದರು. ವಿದ್ಯಾರ್ಥಿನಿಯರು ಶಾಕ್‌ಗೆ ಒಳಗಾಗಿ, ಖಿನ್ನತೆಗೆ ಜಾರುವ ಪರಿಸ್ಥಿತಿ ತಲುಪಿದ್ದರು. ಆತಂಕಿತಗೊಂಡ ವಿದ್ಯಾರ್ಥಿನಿಯ ಪೋಷಕರು ಸೈಬರ್ ಸೆಲ್‌ಗೆ ದೂರು ನೀಡಿದ್ದರು.

ಪ್ರಕರಣವನ್ನು ಶಾಲೆ ಆಡಳಿತ ಮಂಡಳಿ ಹಾಗೂ ಸೈಬರ್‌ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಈ ಕೃತ್ಯವನ್ನು ತಾವೇ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಅರೆನಗ್ನ ಫೋಟೋಗೆ ಹಲವು ಮಂದಿ ವಿಕೃತವಾದ, ಆತಂಕಪಡಿಸುವಂಥ ಕಾಮೆಂಟ್‌ಗಳನ್ನೂ ಹಾಕಿದ್ದಾರೆ. ಇವರನ್ನೂ ಹುಡುಕಿ ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಸೈಬರ್‌ ಪೊಲೀಸರು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಡೀಪ್‌ ಫೇಕ್‌ ತಂತ್ರಜ್ಞಾನ ನೀಡಿದವರು ಯಾರು, ಈ ಬಗೆಯ ಫೋಟೋ ಸೃಷ್ಟಿಸಲು ತರಬೇತಿ ನೀಡಿದವರು ಯಾರು, ಇವರಿಗೆ ಇರಬಹುದಾದ ಹೊರಗಿನ ಬೆಂಬಲ ಇತ್ಯಾದಿಗಳ ಬಗ್ಗೆಯೂ ಗಮನ ಹರಿಸಲಾಗುತ್ತಿದೆ.‌

ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ವೈದ್ಯರಿಗೆ ಲಕ್ಷಗಟ್ಟಲೆ ರೂಪಾಯಿ ವಂಚನೆ

ಕಲಬುರಗಿ: ಸಿಬಿಐ ಅಧಿಕಾರಿಗಳ (CBI Officers) ಹೆಸರಿನಲ್ಲಿ ಸಂಪರ್ಕಿಸಿ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರೊಬ್ಬರಿಂದ 76 ಲಕ್ಷ ರೂ.ಗಳಷ್ಟು ಹಣವನ್ನು ವಂಚಿಸಿದ (Cyber Crime) ಘಟನೆ ನಡೆದಿದೆ. ಕಲಬುರಗಿಯ (Kalaburagi news) ಪ್ರತಿಷ್ಠಿತ ವೈದ್ಯ ಪಿ. ಎಸ್ ಶಂಕರ್ ಎಂಬವರು ಹೀಗೆ ವಂಚನೆಗೆ (Fraud Case) ಒಳಗಾಗಿ 76 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಡಾ. ಪಿ‌.ಎಸ್ ಶಂಕರ್ ಅವರು ಕಲಬುರಗಿ ನಗರದ ಕೆಬಿಎನ್ ಆಸ್ಪತ್ರೆಯಲ್ಲಿ ಎಮಿರೆಟ್ಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೇ 14ರಂದು ವೈದ್ಯರಿಗೆ ವಿಜಯ್ ಕುಮಾರ್ ಚೌಬೆ ಎಂಬಾತ ಕರೆ ಮಾಡಿದ್ದು, ತಾನು ಮುಂಬಯಿ ಕ್ರೈಂ ಬ್ರಾಂಚ್ ಆಫೀಸರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಮುಂಬಯಿಯಲ್ಲಿ ನಿಮ್ಮ ವಿರುದ್ಧ ಮನಿ ಲಾಂಡ್ರಿಂಗ್ ಕೇಸ್ ಆಗಿದೆ ಎಂದು ಬೆದರಿಸಿದ್ದಾನೆ.

