Site icon Vistara News

Dengue fever: ಮಾರಕ ಡೆಂಗ್ಯು ಜ್ವರಕ್ಕೆ ಬಾಲಕಿ ಬಲಿ

dengue fever hassan girl death

ಹಾಸನ: ಡೆಂಗ್ಯು ಜ್ವರದ (Dengue fever) ಪರಿಣಾಮ ಬಾಲಕಿಯೊಬ್ಬಳು (Girl death) ಮೃತಪಟ್ಟಿದ್ದಾಳೆ. ರಾಜ್ಯದಲ್ಲಿ ದಿನೇ ದಿನೆ ಡೆಂಗ್ಯು ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಸಣ್ಣ ಮಕ್ಕಳಲ್ಲಿ ಇದು ಮಾರಣಾಂತಿಕವಾಗುತ್ತಿರುವುದು ಆತಂಕ ಮೂಡಿಸಿದೆ.

ಹಾಸನ ತಾಲ್ಲೂಕಿನ, ಬೊಮ್ಮನಾಯಕಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಕ್ಷತಾ (13) ಮೃತಪಟ್ಟ ಬಾಲಕಿ. ಹಾಸನದ ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಅಕ್ಷತಾ, ಕೂಲಿ ಕೆಲಸ ಮಾಡುವ ಅಪ್ಪಣ್ಣಶೆಟ್ಟಿ ಹಾಗೂ ಪದ್ಮ ದಂಪತಿ ಪುತ್ರಿ. ಕಳೆದ ಬುಧವಾರ ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಬೊಮ್ಮನಾಯಕಹಳ್ಳಿ ಗ್ರಾಮದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಅಕ್ಷತಾ ಪೋಷಕರು ಚಿಕಿತ್ಸೆ ಕೊಡಿಸಿದ್ದರು. ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದವರಾದ ಅಕ್ಷತಾಳ ಪೋಷಕರು ಕೂಲಿ ಕೆಲಸ ಮಾಡುವ ಬಡವರಾಗಿದ್ದಾರೆ.

ಗುಣಮಖಳಾಗದಿದ್ದಾಗ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಚೇತರಿಸಿಕೊಳ್ಳದ ಅಕ್ಷತಾಳನ್ನು ನಂತರ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿ ಸ್ಥಿತಿ ಗಂಭೀರವಾಗುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಖಾಸಗಿ ಆಸ್ಪತ್ರೆ ವೈದ್ಯರು ಹೇಳಿದ್ದರು. ಬಳಿಕ ಪೋಷಕರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.

ರಾಜಧಾನಿಯಲ್ಲಿ ಡೆಂಗ್ಯು ಜ್ವರಕ್ಕೆ ಯುವಕನ ಬಲಿ

ಬೆಂಗಳೂರು: ಕಗ್ಗದಾಸಪುರದ 27 ವರ್ಷದ ಯುವಕ ಡೆಂಗ್ಯು ಸೋಂಕಿನಿಂದಲೇ (Dengue Fever) ಸಾವಿಗೀಡಾಗಿದ್ದಾರೆ ಎಂದು ಬಿಬಿಎಂಪಿ (BBMP) ಖಚಿತಪಡಿಸಿದೆ. ಕಳೆದ ಶುಕ್ರವಾರ ಎರಡು ಡೆಂಗ್ಯು ಶಂಕಿತ ಸಾವಿನ ಪ್ರಕರಣಗಳು ಸಂಭವಿಸಿದ್ದವು. ಇದರಲ್ಲಿ ಒಂದು ಸಾವು ಡೆಂಗ್ಯುವಿನಿಂದಾಗಿದೆ ಎಂದು ಬಿಬಿಎಂಪಿ ಹೆಲ್ತ್ ಆಡಿಟ್ (BBMP Health Audit) ಖಚಿತಪಡಿಸಿದೆ.

ಕಗ್ಗದಾಸಪುರದ ಯುವಕನ ಸಾವಿಗೆ ಡೆಂಗ್ಯು ಕಾರಣವವಾಗಿದೆ. ಆದರೆ 80ರ ವೃದ್ಧೆಯ ಸಾವಿಗೆ ಕ್ಯಾನ್ಸರ್ ಕಾರಣ ಎಂದು ಬಿಬಿಎಂಪಿ ಹೆಲ್ತ್ ಆಡಿಟ್ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ನಗರದಲ್ಲಿ ಸದ್ಯ 1743 ಆಕ್ಟಿವ್ ಡೆಂಗ್ಯು ಕೇಸ್‌ಗಳು ಇವೆ.

ಹೊಸದಾಗಿ 213 ಡೆಂಗ್ಯು ಪ್ರಕರಣಗಳ ಪತ್ತೆಯಾಗಿದ್ದು, ಜೂನ್ ತಿಂಗಳಲ್ಲಿ 1742 ಜನರಿಗೆ ಡೆಂಗ್ಯು ಸೋಂಕು ತಗುಲಿದೆ. ಮಹಿಳೆಯರು ಮತ್ತು ಮಕ್ಕಳು ಡೆಂಗ್ಯು ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ ಎನ್ನಲಾಗಿದ್ದು, ಗರ್ಭಿಣಿಯರಲ್ಲಿ ಡೆಂಗ್ಯು ಹೆಚ್ಚಿನ ಹಾನಿ ಎಸಗುತ್ತಿರುವುದರಿಂದಾಗಿ ಹೆಚ್ಚಿನ ಎಚ್ಚರ ವಹಿಸಲು ಸಲಹೆ ನೀಡಲಾಗಿದೆ.

ಇದೂವರೆಗೂ ನಗರದಲ್ಲಿ ಇಬ್ಬರು ಡೆಂಗ್ಯು ಜ್ವರಕ್ಕೆ ಬಲಿಯಾಗಿದ್ದಾರೆ. ಸಿವಿ ರಾಮನ್ ನಗರದ 27 ವರ್ಷದ ಯುವಕ ಡೆಂಗ್ಯು ಜ್ವರಕ್ಕೆ ಬಲಿಯಾಗಿದ್ದು, ಈತ ತೀವ್ರ ಜ್ವರದಿಂದ ಬಳಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾನೆ ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: Dengue Fever: ರಾಯಚೂರಲ್ಲಿ 6 ವರ್ಷದ ಮಗುವಿಗೆ ಡೆಂಗ್ಯೂ; ದಾವಣಗೆರೆ ಜಿಲ್ಲೆಯಲ್ಲಿ 142 ಪ್ರಕರಣಗಳು ಪತ್ತೆ!

Exit mobile version