Site icon Vistara News

Dharwad News: ರಥೋತ್ಸವ ವೇಳೆ ದುರಂತ; ರಥದ ಚಕ್ರಕ್ಕೆ ಸಿಲುಕಿ ಭಕ್ತ ಸಾವು

Dharwad News

Dharwad News

ಧಾರವಾಡ: ಬಸವ ಜಯಂತಿ (Basava Jayanti) ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಬಸವೇಶ್ವರ ಜಾತ್ರೆಯಲ್ಲಿ ದುರಂತವೊಂದು ಸಂಭವಿಸಿದ್ದು, ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ (Dharwad News). ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಬಾಬುಸಾಬ ಮಕಾಸಿ ಎಂದು ಗುರುತಿಸಲಾಗಿದೆ.

ಮಜ್ಜಿಗುಡ್ಡ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಯೋಜಿಸಲಾಗಿತ್ತು. ಸಂಜೆ ನಡೆದ ರಥೋತ್ಸವ ವೇಳೆ ರಥಕ್ಕೆ ಎಸೆಯುವ ಉತ್ತುತ್ತಿ ಅರಸಿಕೊಳ್ಳುವ ವೇಳೆ ಬಾಬುಸಾಬ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ರಥದ ಚಕ್ರ ಅವರ ಮೇಲೆ ಹರಿದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೇರಿನ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ದುರ್ಮರಣ

ಕೆಲವು ದಿನಗಳ ಹಿಂದೆ ಕಲಬುರಗಿಯಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ರಥದ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ಸಿಬ್ಬಂದಿ ಮೃತಪಟ್ಟಿದ್ದರು. ಕಲಬುರಗಿ ನಗರದಲ್ಲಿ ನಡೆದ ಶ್ರೀ ಶರಣ ಬಸವೇಶ್ವರ ಜಾತ್ರಾ ಮಹೋತ್ಸವದ ಭಾಗವಾಗಿ ಆಯೋಜಿಸಿದ್ದ ಉಚ್ಚಾಯಿ ರಥೋತ್ಸವದಲ್ಲಿ ತೇರಿನ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ಸಿಬ್ಬಂದಿ, ಬೀದರ್ ಜಿಲ್ಲೆ ಇಟಗಾ ಗ್ರಾಮದ ರಾಮು ಸಿದ್ದಪ್ಪ (28) ದುರ್ಮರಣ ಹೊಂದಿದ್ದರು. ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಉಂಟಾದ ಗದ್ದಲದ ವೇಳೆ ದುರಂತ ಸಂಭವಿಸಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಕತ್ತು ಹಿಸುಕಿ ಕೊಲೆ

ಬೆಂಗಳೂರು: ಒಂಟಿ ಮಹಿಳೆಯ ಕತ್ತು ಹಿಸುಕು ಕೊಲೆ‌ ಮಾಡಿರುವ ಘಟನೆ ನಗರದ ಹೊರವಲಯದ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ನಡೆದಿದೆ. ಮನೆ ಬಾಡಿಗೆ ಕೇಳುವ ನೆಪದಲ್ಲಿ ದುಷ್ಕರ್ಮಿಯೊಬ್ಬ ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಿವ್ಯಾ (32) ಕೊಲೆಯಾದ ಮಹಿಳೆ. ಮಹಿಳೆಯ ಗಂಡ ಗುರುಮೂರ್ತಿ ಕೆಲಸಕ್ಕೆಂದು ಸಲೂನ್‌ ಹೋಗಿದ್ದರು. ಈ ವೇಳೆ ಆರೋಪಿ, ಮಹಿಳೆಯ ಕತ್ತು ಹಿಸುಕಿ ಕೊಲೆಗೈದು ಕುತ್ತಿಯಲ್ಲಿದ್ದ ಚೈನ್ ಕದ್ದು ಪರಾರಿಯಾಗಿದ್ದಾನೆ. ಮಹಿಳೆಯ ಮೃತದೇಹವನ್ನು ಆರ್.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Road Accident : ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು; ಕರೆಂಟ್‌ ವೈರ್‌ ತಾಗಿ ವ್ಯಕ್ತಿ ಮೃತ್ಯು

ಮದುವೆಗೆ ನೋ ಎಂದ ಪ್ರಿಯಕರ; ಮನನೊಂದು ಯುವತಿ ಆತ್ಮಹತ್ಯೆ‌

ಕಲಬುರಗಿ: ಪ್ರಿಯಕರ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಮನನೊಂದು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೋಟನೂರು (ಡಿ) ಬಳಿ ಶುಕ್ರವಾರ ನಡೆದಿದೆ. ಪುಷ್ಪಾ (26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೌಲಗಾ ಗ್ರಾಮದ ಪುಷ್ಪಾ ಪದವಿ ವ್ಯಾಸಂಗ ಮುಗಿಸಿದ್ದು, ಆಳಂದ ತಾಲೂಕಿನ ಕೌಲಗಾ ಗ್ರಾಮದಿಂದ ಕಲಬುರಗಿ ನಗರಕ್ಕೆ ಬಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಹೀಗಾಗಿ ಕೋಟನೂರು ಬಳಿ ಬಾಡಿಗೆ ರೂಮ್‌ ಪಡೆದು ವಾಸವಾಗಿದ್ದಳು. ಈಕೆಯು ಕಳೆದ ನಾಲ್ಕು‌ ವರ್ಷದಿಂದ ಕಲಬುರಗಿಯ ಗಾಂಧಿನಗರದ ನಿವಾಸಿ ಕಿರಣ್ ಎಂಬುವರೊಂದಿಗೆ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.

Exit mobile version