ಲಖನೌ: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಹಳ್ಳಿಯೊಂದರಲ್ಲಿ 18 ವರ್ಷ ಹುಡುಗಿಯೊಬ್ಬಳು ಬರ್ಬರ ಕೃತ್ಯ ಎಸಗಿದ್ದಾಳೆ. ತನ್ನ 6 ಮತ್ತು 4 ವರ್ಷ ವಯಸ್ಸಿನ ಇಬ್ಬರು ತಂಗಿಯರನ್ನು ಕೊಂದು (Double Murder) ಅವರ ತಲೆ ಕತ್ತರಿಸಿ (beheading) ಬೇರೆ ರೂಮಿನಲ್ಲಿ ಇಟ್ಟು ಕೈ ತೊಳೆದುಕೊಂಡಿದ್ದಾಳೆ!
ಇಟಾವಾ ಜಿಲ್ಲೆಯ ಬಲರಾಯ ಪೊಲೀಸ್ ಠಾಣೆ ವ್ಯಾಪ್ತಿಯ ಬಹದ್ದೂರ್ಪುರ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ತನ್ನ ಆರು ಮತ್ತು ನಾಲ್ಕು ವರ್ಷದ ಇಬ್ಬರು ಸಹೋದರಿಯರನ್ನು ಹತ್ಯೆಗೈದ ಆರೋಪದಲ್ಲಿ 18 ವರ್ಷದ ಯುವತಿಯನ್ನು ಬಂಧಿಸಲಾಗಿದೆ. ಕೊಲೆಯಾದ ಮಕ್ಕಳ ಶವಗಳು ಮನೆಯಲ್ಲಿ ಶಿರಚ್ಛೇದಿತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತರನ್ನು ಆರು ವರ್ಷದ ಸುರಭಿ ಮತ್ತು ನಾಲ್ಕು ವರ್ಷದ ರೋಶ್ನಿ ಎಂದು ಗುರುತಿಸಲಾಗಿದೆ. ಅವರ ಛಿದ್ರಗೊಂಡ ದೇಹಗಳು ಮನೆಯ ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿವೆ. ಜೈವೀರ್ ಸಿಂಗ್ ಎಂಬವರ ಪುತ್ರಿಯರಾದ ಈ ಅಪ್ರಾಪ್ತರನ್ನು ಇವರ ಹಿರಿಯ ಸಹೋದರಿ ಅಂಜಲಿ ಪಾಲ್ ಹತ್ಯೆ ಮಾಡಿದ್ದಾಳೆ. 18 ವರ್ಷದ ಯುವತಿ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಎಂದು ಕಾನ್ಪುರ ರೇಂಜ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಕೊಲೆಯ ಹಿಂದಿನ ಉದ್ದೇಶವನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯವನ್ನು ಮರೆಮಾಚುವುದು ಅಥವಾ ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವತಿಯೊಂದಿಗೆ ಮೂವರು ಪುರುಷರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೃತ್ಯದಲ್ಲಿ ಇತರರ ಕೈವಾಡವೂ ಇಬಹುದೇ ಎಂಬ ಕೋನದಲ್ಲಿ ತನಿಖೆ ನಡೆದಿದೆ.
ಯುವತಿ ಕೊಲೆಗೆ ಆಯುಧವಾಗಿ ತಂದೆಯ ಗುದ್ದಲಿಯನ್ನು ಬಳಸಿದ್ದಾಳೆ. ಆಯುಧವನ್ನು ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಆದರೆ ಅದನ್ನು ಜೈವೀರ್ ತೊಳೆದುದು ಗೊತ್ತಾಗಿದೆ. ಘಟನೆ ನಡೆದಾಗ ಜೈವೀರ್, ಅವರ ಪತ್ನಿ ಸುಶೀಲಾ, ಅವರ ಮಕ್ಕಳಾದ ನಂದ ಕಿಶೋರ್ (12) ಮತ್ತು ಕನ್ಹಯ್ಯಾ (8) ಮನೆಯಲ್ಲಿ ಇರಲಿಲ್ಲ. ಪ್ರಥಮ ಹೇಳಿಕೆಯಲ್ಲಿ, ತಾನು ಮನೆಗೆ ಹಿಂದಿರುಗಿದಾಗ, ಸಹೋದರಿಯರ ಶವಗಳನ್ನು ನೋಡಿದೆ ಎಂದು ಪೊಲೀಸರಿಗೆ ಹೇಳಿದ್ದಳು. ಯುವತಿಯ ಮಾನಸಿಕ ಸ್ವಾಸ್ಥ್ಯದ ಬಗೆಗೆ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Murder Case : ಲೈಂಗಿಕ ಕಾರ್ಯಕರ್ತೆಯನ್ನು ಲಾಡ್ಜ್ಗೆ ಕರೆದೊಯ್ದು ಸುಲಿಗೆ ಮಾಡಿ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