Site icon Vistara News

Divya Pahuja: ದಿವ್ಯಾ ಪಹುಜಾ ಶವ ಪತ್ತೆ; ಕಾಲುವೆಯಲ್ಲಿತ್ತು ಮಾಜಿ ರೂಪದರ್ಶಿಯ ಮೃತದೇಹ

divya

divya

ನವದೆಹಲಿ: ಗುರುಗ್ರಾಮದ ಹೋಟೆಲ್​ನಲ್ಲಿ ಇತ್ತೀಚೆಗೆ ಅನುಮಾನಾಸ್ಪದವಾಗಿ ಕೊಲೆಯಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ(Divya Pahuja) ಅವರ ಮೃತದೇಹ ಇದೀಗ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ. ಹರಿಯಾಣದ ತೊಹ್ನಾದ ಕಾಲುವೆಯೊಂದರಲ್ಲಿ ದಿವ್ಯಾ ಪಹುಜಾ ಮೃತದೇಹ ಕಂಡು ಬಂದಿದೆ. ಪಹುಜಾ ಅವರ ಕುಟುಂಬ ಸದಸ್ಯರು ಆಕೆಯ ದೇಹವನ್ನು ಗುರುತಿಸಿದ್ದಾರೆ ಎಂದು ಗುರುಗ್ರಾಮ್ ಪೊಲೀಸರು ತಿಳಿಸಿದ್ದಾರೆ. ಗುರುಗ್ರಾಮ ಪೋಲೀಸರ ಆರು ತಂಡಗಳು ಪಹುಜಾಳ ದೇಹವನ್ನು ಹೊರತೆಗೆದಿವೆ. ಪಹುಜಾ ಹತ್ಯೆಯ ಆರೋಪಿಗಳ ಪೈಕಿ ಬಲರಾಜ್ ಗಿಲ್‌ನನ್ನು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ಪೊಲೀಸ್‌ ಅಧಿಕಾರಿ ಹೇಳಿದ್ದೇನು?

ʼʼಹರಿಯಾಣದ ಫತೇಹಾಬಾದ್ ಜಿಲ್ಲೆಯ ತೊಹ್ನಾ ಭಾಕ್ರಾ ಕಾಲುವೆಯಿಂದ ದಿವ್ಯಾ ಪಹುಜಾ ಅವರ ಶವವನ್ನು ವಶಪಡಿಸಿಕೊಳ್ಳಲಾಗಿದೆʼʼ ಎಂದು ಗುರುಗ್ರಾಮ್ ಸಹಾಯಕ ಪೊಲೀಸ್ ಆಯುಕ್ತ (ಅಪರಾಧ) ವರುಣ್ ಕುಮಾರ್ ದಹಿಯಾ ತಿಳಿಸಿದ್ದಾರೆ. ಈ ಮೂಲಕ ದಿವ್ಯಾ ಪಹುಜಾ ಕೊಲೆಯಾಗಿ 12 ದಿನಗಳ ಬಳಿಕ ಶವ ಪತ್ತೆಯಾದಂತಾಗಿದೆ.

ಸ್ನೇಹಿತನಿಂದಲೇ ಹತ್ಯೆಯಾಗಿದ್ದ ದಿವ್ಯಾ ಪಹುಜಾ

27 ವರ್ಷದ ಪಹುಜಾ ಅವರನ್ನು ಜನವರಿ 2ರಂದು ಗುರುಗ್ರಾಮದ ಹೋಟೆಲ್ ಕೋಣೆಯೊಂದರಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಆಕೆಯ ಸ್ನೇಹಿತ ಮತ್ತು ಹೋಟೆಲ್ ಮಾಲಕ ಅಭಿಜಿತ್‌ ಗುಂಡಿಕ್ಕಿ ಹತ್ಯೆ ಮಾಡಿದ್ದ. ಬಳಿಕ ಶವವನ್ನು ಬಿಎಂಡಬ್ಲ್ಯು ಕಾರಿನಲ್ಲಿಟ್ಟು ಅಭಿಜಿತ್‌ ಸಹಚರರಾದ ಬಾಲರಾಜ್ ಮತ್ತು ರವಿ ತೆಗೆದುಕೊಂಡು ಹೋಗಿದ್ದರು. ತನಿಖೆ ವೇಳೆ ಪಟಿಯಾಲ ಬಸ್ ನಿಲ್ದಾಣದ ಆವರಣದಲ್ಲಿ ನಿಂತಿದ್ದ ಬಿಎಂಡಬ್ಲ್ಯು ಕಾರು ಪತ್ತೆಯಾಗಿತ್ತು.

