Site icon Vistara News

Dog Meat: ನಾಯಿ ಮಾಂಸದ ಗಲಾಟೆ, ಪುನೀತ್‌ ಕೆರೆಹಳ್ಳಿ ಪೊಲೀಸ್‌ ಠಾಣೆಯಲ್ಲೇ ತೀವ್ರ ಅಸ್ವಸ್ಥ

puneeth kerehalli dog meat

ಬೆಂಗಳೂರು: ಶಂಕಿತ ನಾಯಿ ಮಾಂಸದ (Dog Meat) ಪ್ರಕರಣದಲ್ಲಿ ಪೊಲೀಸರು (Bangalore Police) ವಶಕ್ಕೆ ಪಡೆದಿದ್ದ ಹಿಂದೂ ಹೋರಾಟಗಾರ (Hindu activist) ಪುನೀತ್‌ ಕೆರೆಹಳ್ಳಿ (Puneeth Kerehalli) ಪೊಲೀಸ್‌ ಠಾಣೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ಸೇರಿಸಲಾಗಿದೆ.

ನಿನ್ನೆ ಸಂಜೆ ಗಲಾಟೆ ನಡೆದಿದ್ದು, ಪುನೀತ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮಧ್ಯರಾತ್ರಿಯೇ ಅಸ್ವಸ್ಥರಾಗಿದ್ದ ಪುನೀತ್‌ರನ್ನು ಆಸ್ಪತ್ರೆಗೆ ಕರೆತಂದಿರಲಿಲ್ಲ. ಬೆಳಗಿನ ಜಾವ 4:45ಕ್ಕೆ ತೀವ್ರವಾಗಿ ಅಸ್ವಸ್ಥರಾದಾಗ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬೆಂಗಳೂರಿಗೆ ಕುರಿ ಮಾಂಸದ ನೆಪದಲ್ಲಿ ನಾಯಿ ಮಾಂಸ ಬೇರೆ ರಾಜ್ಯದಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್‌ ಕೆರೆಹಳ್ಳಿ ಆರೋಪಿಸಿ, ಮೆಜೆಸ್ಟಿಕ್‌ಗೆ ಬರುತ್ತಿದ್ದ ಮಾಂಸದ ವಾಹನಗಳನ್ನು ತಡೆದಿದ್ದರು. ಪೊಲೀಸರು ಮಧ್ಯಪ್ರವೇಶಿಸಿದ್ದು, ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಭದ್ರತೆಯಲ್ಲಿ ಕೋಲ್ಡ್ ಸ್ಟೋರೇಜ್‌ಗೆ ಮಾಂಸ ತುಂಬಿದ ನಾಲ್ಕು ವಾಹನಗಳು ರವಾನೆಯಾಗಿವೆ.

ಇದೇ ಸಂದರ್ಭದಲ್ಲಿ, ಬಿಎನ್ಎಸ್ 132 ಆ್ಯಕ್ಟ್ (ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ) ಹಾಗೂ 351 (2) ಸೆಕ್ಷನ್‌ ಆರೋಪದಡಿ ಕಾಟನ್ ಪೇಟೆ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದರು. ಠಾಣೆಯಲ್ಲಿ ಸುಸ್ತಾಗಿ ಮಲಗಿದ್ದ ಪುನೀತ್‌ನನ್ನು ಸಿಬ್ಬಂದಿಗಳು ಕೆಸಿ ಜನರಲ್‌ ಆಸ್ಪತ್ರೆಗೆ ವ್ಹೀಲ್‌ಚೇರ್‌ನಲ್ಲಿ ಕರೆದೊಯ್ದಿದ್ದು, ಈ ವೇಳೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಬೆಳಗಿನ ಜಾವ 4.45ಕ್ಕೆ ತೀವ್ರವಾಗಿ ಅಸ್ವಸ್ಥಗೊಂಡ ಆರೋಪಿಯನ್ನು ಆತುರಾತುರದಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಇಂದು ಅಬ್ದುಲ್‌ ರಜಾಕ್‌ ವಿಚಾರಣೆ

ನಾಯಿ ಮಾಂಸ ಸಾಗಾಟ ಆರೋಪದ ಕುರಿತು ಇಂದು ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಅಬ್ದುಲ್ ರಜಾಕ್ ವಿಚಾರಣೆ ಸಾಧ್ಯತೆ ಇದೆ. ನಿನ್ನೆ ವಿಚಾರಣೆಗೆ ಹಾಜರಾಗಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದು, ಈಗಾಗಲೇ ಮಾಂಸದ ಸ್ಯಾಂಪಲ್ ಲ್ಯಾಬ್‌ಗೆ ರವಾನಿಸಲಾಗಿದೆ. ಆರೋಪ ಹಿನ್ನೆಲೆಯಲ್ಲಿ ಮೊದಲು ಯಾವ ಪ್ರಾಣಿಯ ಮಾಂಸ ಎಂಬುದು, ನಂತರ ಮಾಂಸದ ಗುಣಮಟ್ಟದ ಬಗ್ಗೆಯೂ ಪರಿಶೀಲನೆ ನಡೆಯಲಿದೆ.

