ಬೆಂಗಳೂರು: ಬೆಂಗಳೂರಿನಲ್ಲಿ ಕಳಪೆ ಮಾಂಸ (Poor meat) ಉಣಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರದ ಹಲವು ಪ್ರತಿಷ್ಠಿತ ಹೋಟೆಲ್, ರೆಸ್ಟೋರೆಂಟ್ (Hotel Owners) ಮಾಲೀಕರಿಗೆ ನೊಟೀಸ್ (Notice) ನೀಡಲಾಗಿದೆ. ಅಬ್ದುಲ್ ರಜಾಕ್ (Abdul Razak) ಆಮದು ಮಾಡುತ್ತಿರುವುದು ನಾಯಿ ಮಾಂಸ (Dog Meat) ಎಂಬ ಆರೋಪ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಆರೋಗ್ಯ ಇಲಾಖೆಯ (Health Department) ಅಧಿಕಾರಿಗಳು ಚುರುಕಾಗಿ ಕಾರ್ಯಪ್ರವೃತ್ತರಾಗಿದ್ದಾರೆ.
ಮೊದಲ ಹಂತವಾಗಿ ಒಂಬತ್ತು ಜನ ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ನೊಟೀಸ್ ನೀಡಲಾಗಿದೆ. ಇವರು ಅಬ್ದುಲ್ ರಜಾಕ್ ಅವರಿಂದ ಮಾಂಸ ಪಡೆಯುತ್ತಿದ್ದ ಹೋಟೆಲ್, ರೆಸ್ಟೋರೆಂಟ್‌ಗಳು. ಈ ಸಂಬಂಧ ವ್ಯವಹಾರದ ದಾಖಲೆ ಸಮೇತ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ. ನಿನ್ನೆ ಇಬ್ಬರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಉಳಿದವರು ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ನಿನ್ನೆ ಅಬ್ದುಲ್ ರಜಾಕ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಸೋಮವಾರವೂ ವಿಚಾರಣೆ ಮುಂದುವರಿಯಲಿದೆ. ಡೆಸಿಗ್ನೇಟ್ ಆಫೀಸರ್ ಡಾ. ಜನಾರ್ದನ್ ಅವರಿಂದ ವಿಚಾರಣೆ ನಡೆಯುತ್ತಿದೆ. ನಿನ್ನೆ ಐದಾರು ಗಂಟೆಗಳ ಕಾಲ ಅಬ್ದುಲ್ ರಜಾಕ್ ವಿಚಾರಣೆ ಎದುರಿಸಿದ್ದರು. ಸೋಮವಾರ ಕೂಡ ವಿಚಾರಣೆಗೆ ಬರುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.
ಯಾಕೆ ಅನುಮಾನ?
ಅಬ್ದುಲ್ ರಜಾಕ್ ತಂಡ ಆಮದು ಮಾಡಿಸಿಕೊಳ್ಳುತ್ತಿರುವ ಮಾಂಸದ ಮೇಲೆ ಅನುಮಾನ ಹೆಚ್ಚಿದ್ದು, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯಿಂದ ತೀವ್ರ ತನಿಖೆಗೆ ಒಳಪಡಲಿದೆ. ಅಬ್ದುಲ್ ರಜಾಕ್ ತಂಡ ಸಪ್ಲೈ ಮಾಡುತ್ತಿದ್ದ ಹೋಟೆಲ್‌ಗಳ ಮಾಹಿತಿ ಸಂಗ್ರಹಿಸಲಾಗಿದೆ.
ಬೆಂಗಳೂರಿನಲ್ಲಿ ಕೆ.ಜಿ ಕುರಿ ಮಾಂಸ 700-800 ರೂಪಾಯಿ ಇದೆ. ರಾಜ್ಯದ ಯಾವ ಜಿಲ್ಲೆಗೆ ಹೋದರೂ 700-800 ರೂಪಾಯಿ ಕೆ.ಜಿ. ಇದೆ. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶದ ಭಾಗದಲ್ಲೂ ಕುರಿ ಮಾಂಸದ ಬೆಲೆ 700 ರೂಪಾಯಿ ಇದೆ. ಹೀಗಿರುವಾಗ, ಅಬ್ದುಲ್ ರಜಾಕ್ ತಂಡ ಆಮದು ಮಾಡುವ ಮಾಂಸದ ಬೆಲೆ 500 ರೂ. ಯಾಕೆ? 400-500 ರೂಪಾಯಿ ಕೆ.ಜಿಗೆ ಕುರಿ ಮಾಂಸ ಮಾರಾಟ ಮಾಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಮೂಡಿದೆ.
