ನವದೆಹಲಿ: ತನ್ನ ಜತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾ ವಾಳ್ಕರ್‌ಳನ್ನು (Delhi Crime) ಭೀಕರವಾಗಿ ಹತ್ಯೆಗೈದ ಅಫ್ತಾಬ್ ಅಮೀನ್ ಪೂನಾವಾಲಾನನ್ನು ನಾರ್ಕೊ ಟೆಸ್ಟ್‌ಗೆ (ಮಂಪರು ಪರೀಕ್ಷೆ) ಒಳಪಡಿಸುವ ಕುರಿತು ದೆಹಲಿ ಪೊಲೀಸರು ಮಾಡಿದ ಮನವಿಗೆ ಕೋರ್ಟ್ ಸಮ್ಮತಿ ಸೂಚಿಸಿದೆ. ಹಾಗಾಗಿ, ಎಲ್ಲರ ಗಮನ ಈಗ ಮಂಪರು ಪರೀಕ್ಷೆಯ ವರದಿ ಮೇಲೆ ನೆಟ್ಟಿದೆ.
ಕಳೆದ ಮೇ ತಿಂಗಳಲ್ಲಿಯೇ ಶ್ರದ್ಧಾಳನ್ನು ಹತ್ಯೆಗೈದು, ಶವವನ್ನು ಫ್ರಿಡ್ಜ್‌ನಲ್ಲಿ ಇಟ್ಟು, 35 ಭಾಗಗಳಾಗಿ ತುಂಡರಿಸಿ ದೆಹಲಿಯ ಹಲವೆಡೆ ಅವುಗಳನ್ನು ಎಸೆದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಆದರೆ, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಗೆ ಅಫ್ತಾಬ್ ಸಹಕಾರ ನೀಡುತ್ತಿಲ್ಲ. “ಅಫ್ತಾಬ್ ಹೇಳಿಕೆಗಳನ್ನು ಬದಲಾಯಿಸುತ್ತಿದ್ದು, ತನಿಖೆಗೆ ಸಹಕರಿಸುತ್ತಿಲ್ಲ. ಹಾಗಾಗಿ, ನಾರ್ಕೊ ಟೆಸ್ಟ್‌ಗೆ ಅನುಮತಿ ನೀಡಬೇಕು” ಎಂದು ದೆಹಲಿ ಪೊಲೀಸರು ಸಾಕೇತ್ ಕೋರ್ಟ್‌ಗೆ ಮನವಿ ಮಾಡಿದ್ದರು. ಇದಕ್ಕೆ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಏನಿದು ನಾರ್ಕೊ ಟೆಸ್ಟ್?
ಒಬ್ಬ ವ್ಯಕ್ತಿಯನ್ನು ಅರೆ ಪ್ರಜ್ಞಾವಸ್ಥೆಗೆ ತಲುಪಿಸಿ, ಆತನಿಂದ ಸತ್ಯ ಬಹಿರಂಗಪಡಿಸುವ ವಿಧಾನವೇ ನಾರ್ಕೊ ಟೆಸ್ಟ್ ಆಗಿದೆ. ವ್ಯಕ್ತಿಯಿಂದ ಸತ್ಯ ಬಾಯಿಬಿಡಿಸಲು ಸೋಡಿಯಂ ಪೆಂಟೋಥಾಲ್‌ಅನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಆಗ, ವ್ಯಕ್ತಿಯ ಪ್ರಜ್ಞಾವಸ್ಥೆ ಕುಂಠಿತಗೊಂಡು, ಯಾವುದೇ ಸುಳ್ಳು ಹೇಳಲು ಆಗದಂತಾಗುತ್ತದೆ. ಆತ ಮುಕ್ತವಾಗಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ಪರೀಕ್ಷೆಗೆ ಒಳಗಾಗುವ ವ್ಯಕ್ತಿ ಆರೋಗ್ಯದಿಂದ ಇದ್ದಾಗ ಮಾತ್ರ ನಾರ್ಕೊ ಟೆಸ್ಟ್‌ಗೆ ಒಳಪಡಿಸಲಾಗುತ್ತದೆ.
ಅಫ್ತಾಬ್‌ಗೆ ಚಿಕಿತ್ಸೆ ನೀಡಿದ ವೈದ್ಯ ಪತ್ತೆ
ಕೃತ್ಯ ಎಸಗುವ ವೇಳೆ ಗಾಯಗೊಂಡ ಅಫ್ತಾಬ್ ಅಮೀನ್ ಪೂನಾವಾಲಾನಿಗೆ ಚಿಕಿತ್ಸೆ ನೀಡಿದ ವೈದ್ಯರೊಬ್ಬರನ್ನು ಪತ್ತೆಹಚ್ಚುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಫ್ತಾಬ್ ಮೊಣಕೈಗೆ ಗಾಯಗೊಂಡಿದ್ದು, ಐದಾರು ಹೊಲಿಗೆ ಹಾಕುವ ಮೂಲಕ ವೈದ್ಯರೊಬ್ಬರು ಚಿಕಿತ್ಸೆ ನೀಡಿದ್ದರು. ಈ ವೈದ್ಯರನ್ನು ಪೊಲೀಸರು ಪತ್ತೆಹಚ್ಚಿದ್ದು, ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಮಾಡಿದ್ದಾರೆ.
ಇದನ್ನೂ ಓದಿ | Delhi crime | ಶ್ರದ್ಧಾ ತಲೆಯನ್ನು ಫ್ರಿಜ್ಜಿನಲ್ಲಿಟ್ಟು ಪ್ರತಿದಿನ ನೋಡುತ್ತಿದ್ದ ಸೈಕೋ ಅಫ್ತಾಬ್