ಯಾರು ಈ ದಿವ್ಯಾ ಪಹುಜಾ

ಈಕೆ 2016ರಲ್ಲಿ ಗುರುಗ್ರಾಮ್‌ನ ಮೋಸ್ಟ್ ವಾಂಟೆಡ್ ದರೋಡೆಕೋರನಾಗಿದ್ದ ಸಂದೀಪ್ ಗಡೋಲಿಯ ಗರ್ಲ್‌ಫ್ರೆಂಡ್‌ ಆಗಿದ್ದಳು. ತನ್ನ ಬಾಯ್‌ಫ್ರೆಂಡ್‌ನ ನಕಲಿ ಎನ್‌ಕೌಂಟರ್‌ಗೆ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಪಹುಜಾ ಏಳು ವರ್ಷಗಳ ಕಾಲ ಜೈಲಿನಲ್ಲಿದ್ದಳು. ಕಳೆದ ವರ್ಷ ಜುಲೈನಲ್ಲಿ ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದಳು.

ಜನವರಿ 1ರಂದು ತನ್ನ ಸ್ನೇಹಿತ ಅಭಿಜಿತ್‌ ಸಿಂಗ್‌ನೊಂದಿಗೆ ಈಕೆ ಹೊರಗೆ ಹೋಗಿದ್ದಾಳೆ ಮತ್ತು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಕುಟುಂಬದಿಂದ ಗುರುಗ್ರಾಮ್‌ನ ಸೆಕ್ಟರ್ 14 ಪೊಲೀಸ್ ಠಾಣೆಯ ಅಧಿಕಾರಿಗಳು ದೂರು ಸ್ವೀಕರಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಗುರುಗ್ರಾಮ್‌ನಲ್ಲಿರುವ ಹೋಟೆಲ್ ಸಿಟಿ ಪಾಯಿಂಟ್‌ನಲ್ಲಿ ಆಕೆ ತಂಗಿದ್ದು ತಿಳಿದುಬಂದಿತ್ತು.

ಇದನ್ನೂ ಓದಿ: Model Murder: ಮೃತ ಗ್ಯಾಂಗ್‌ಸ್ಟರ್‌ ಪ್ರೇಯಸಿ, ಮಾಡೆಲ್‌ ಹತ್ಯೆ; ಈಕೆ 7 ವರ್ಷ ಜೈಲಿನಲ್ಲಿದ್ದಳು!

ಇದು ಅಭಿಜಿತ್‌ ಸಿಂಗ್ ಒಡೆತನದಲ್ಲಿದೆ. ಪಹುಜಾಳ ಫೋನ್ ಹಲವಾರು ಗಂಟೆಗಳ ಕಾಲ ಸ್ವಿಚ್ ಆಫ್ ಆಗಿತ್ತು. ಪೊಲೀಸರು ಹೋಟೆಲ್‌ಗೆ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಾರಿಡಾರ್‌ನಲ್ಲಿ ಶವವನ್ನು ಶೀಟ್‌ನಲ್ಲಿ ಸುತ್ತಿ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿತ್ತು. ಮಾಡೆಲ್ ಹತ್ಯೆಗೆ ಸಂಬಂಧಿಸಿ ಸಿಂಗ್ ಮತ್ತು ಅವನ ಇಬ್ಬರು ಸಹಾಯಕರನ್ನು ಬಂಧಿಸಲಾಗಿದೆ. ಮೃತದೇಹವನ್ನು ತನ್ನ ಬಿಎಂಡಬ್ಲ್ಯುನಲ್ಲಿ ಹಾಕಿ ಅದು ಸಿಗದಂತೆ ವಿಲೇವಾರಿ ಮಾಡಲು ಸಿಂಗ್ ತನ್ನ ಸಹಾಯಕರಿಗೆ ₹10 ಲಕ್ಷ ನೀಡಿದ್ದ ಎನ್ನುವುದು ತಿಳಿದು ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version