ಮನಿ ಲಾಂಡ್ರಿಂಗ್ (Money Laundering) ಕೇಸ್ ಸಂಬಂಧ ನಿಮ್ಮನ್ನು ವಿಚಾರಣೆ ಮಾಡಬೇಕಾಗಿದೆ. ನಿಮ್ಮ ಹೆಸರಲ್ಲಿ ಎಲ್ಲೆಲ್ಲಿ ಬ್ಯಾಂಕ್ ಅಕೌಂಟ್ ಇದೆ, ಯಾವ್ಯಾವ ಬ್ಯಾಂಕ್‌ನಲ್ಲಿ ಎಷ್ಟು ಹಣ ಇದೆ ಎಂದು ಮಾಹಿತಿ ನೀಡಿ ಎಂದು ಬೆದರಿಸಿ ಮಾಹಿತಿ ಪಡೆದಿದ್ದಾನೆ. ಈ ವಿಚಾರ ಹೊರಗಡೆ ಎಲ್ಲೂ ಹೇಳದಂತೆ ಹಾಗೂ ತಾವಿರುವ ಸ್ಥಳ ಬಿಟ್ಟು ಹೋಗದಂತೆ ಸೂಚನೆ ನೀಡಿದ್ದಾನೆ. ಬಳಿಕ, ನಿಮ್ಮ ವಿರುದ್ಧ ಸುಪ್ರೀಂ ಕೋರ್ಟ್ ಆರೆಸ್ಟ್ ವಾರೆಂಟ್ ಜಾರಿ ಮಾಡಿದೆ, ಸಿಬಿಐನವರು ನಿಮ್ಮನ್ನು ಆರೆಸ್ಟ್ ಮಾಡಬಹುದು ಎಂದು ಹೆದರಿಸಿದ್ದಾನೆ.

ನಿಮಗೆ ತೊಂದರೆ ಆಗಬಾರದು ಅಂದರೆ ಸಿಬಿಐ ಹಿರಿಯ ಅಧಿಕಾರಿಗಳಿಗೆ ಪ್ರಿಯಾರಿಟಿ ಎನ್‌ಕ್ವೈಯರಿ ಮಾಡುವಂತೆ ಮನವಿ ಮಾಡಿಕೊಳ್ಳಬೇಕು ಎಂದಿದ್ದಾನೆ. ಅದರಂತೆ ಸಿಬಿಐ ಅಧಿಕಾರಿಗಳಿಗೆ ಪತ್ರ ಬರೆಯಲು ಮುಂದಾದ ವೈದ್ಯ ಶಂಕರ್‌ಗೆ, ಸಿಬಿಐ ಅಧಿಕಾರಿ ಆಕಾಶ್ ಪುಲ್ಹರಿ ಎಂಬ ಹೆಸರಿನವನನ್ನು ಪರಿಚಯಿಸಿದ್ದಾನೆ. ಪುಲ್ಹರಿಗೆ ಪತ್ರ ಬರೆದು ವೈದ್ಯರು ಮನವಿ ಮಾಡಿಕೊಂಡಿದ್ದಾರೆ. ಸ್ಕೈಪ್ ಆಪ್ ಮೂಲಕ ವೈದ್ಯರನ್ನು ಸಂಪರ್ಕಿಸಿದ ಆಕಾಶ್ ಪುಲ್ಹರಿ, ಬಳಿಕ ವೈದ್ಯರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ದಾಖಲಾಗಿರುವುದಾಗಿ ನಂಬಿಸಿದ್ದಾನೆ.

ನಂತರ ವೈದ್ಯರ ಅಕೌಂಟ್‌ನಲ್ಲಿರುವ ಹಣದ ಬಗ್ಗೆ ಮಾಹಿತಿ ಪಡೆದು, ತಕ್ಷಣ ತನ್ನ ಅಕೌಂಟ್‌ಗೆ ಹಣ ಟ್ರಾನ್ಸ್‌ಫರ್ ಮಾಡಿಸಿಕೊಂಡಿದ್ದಾನೆ. ಹಣ ಕಳೆದುಕೊಂಡ ಬಳಿಕ ವೈದ್ಯರಿಗೆ ತಾವು ಮೋಸ ಹೋಗಿರುವ ಕುರಿತು ಜ್ಞಾನೋದಯವಾಗಿದೆ. ಈ ಬಗ್ಗೆ ದೂರು ದಾಖಲು ಮಾಡಿದ್ದಾರೆ. ಕಲಬುರಗಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ನಕಲಿ ಸಿಬಿಐ ಅಧಿಕಾರಿಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Deep fake Scam : ಸೆಲೆಬ್ರಿಟಿಗಳ ಬಳಿಕ ಈಗ ಬೆಂಗಳೂರು ಶಾಲಾ ವಿದ್ಯಾರ್ಥಿನಿಯರಿಗೆ ಡೀಪ್‌ಫೇಕ್‌ ಕಾಟ; ನಗ್ನ ಫೋಟೋ ವೈರಲ್

Exit mobile version