Site icon Vistara News

Drunken Driving: ಎರ‍್ರಾಬಿರ‍್ರಿ ಟಿಪ್ಪರ್ ಚಲಾಯಿಸಿ ಪಾದಚಾರಿಯನ್ನು ಕೊಂದ ಪಾನಮತ್ತ

yadagiri accident news drunken driving

ಯಾದಗಿರಿ: ಪಾನಮತ್ತನಾಗಿ ಎರ‍್ರಾಬಿರ‍್ರಿ ಟಿಪ್ಪರ್ ಚಾಲನೆ ಮಾಡಿ (Drunken Driving) ಅಪಘಾತ ಎಸಗಿ (Road Accident) ಪಾದಚಾರಿಯೊಬ್ಬರನ್ನು ಕೊಂದುಹಾಕಿದ, ರಸ್ತೆ ಪಕ್ಕದ ಮರ, ಟ್ರಾಕ್ಟರ್‌ ಇತ್ಯಾದಿ ಘಾಸಿಗೊಳಿಸಿದ ಟಿಪ್ಪರ್‌ ಚಾಲಕನನ್ನು (Tipper Driver) ವಶಕ್ಕೆ ಮಪಡೆಯಲಾಗಿದೆ.

ಯಾದಗಿರಿ (Yadagiri news) ಜಿಲ್ಲೆಯ ಶಹಾಪುರ ನಗರದಲ್ಲಿ ನಸುಕಿನ ಜಾವ ಘಟನೆ ನಡೆದಿದೆ. ಸಾಹಿಲ್ ಪಟೇಲ್ (18) ಮೃತ ದುರ್ದೈವಿ. ಕುಡಿದ ಮತ್ತಿನಲ್ಲಿದ್ದ ಟಿಪ್ಪರ್‌ ಚಾಲಕ ಯದ್ವಾತದ್ವಾ ಟಿಪ್ಪರ್‌ ಚಲಾಯಿಸಿ ರಸ್ತೆ ಪಕ್ಕ ನಿಂತಿದ್ದ ಯುವಕನಿಗೆ ಗುದ್ದಿದ್ದಾನೆ. ಸಾಹಿಲ್‌ ಸ್ಥಳದಲ್ಲೇ ಸತ್ತಿದ್ದಾರೆ.

ನಂತರ ರಸ್ತೆ ಪಕ್ಕದಲ್ಲಿ ಇದ್ದ ಮರ, ಟ್ರಾಕ್ಟರ್‌ ಹಾಗೂ ವಿದ್ಯುತ್‌ ಕಂಬಕ್ಕೂ ಡಿಕ್ಕಿ ಹೊಡೆದಿದ್ದು, ಸ್ಥಳದಿಂದ ವೇಗವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಟಿಪ್ಪರ್ ಮೇಲೆ ಕಲ್ಲು ತೂರಾಟ ನಡೆಸಿ, ನಂತರ ಟಿಪ್ಪರ್ ಸಹಿತ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಟಿಪ್ಪರ್ ಚಾಲಕ ಜೀವನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಕಾರವಾರ: ಸಾಲಬಾಧೆ ತಾಳಲಾರದೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದ ಆನಂದ ನಗರದಲ್ಲಿ ನಡೆದಿದೆ. ಬಸವರಾಜ ಮಲ್ಲೂರ(42) ಎಂಬವರು ಆತ್ಮಹತ್ಯೆಗೆ ಶರಣಾದ ರೈತ.

ಅಡಿಕೆ, ಜೋಳದ ಬೆಳೆ ಬೆಳೆಯಲು ಸಾಲ ಮಾಡಿದ್ದ ರೈತ ಬಸವರಾಜ, ಬೆಳೆ ಹಾನಿಯಿಂದ ಸಾಲ ಮರುಪಾವತಿ ಮಾಡಿರಲಿಲ್ಲ. ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‌ನಿಂದ ನಿರಂತರ ಕಿರುಕುಳ ಬಂದಿದ್ದು, ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಂತಿದ್ದ ಬಸ್‌ಗೆ ಚುನಾವಣಾ ವೀಕ್ಷಕರ ವಾಹನ ಡಿಕ್ಕಿ; ಚಾಲಕ, ಪೇದೆ ಗಂಭೀರ

ಕೊಪ್ಪಳ: ನಿಂತಿದ್ದ ಸಾರಿಗೆ ಸಂಸ್ಥೆ ಬಸ್ಸಿಗೆ ಚುನಾವಣಾ ವೀಕ್ಷಕರ ವಾಹನವು ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ರಭಸಕ್ಕೆ ಚುನಾವಣಾ ವೀಕ್ಷಕರ ಜೀಪ್ ಸಂಪೂರ್ಣ ಜಖಂಗೊಂಡಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿ ಗುರುವಾರ ರಾತ್ರಿ ಅಪಘಾತ ನಡೆದಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಕರ್ತವ್ಯ ಮುಗಿಸಿ ವಾಪಸ್‌ ಹೋಗುವಾಗ, ನಿಂತಿದ್ದ ಬಸ್‌ ಕಾಣದೇ ನೇರವಾಗಿ ಜೀಪ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಜೀಪ್‌ನ ಮುಂಭಾಗ ಹಾನಿಯಾಗಿದೆ. ಚುನಾವಣೆ ವೀಕ್ಷಕರ ವಾಹನದ ಡ್ರೈವರ್ ಶಿವಾನಂದ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಓರ್ವ ಪೇದೆಗೆ ಸಣ್ಣ ಪುಟ್ಟ ಗಾಯವಾಗಿದೆ. ಮೀನುಗಾರಿಕೆ ಇಲಾಖೆಗೆ ಸೇರಿದ ವಾಹನ ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಗಂಗಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಮಾಹಿತಿ ಪಡೆದು ಆಸ್ಪತ್ರೆಗೆ ಗಂಗಾವತಿ ತಹಶಿಲ್ದಾರ್ ಯು.ನಾಗರಾಜ್ ಧಾವಿಸಿದರು. ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವೈದ್ಯರಿಗೆ ಸೂಚಿಸಿದರು. ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು, ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident: ಹಾವೇರಿಯಲ್ಲಿ ಭೀಕರ ಅಪಘಾತ; ಮೂವರ ದುರ್ಮರಣ, ಮಹೀಂದ್ರ ಪಿಕಪ್‌ನಲ್ಲಿದ್ದ 20 ಕುರಿಗಳ ಸಾವು

Exit mobile version