ಮೈಸೂರು: ಗಂಡ, ಅತ್ತೆ, ಮಾವ ಎಲ್ಲರೂ ಸೇರಿ ಹಣಕ್ಕಾಗಿ ಕಿರುಕುಳ (Dowry Harassment) ನೀಡುತ್ತಿರುವುದರಿಂದ ಬೇಸತ್ತು ಬದುಕೇ ಸಾಕು ಎಂದು ತೀರ್ಮಾನಿಸಿದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ (woman Ends life by drinking Poison) ಮಾಡಿಕೊಂಡಿದ್ದಾರೆ. ನಂಜನಗೂಡು ತಾಲೂಕಿನ ಹೊಸಕೋಟೆಯಲ್ಲಿ ಘಟನೆ ನಡೆದಿದ್ದು, ವಿಜಯಲಕ್ಷ್ಮಿ (35) ಆತ್ಮಹತ್ಯೆ ಶರಣಾದ ಗೃಹಿಣಿ.
ಮೈಸೂರು ತಾಲ್ಲೂಕಿನ ಬೊಮ್ಮೇನಹಳ್ಳಿಯ ವಿಜಯಲಕ್ಷ್ಮಿ ಅವರನ್ನು 12 ವರ್ಷಗಳ ಹಿಂದೆ ನಂಜನಗೂಡು ತಾಲ್ಲೂಕಿನ ಹೊಸಕೋಟೆಗೆ ಮದುವೆ ಮಾಡಿಕೊಡಲಾಗಿತ್ತು. ಹೊಸಕೋಟೆಯ ಹರೀಶ್ ಎಂಬುವರನ್ನು ಮದುವೆಯಾಗಿದ್ದ ವಿಜಯಲಕ್ಷ್ಮಿಗೆ ಅಂದಿನಿಂದ ಇಂದಿನವರೆಗೆ ಕಿರಿಕಿರಿ ತಪ್ಪಿರಲಿಲ್ಲ ಎನ್ನಲಾಗಿದೆ.
ಮದುವೆಯ ಸಂದರ್ಭದಲ್ಲಿ ವಿಜಯಲಕ್ಷ್ಮಿ ಪೋಷಕರು ಚಿನ್ನಾಭರಣ ಕೊಟ್ಟು ಅದ್ಧೂರಿಯಾಗಿ ಕಾರ್ಯಕ್ರಮ ಮಾಡಿದ್ದರು. ಆಗಿನಿಂದಲೇ ಹಣಕ್ಕಾಗಿ ಗಂಡ ಪೀಡಿಸುತ್ತಿದ್ದ ಎನ್ನಲಾಗಿದೆ. ಗಂಡನ ಒಬ್ಬನೇ ಅಲ್ಲ, ಇಡೀ ಮನೆ ಆಕೆಗೆ ಕಿರಿಕಿರಿ ಮಾಡುತ್ತಿತ್ತು. ಅತ್ತೆ, ಮಾವ, ಮೈದುನರಿಂದಲೂ ಕಿರುಕುಳ ಆಗುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ : Self Harming : 29ನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡ 12 ವರ್ಷದ ಬಾಲಕಿ; ಏನಾಗಿತ್ತು ಆಕೆಗೆ?
ಅತ್ತೆ ಮಲ್ಲಿಗಮ್ಮ, ಮಾವ ಮಹದೇವಮೂರ್ತಿ, ಮೈದುನರಾದ ರಾಘವೇಂದ್ರ, ಮಹೇಂದ್ರರಿಂದಲೂ ಕಿರುಕುಳ ಆಗುತ್ತಿರುವ ಬಗ್ಗೆ ಆಕೆ ತನ್ನ ತಾಯಿ ಮನೆಯಲ್ಲೂ ಹೇಳಿಕೊಂಡಿದ್ದರು. ಸುಧಾರಿಸಿಕೊಂಡು ಹೋಗು ಎಂದು ತವರಿನಲ್ಲಿ ಸಮಾಧಾನ ಮಾಡಿದ್ದರು. ಹೀಗೆ ಕಿರಿಕಿರಿ ಮುಂದುವರಿದಾಗ ಗಲಾಟೆ ವಿಚಾರವಾಗಿ ಈ ಹಿಂದೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಹಲವು ಬಾರಿ ದೂರು ನೀಡಿದ್ದಳು ವಿಜಯಲಕ್ಷ್ಮಿ.
ಆದರೆ, ಎಲ್ಲಿಯೂ ಕೂಡಾ ಆಕೆಗೊಂದು ನೆಮ್ಮದಿ ಸಿಗಲೇ ಇಲ್ಲ. ಅಂತಿಮವಾಗಿ ಆಕೆ ಈ ನೋವಿನಿಂದ ಮುಕ್ತಿ ಹೊಂದಲೇಬೇಕು ಎಂದು ತೀರ್ಮಾನಿಸಿ ಹೊಸಕೋಟೆಯ ಗಂಡನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ. ಮಾಡಿಕೊಂಡಿದ್ದಾಳೆ. ಇಬ್ಬರು ಮಕ್ಕಳನ್ನು ಬಿಟ್ಟು ತಾನೊಬ್ಬಳೇ ಪ್ರಾಣ ತೆಗೆದುಕೊಂಡಿದ್ದಾಳೆ.
ವಿಜಯಲಕ್ಷ್ಮಿ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಗಂಡ, ಅತ್ತೆ, ಮಾವ, ಮೈದುನರು ಪರಾರಿಯಾಗಿದ್ದಾರೆ. ಹೆತ್ತವರು ಧಾವಿಸಿದ್ದು, ಕಿರುಕುಳ ನೀಡಿದವರನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.