ಪತಿ ನೀಡುವ ಚಿತ್ರಹಿಂಸೆ ತಾಳಲಾರದೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಭಾರತೀಯ ಮೂಲದ ಮನದೀಪ್ ಕೌರ್ ಅವರ ಬದುಕಿನ ಚಿತ್ರಣಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ. ಈಕೆಯನ್ನು ಈಕೆಯ ಪತಿ ಗಂಡು ಮಗು ಹೆರುವಂತೆ, ವರದಕ್ಷಿಣ ಹಣ ತರುವಂತೆ ವರ್ಷಗಟ್ಟಲೆ ಹಿಂಸಿಸಿದ್ದ. ಹಿಂಸೆ ತಡೆಯಲಾರದೆ ಈಕೆ ವಿಡಿಯೋ ಮಾಡಿ ತನ್ನ ಗೋಳನ್ನು ತೋಡಿಕೊಂಡು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಉತ್ತರಪ್ರದೇಶದ ಬಿಜನೂರ್ ಜಿಲ್ಲೆಯ ಕುಟುಂಬದವರಾದ ಮನದೀಪ್ ಕೌರ್ ಮತ್ತು ರಂಜೋಧ್‌ಬೀರ್ ಸಿಂಗ್ ಸಂಧು- ಇವರಿಗೆ 6 ಮತ್ತು 4 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಸಂಧು ಕೂಡ ಬಿಜನೂರ್‌ನವನು. ಇಬ್ಬರು ಹೆಣ್ಣುಮಕ್ಕಳನ್ನು ಹೆತ್ತದ್ದಕ್ಕಾಗಿ ಈತ ಮನದೀಪ್‌ಳಿಗೆ ಹಿಂಸೆ ನೀಡುತ್ತಿದ್ದ. ಈತನನ್ನು ಬಿಟ್ಟು ಬರುವಂತೆ ತವರು ಮನೆಯವರು ಹೇಳಿದ್ದರೂ ಸಹ, ನಿರುದ್ಯೋಗಿಯಾದ ತಾನು ಮಕ್ಕಳನ್ನು ಒಂಟಿಯಾಗಿ ಸಾಕಲಾರೆ ಎಂಬ ಕಾರಣದಿಂದ, ಸಂಧುವನ್ನು ಬಿಟ್ಟು ಬರಲು ಮನದೀಪ್ ಒಪ್ಪಿರಲಿಲ್ಲ.
ಹೆಣ್ಣುಮಕ್ಕಳನ್ನು ಸಾಕಲು 50 ಲಕ್ಷ ರೂಪಾಯಿ ನೀಡುವಂತೆ ಈತ ಹೆಂಡತಿಯ ತವರು ಮನೆಯವರಲ್ಲಿ ಬೇಡಿಕೆ ಇಟ್ಟಿದ್ದ. ಆದರೆ ಸ್ವತಃ ತನ್ನ ಟ್ರಕ್‌ನ ಸಾಲವನ್ನು ಮರುಪಾವತಿ ಮಾಡಲೂ ಈತ ವಿಫಲನಾಗಿದ್ದ. ಪ್ರಸ್ತುತ ಈ ಹೆಣ್ಣುಮಕ್ಕಳನ್ನು ಸಂಧು ಚೆನ್ನಾಗಿ ನೋಡಿಕೊಳ್ಳಲಾರ, ಹೀಗಾಗಿ ತಮಗೆ ಒದಗಿಸಿಕೊಡುವಂತೆ ಮನದೀಪ್ ಅವರ ಮನೆಯವರು ಬೇಡಿಕೆ ಮಂಡಿಸಿದ್ದಾರೆ.
ಕಳೆದ 8 ವರ್ಷಗಳಿಂದ ಸಂಧು ತನಗೆ ನಿತ್ಯ ಹೊಡೆಯುತ್ತಿದ್ದಾನೆ. ಪರಿಸ್ಥಿತಿ ಎಂದಾದರೂ ಸುಧಾರಿಸಬಹುದು ಎಂದು ನಾನು ಭಾವಿಸಿದ್ದೆ. ಆದರೆ ಹಾಗಾಗಲೇ ಇಲ್ಲ. ಆತ ಮದ್ಯಪಾನ ಮಾಡಿ ಬಂದು ಹೊಡೆಯುತ್ತಾನೆ ಹಾಗೂ ವಿವಾಹೇತರ ಸಂಬಂಧವನ್ನೂ ಹೊಂದಿದ್ದಾನೆ. ನನ್ನ ಮರಣಕ್ಕೆ ನನ್ನ ಗಂಡ ಹಾಗೂ ಅತ್ತೆ- ಮಾವಂದಿರೇ ಕಾರಣ- ಎಂದು ಆಕೆ ಸಾಯುವ ಮುನ್ನ ಮಾಡಿದ ವಿಡಿಯೋದಲ್ಲಿ ಹೇಳಿದ್ದಾಳೆ. ಈ ವಿಡಿಯೊದಲ್ಲಿ ಆತ ಮನದೀಪ್‌ಗೆ ನೀಡುತ್ತಿರುವ ಹಿಂಸಿಯೆ ಸಿಸಿಟಿವಿ ದೃಶ್ಯಾವಳಿಯನ್ನೂ ಕಾಣಬಹುದಾಗಿದೆ.
ಇದನ್ನೂ ಓದಿ: ತನ್ನದೇ ಮಗುವನ್ನು 4ನೇ ಮಹಡಿಯಿಂದ ಕೆಳಗೆಸೆದು ಕೊಂದ ತಾಯಿ, ಬೆಂಗಳೂರಲ್ಲಿ ಭೀಕರ ಘಟನೆ