ಬೆಂಗಳೂರಿನ 108 ಹೋಟೆಲ್‌ಗಳಿಗೆ ರಜಾಕ್ ಮಾಂಸ ನೀಡುತ್ತಿದ್ದರು. ಜೈಪುರದಿಂದ ಬೆಂಗಳೂರಿನ ರೈಲು ನಿಲ್ದಾಣಕ್ಕೆ ಮಾಂಸ ಪಾರ್ಸೆಲ್ ಮಾಡಲು ಕೆಜಿಗೆ 8-10 ರೂಪಾಯಿ ಚಾರ್ಜ್ ಆಗುತ್ತದೆ. ರಾಜಸ್ಥಾನದಲ್ಲಿ ಮಾಂಸ ವಧೆ ಮಾಡುವ ಜಾಗದಿಂದ ಜೈಪುರ್ ನಿಲ್ದಾಣಕ್ಕೆ ತರುವ ವಾಹನದ ಬಾಡಿಗೆ, ರೈಲಿಗೆ ಲೋಡ್ ಮಾಡುವ ಕೂಲಿ, ಬೆಂಗಳೂರಿನಲ್ಲಿ ಅನ್‌ಲೋಡ್ ಮಾಡುವ ಕೂಲಿ, ಬೆಂಗಳೂರಿನಲ್ಲಿ ಮಾಂಸ ಸರಬರಾಜು ಮಾಡುವ ಟ್ರಾನ್ಸ್‌ಪೋರ್ಟ್ ಚಾರ್ಜ್- ಎಲ್ಲಾ ವೆಚ್ಚ ಅಂದಾಜು ಸೇರಿ ಕೆ.ಜಿ ಮಾಂಸಕ್ಕೆ 100 ರೂಪಾಯಿ ಹೆಚ್ಚಿಸಬೇಕು. ಹೀಗಿರುವಾಗ ಕೆ.ಜಿ ಮಾಂಸ 400-500 ರೂ. ಹೇಗೆ ಮಾರಾಟ ಮಾಡಲು ಸಾಧ್ಯ?
ಅಂದರೆ ಅಲ್ಲಿಗೆ ಅಬ್ದುಲ್ ರಜಾಕ್ ತಂಡಕ್ಕೆ ಕುರಿ ಮಾಂಸ ಕೆ.ಜಿಗೆ 200 ರೂಪಾಯಿಗೆ ಸಿಗುತ್ತಿದೆಯಾ? ಎಂಬ ಅನುಮಾನ ಮೂಡಿದೆ. ಆದರೆ ಎಲ್ಲೂ ಇಷ್ಟು ಕಡಿಮೆ ಬೆಲೆಗೆ ಮಾಂಸ ಸಿಗಲಾರದು. ಹೀಗಾಗಿ ಇದು ಕಳಪೆ ಮಾಂಸ ಅಥವಾ ನಾಯಿ ಮಾಂಸ ಇರಲೂಬಹುದು ಎಂದು ಕೆಲವರು ತರ್ಕಿಸಿದ್ದಾರೆ.
ತನಿಖೆ ಚುರುಕುಗೊಳಿಸಿದ ಕಾಟನ್ ಪೇಟೆ ಪೊಲೀಸರು
ಮಾಂಸ ಸಾಗಣೆಯ ಬಗ್ಗೆ ಕಾಟನ್‌ಪೇಟೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ರೈಲಿನಲ್ಲಿ ಮಾಂಸ ಎಲ್ಲಿಂದ ಬರ್ತಾ ಇತ್ತು? ಎಷ್ಟು ದಿನಗಳಿಗೊಮ್ಮೆ ಬರ್ತಾ ಇತ್ತು? ಯಾವ ಟ್ರೈನ್‌ನಲ್ಲಿ ಯಾರು ತಗೊಂಡು ಬರ್ತಾ ಇದ್ರು? ಯಾವ ಪ್ಲಾಟ್‌ಫಾರಂಗೆ ರೈಲು ಬರ್ತಾ ಇತ್ತು, ಆ ಪ್ಲಾಟ್ ಫಾರಂನ ಸಿಸಿಟಿವಿ ದಾಖಲೆ, ಮಾಂಸ ಬರುವ ಸಮಯದಲ್ಲಿ ಯಾರು ಬಂದು ರಿಸೀವ್ ಮಾಡ್ತಾ ಇದ್ರು ಎಂಬ ಬಗ್ಗೆ ವಿವರ ಕೇಳಲಾಗಿದೆ.
ಮಾಧ್ಯಮಗಳಲ್ಲಿ ಅಬ್ದುಲ್ ರಜಾಕ್ ನಾನೇ ಮಾಂಸ ತರಿಸುತ್ತಿದ್ದುದಾಗಿ ಹೇಳಿಕೊಂಡಿದ್ದರು. ಹಾಗಾಗಿ ಅಬ್ದುಲ್ ರಜಾಕ್‌ಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಾಗಿದೆ. ಅಬ್ದುಲ್ ರಜಾಕ್ ಜೊತೆಗೆ ಕೆಲ ಹೋಟೆಲ್ ಮಾಲೀಕರಿಗೂ ನೊಟೀಸ್ ನೀಡಲಾಗಿದೆ.
ಇದನ್ನೂ ಓದಿ: Dog Meat: 15 ವರ್ಷದಿಂದ ಅಬ್ದುಲ್ ರಜಾಕ್ ನಾಯಿ ಮಾಂಸ ತಿನ್ನಿಸುತ್ತಿದ್ದಾರೆ: ಪ್ರಮೋದ್ ಮುತಾಲಿಕ್ ಶಾಕಿಂಗ್ ಹೇಳಿಕೆ