ಕಾನೂನು ನಿಯಮ ಮೀರಿದ್ದರೆ ಅಬ್ದುಲ್ ರಜಾಕ್‌ಗೆ ಕಾನೂನು ಸಂಕಷ್ಟ ಎದುರಾಗಬಹುದು. ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ತನಿಖೆ ನಡೆಯಲಿದ್ದು, ಆರೋಗ್ಯ ಇಲಾಖೆಯ ಕಾನೂನು ಅಡಿ ಕೂಡ ಅರೆಸ್ಟ್ ಮಾಡಬಹುದು. ನಿಯಮ ಉಲ್ಲಂಘನೆ ಮಾಡಿದ್ದರೆ ಏಳು ವರ್ಷದವರೆಗೆ ಜೈಲು ಶಿಕ್ಷೆ ಸಾಧ್ಯತೆ ಇದೆ.

ಒಟ್ಟು 90 ಥರ್ಮಾಕೋಲ್ ಬಾಕ್ಸ್‌ಗಳನ್ನು ಸೀಜ್ ಮಾಡಲಾಗಿದೆ. ಒಂದೊಂದರಲ್ಲಿ 30ರಿಂದ 40 ಕೆಜಿ ಮಾಂಸ ತರಿಸಲಾಗಿತ್ತು. ಒಂದೊಂದು ಬಾಕ್ಸ್‌ಗಳಲ್ಲಿ ಒಂದೊಂದು ರೀತಿಯ ಮಾಂಸವಿದೆ. ಒಂದು ಬಾಕ್ಸ್‌ನಲ್ಲಿ ತಲೆ, ಮತ್ತೊಂದರಲ್ಲಿ ದೇಹ, ಒಂದೊಂದರಲ್ಲಿ ಕಾಲುಗಳು, ಹೀಗಿದೆ. ಒಟ್ಟು ನಾಲ್ಕು ಟಾಟಾ ಏಸ್‌ಗಳಲ್ಲಿ ಮಾಂಸದ ಬಾಕ್ಸ್ ತರಿಸಲಾಗಿತ್ತು. ಎಲ್ಲವನ್ನೂ ಫ್ರೀಜರ್‌ನಲ್ಲಿ ಸ್ಟೋರ್ ಮಾಡಲಾಗಿದೆ.

ಅಬ್ದುಲ್ ರಜಾಕ್ ಹೇಳಿಕೆ

ಎರಡು ದಿನಕ್ಕೆ ಒಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತದೆ. ಇವತ್ತು ಎರಡು ಸಾವಿರ ಕೆಜಿ ಮಾಂಸ ಬಂದಿದೆ. ಹನ್ನೆರಡು ವರ್ಷದಿಂದ ಈ ವ್ಯವಹಾರ ನಡೀತಿದೆ. ಯಾವುದೇ ಆಹಾರ ಇಲಾಖೆ ಬಂದು ಚೆಕ್ ಮಾಡಲಿ. ರಾಜಸ್ಥಾನದ ಕುರಿಗಳಿಗೆ ಬಾಲ ಇದೇ ರೀತಿ ಇರುತ್ತೆ. ಪುನೀತ್ ಕೆರೆಹಳ್ಳಿ ಅದನ್ನು ನಾಯಿ ಅಂತಿದ್ದಾರೆ. ಹಣ ವಸೂಲಿ ಮಾಡೋಕೆ ಈ ರೀತಿ ಮಾಡ್ತಾ ಇದಾರೆ. ನಾಳೆ ಈ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತೇವೆ. ಈ ಬಗ್ಗೆ ಪುನೀತ್ ಕೆರೆಹಳ್ಳಿ ವಿರುದ್ಧ ದೂರು ಕೊಡುತ್ತೇವೆ ಎಂದು ಮಾಂಸ ಸಾಗಾಟಗಾರ ಅಬ್ದುಲ್‌ ರಜಾಕ್‌ ಹೇಳಿದ್ದಾರೆ.

ಇದನ್ನೂ ಓದಿ: Dog Meat: ಬೆಂಗಳೂರಿಗೆ ಬಂತು ಟನ್‌ಗಟ್ಟಲೇ ನಾಯಿ ಮಾಂಸ; ಅಬ್ದುಲ್ ರಜಾಕ್ ವಿರುದ್ಧ ಆರೋಪ!

Exit mobile version