Site icon Vistara News

Delhi Metro: ಮಹಿಳೆಯನ್ನು 25 ಮೀಟರ್‌ ಎಳೆದೊಯ್ದ ಮೆಟ್ರೋ ರೈಲು, ಆಸ್ಪತ್ರೆಯಲ್ಲಿ ಸಾವು

delhi metro

delhi metro

ಹೊಸದಿಲ್ಲಿ: ದಿಲ್ಲಿ ಮೆಟ್ರೋದಲ್ಲಿ (Delhi Metro) ಅಪಘಾತವೊಂದು ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೆಟ್ರೋ ರೈಲಿನ ಬಾಗಿಲಿಗೆ ಮಹಿಳೆಯೊಬ್ಬರ ಸೀರೆ ಸಿಲುಕಿಕೊಂಡಿದ್ದು, ಸುಮಾರು 25 ಮೀಟರ್‌ ಎಳೆದುಕೊಂಡು ಹೋಗಿದೆ. ತೀವ್ರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ (ಡಿಸೆಂಬರ್‌ 16) ಮೃತಪಟ್ಟಿದ್ದಾರೆ. ಮೃತರನ್ನು 35 ವರ್ಷದ ರೀನಾ ಎಂದು ಗುರುತಿಸಲಾಗಿದೆ.

ಘಟನೆಯ ವಿವರ

ದಿಲ್ಲಿಯ ಇಂದ್ರಲೋಕ್‌ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ರೀನಾ ಅವರಿಗೆ ಚಿಕಿತ್ಸೆ ನೀಡಲಾಗುತಿತ್ತು. “ಇಂದರ್ಲೋಕ್ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಈ ಅಪಘಾತ ನಡೆದಿದೆ. ಮಹಿಳೆಯೊಬ್ಬರ ಸೀರೆ ರೈಲಿನ ಬಾಗಿಲಿಗೆ ಸಿಲಿಕಿಕೊಂಡಿತ್ತು. ಬಳಿಕ 25 ಮೀಟರ್‌ಗಳಷ್ಟು ದೂರ ಫ್ಲಾಟ್‌ಫಾರ್ಮ್‌ನಲ್ಲಿ ಅವರನ್ನು ರೈಲು ಎಳೆದೊಯ್ದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ನಿಧನರಾದರು” ಎಂದು ದೆಹಲಿ ಮೆಟ್ರೋದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನುಜ್ ದಯಾಳ್ ತಿಳಿಸಿದ್ದಾರೆ.

ʼʼಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸಲಿದ್ದಾರೆʼʼ ಎಂದು ದಯಾಳ್ ಮಾಹಿತಿ ನೀಡಿದ್ದಾರೆ. ʼʼಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದುʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೀನಾ ಪಶ್ಚಿಮ ದಿಲ್ಲಿಯ ನಂಗ್ಲೋಯಿಯಿಂದ ಮೋಹನ್ ನಗರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ರೀನಾ ಅವರ ಸಂಬಂಧಿ ವಿಕ್ಕಿ ಮಾಹಿತಿ ನೀಡಿದ್ದಾರೆ. “ರೀನಾ ಇಂದ್ರಲೋಕ್‌ ಮೆಟ್ರೋ ನಿಲ್ದಾಣವನ್ನು ತಲುಪಿ ರೈಲು ಬದಲಾಯಿಸುತ್ತಿದ್ದಾಗ, ಅವರ ಸೀರೆ ಬಾಗಿಲಿಗೆ ಸಿಕ್ಕಿ ಹಾಕಿಕೊಂಡಿತ್ತು. ನೆಲಕ್ಕೆ ಬಿದ್ದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಸಂಜೆ ಅವರು ನಿಧನರಾದರು” ಎಂದು ವಿಕ್ಕಿ ಹೇಳಿದ್ದಾರೆ. ರೀನಾ ಅವರಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾರೆ. ರೀನಾ ಅವರ ಪತಿ ಸುಮಾರು ಏಳು ವರ್ಷಗಳ ಹಿಂದೆ ನಿಧನರಾಗಿದ್ದರು ಎಂದು ವಿಕ್ಕಿ ಹೇಳಿದ್ದಾರೆ.

ತರಕಾರಿ ವ್ಯಾಪಾರಿಯಾಗಿರುವ ರೀನಾ ತಮ್ಮ ಪುತ್ರನೊಂದಿಗೆ ಮದುವೆ ಸಮಾರಂಭವೊಂದಕ್ಕೆ ತೆರಳುತ್ತಿದ್ದರು. ಈ ವೇಳೆ ಇಂದ್ರಲೋಕ್‌ ಮೆಟ್ರೋ ನಿಲ್ದಾಣದಲ್ಲಿ ಸಾಮಾನ್ಯ ಬೋಗಿಯನ್ನು ಹತ್ತಲು ಪ್ರಯತ್ನಿಸುತ್ತಿದ್ದಾಗ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 25 ಮೀಟರ್‌ಗಳನ್ನು ರೈಲು ಎಳೆದೊಯ್ದ ನಂತರ ರೀನಾ ಪ್ಲಾಟ್ಫಾರ್ಮ್‌ ಟ್ರ್ಯಾಕ್ ಪ್ರವೇಶ ಗೇಟ್‌ಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಅವರ ಪುತ್ರ ಹುಡುಗ ರೈಲು ಹತ್ತಿರಲಿಲ್ಲ ಎಂದು ಪೊಲೀಸ್‌ ವಿವರಿಸಿದ್ದಾರೆ.

ಇದನ್ನೂ ಓದಿ: Namma Metro : ಮೆಟ್ರೊದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಕೆಂಪು ಅಂಗಿಯವ ಯಾರು?

ಮೆಟ್ರೋ ರೈಲುಗಳಲ್ಲಿ ಸೆನ್ಸಾರ್‌ ಅಳವಡಿಸಲಾಗಿದ್ದು, ಯಾವುದೇ ರೀತಿಯ ಅಡಚಣೆ ಉಂಟಾದಾಗ ಬಾಗಿಲುಗಳು ಸ್ವಯಂಚಾಲಿತವಾಗಿ ತೆರೆಯುತ್ತವೆ. ಈ ಪ್ರಕರಣದಲ್ಲಿ ರೀನಾ ಅವರ ಸೀರೆ ತುಂಬ ತೆಳುವಾಗಿದ್ದರಿಂದ ಸೆನ್ಸಾರ್‌ ಅದನ್ನು ಪತ್ತೆ ಹಚ್ಚಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. “25 ಮಿಲಿಮೀಟರ್‌ಗಿಂತ ದಪ್ಪವಾದ ಬಟ್ಟೆಯನ್ನು ಮಾತ್ರ ಸೆನ್ಸಾರ್‌ ಪತ್ತೆಹಚ್ಚುತ್ತದೆ. ಅವರ ಸೀರೆ ಅದಕ್ಕಿಂತ ತೆಳುವಾಗಿತ್ತು” ಎಂದು ತಿಳಿಸಿದ್ದಾರೆ.

Exit mobile version