Site icon Vistara News

Dowry harassment | ʻಅನುಭವʼ ಖ್ಯಾತಿಯ ನಟಿ ಅಭಿನಯಗೆ 2 ವರ್ಷ ಜೈಲು, 20 ವರ್ಷ ಹಿಂದಿನ ವರದಕ್ಷಿಣೆ ಪ್ರಕರಣ

abhinaya actress

ಬೆಂಗಳೂರು: ʼಅನುಭವʼ ಚಿತ್ರದ ಖ್ಯಾತಿಯ ಸ್ಯಾಂಡಲ್‌ವುಡ್ ನಟಿ ಅಭಿನಯಗೆ ಎರಡು ವರ್ಷದ ಜೈಲು ಶಿಕ್ಷೆ ಪ್ರಕಟವಾಗಿದೆ. ವರದಕ್ಷಿಣೆ ನೀಡುವಂತೆ ಪೋಷಕರ ಜೊತೆ ಸೇರಿ ಅತ್ತಿಗೆಗೆ ಕಿರುಕುಳ ನೀಡಿದ ಅರೋಪದಲ್ಲಿ ಕೋರ್ಟ್‌ ಜೈಲು ಶಿಕ್ಷೆ ವಿಧಿಸಿದೆ.

ಅಭಿನಯ ಅವರ ಅಣ್ಣ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀದೇವಿಗೆ ವರದಕ್ಷಿಣೆ ಬೇಡಿಕೆ, ಕಿರುಕುಳ ನೀಡಿದ ಆರೋಪದಲ್ಲಿ ಹೈಕೋರ್ಟ್ ವಿಚಾರಣೆ ನಡೆಸಿದ ಶಿಕ್ಷೆ ಪ್ರಕಟಿಸಿದೆ. ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾ.ಹೆಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರ ಏಕಸದಸ್ಯ ಪೀಠ ಆದೇಶ ನೀಡಿದೆ.

2002ರಲ್ಲಿ ಲಕ್ಷ್ಮೀದೇವಿ, ಅಭಿನಯ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ಲಕ್ಷ್ಮೀದೇವಿ 1998ರಲ್ಲಿ ನಟಿ ಅಭಿನಯ ಸೋದರ ಶ್ರೀನಿವಾಸರನ್ನು ವಿವಾಹವಾಗಿದ್ದರು. ಮದುವೆ ವೇಳೆ 80 ಸಾವಿರ ರೂಪಾಯಿ ಹಾಗೂ 250 ಗ್ರಾಂ ಚಿನ್ನಾಭರಣವನ್ನು ವರದಕ್ಷಿಣೆ ರೂಪದಲ್ಲಿ ಪಡೆದಿದ್ದರು. ಬಳಿಕ 1 ಲಕ್ಷಕ್ಕೆ ಬೇಡಿಕೆ ಇಟ್ಟು 20 ಸಾವಿರ ರೂ. ಪಡೆದ ನಂತರವೂ ಕಿರುಕುಳ ನೀಡಿದ್ದರು. ವರದಕ್ಷಿಣೆ ಪಡೆದಿದ್ದಲ್ಲದೆ ಲಕ್ಷ್ಮೀದೇವಿ ಅವರನ್ನು ಅವರ ಪೋಷಕರ ಮನೆಯಲ್ಲಿ ಬಿಡಲಾಗಿತ್ತು. ಗಂಡನ ಮನೆಗೆ ಬಂದ ಲಕ್ಷ್ಮೀದೇವಿ ಹಾಗೂ ಪೋಷಕರಿಗೆ ಅವಮಾನ ಮಾಡಲಾಗಿತ್ತು. ಈ ಕುರಿತು ಅಭಿನಯ ಸೇರಿ ಕುಟುಂಬದ ವಿರುದ್ಧ 2002ರಲ್ಲಿ ಚಂದ್ರಾ ಲೇಔಟ್ ಠಾಣೆಗೆ ದೂರು ನೀಡಲಾಗಿತ್ತು.

ಇದನ್ನೂ ಓದಿ | Dowry harrassment | ವರದಕ್ಷಿಣೆ ಹಿಂಸೆಯಿಂದ ನೊಂದು ಮಹಿಳೆ ನೇಣಿಗೆ ಶರಣು, ಶವ ಇಟ್ಟು ಪ್ರತಿಭಟನೆ

ಚಂದ್ರಾ ಲೇಔಟ್ ಪೊಲೀಸರು ತನಿಖೆ ನಡೆಸಿ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಚಾರ್ಜ್ ಶೀಟ್ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಐವರು ಆರೋಪಿಗಳಿಗೆ 2012ರಲ್ಲಿ ತಲಾ 2 ವರ್ಷ ಶಿಕ್ಷೆ ಪ್ರಕಟಿಸಿತ್ತು. ನಂತರ ಆರೋಪಿಗಳು ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಜಿಲ್ಲಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಲಕ್ಷ್ಮೀದೇವಿ ಹಾಗೂ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.

ಎ1- ಶ್ರೀನಿವಾಸ್ ಹಾಗೂ ಎ-2 ರಾಮಕೃಷ್ಣ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಉಳಿದ ಮೂವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ನಟಿ ಅಭಿನಯ ಅವರ ತಾಯಿ ಎ-3 ಜಯಮ್ಮಗೆ 5 ವರ್ಷ ಕಾರಾಗೃಹ ಶಿಕ್ಷೆ, ಎ-4 ಚೆಲುವರಾಜ್, ಎ-5 ಅಭಿನಯಾಗೆ 2 ವರ್ಷ ಜೈಲು ಹಾಗೂ ದಂಡ ವಿಧಿಸಲಾಗಿದೆ. ಸರ್ಕಾರದ ಪರ ವಕೀಲ ಹೆಚ್.ವಿ. ವಿನಾಯಕ್‌ ವಾದ ಮಂಡಿಸಿದ್ದರು.

ಇದನ್ನೂ ಓದಿ | Suicide Case | ಚಿತ್ರದುರ್ಗದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ?

Exit mobile version