Site icon Vistara News

ED Raid: ರಾಜ್ಯದಲ್ಲಿ ಬಿಲ್ಡರ್‌ಗಳಿಗೆ ಇಡಿ ಶಾಕ್, 11 ಕಡೆ ದಾಳಿ ನಡೆಸಿ ಪರಿಶೀಲನೆ

ED Raid bangalore mysore

ಬೆಂಗಳೂರು: ಬೆಂಗಳೂರು ಹಾಗೂ ಮೈಸೂರಿನ ಹಲವು ಕಡೆ ಬಿಲ್ಡರ್‌ಗಳಿಗೆ ಜಾರಿ ನಿರ್ದೇಶನಾಲಯ (Enforcement directorate) ಮುಂಜಾನೆಯೇ ಭಾರಿ ಶಾಕ್‌ ನೀಡಿದೆ. ಎರಡೂ ನಗರಗಳ 11 ಕಡೆಗಳಲ್ಲಿ ಬಿಲ್ಡರ್‌ಗಳ (Builders) ಮನೆ ಹಾಗೂ ಕಚೇರಿಗಳಿಗೆ ಇಡಿ ಅಧಿಕಾರಿಗಳು (ED Raid) ಬೆಳಗ್ಗೆ ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಯುಬಿ ಸಿಟಿಯ ಕಿಂಗ್ ಫಿಶರ್ ಟವರ್, ಮಲ್ಲೇಶ್ವರಂ, ಬಸವೇಶ್ವರನಗರ, ಬನ್ನೇರುಘಟ್ಟ ರೋಡ್, ಹನುಮಂತನಗರ ಹಾಗೂ ಮೈಸೂರಿನ ಎರಡು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿದರು. ಪ್ರತಿಷ್ಠಿತ ಬಿಲ್ಡರ್‌ಗಳ ಮನೆ ಹಾಗೂ ಕಚೇರಿಗಳು ದಾಳಿಗೆ ಒಳಗಾದವು. ಬೆಳ್ಳಂಬೆಳಗ್ಗೆ ದಾಳಿ ಮಾಡಿದ ಅಧಿಕಾರಿಗಳು‌ ದಾಖಲೆಗಳ ಪರಿಶೀಲನೆ ನಡೆಸಿದರು.

ದಾಳಿಗೆ ಒಳಗಾದ ಹಲವು ಬಿಲ್ಡರ್‌ಗಳ ಹೆಸರು ಸೈಟ್‌ ಕೊಡಿಸುವುದಾಗಿ ಹೇಳಿ ವಂಚನೆ, ಆಸ್ತಿಪತ್ರ ಅವ್ಯವಹಾರ, ರಿಯಲ್‌ ಎಸ್ಟೇಟ್‌ ಆಸ್ತಿಗಳ ಮೌಲ್ಯದಲ್ಲಿ ಅಕ್ರಮ, ತೆರಿಗೆ ನೋಂದಣಿಯಲ್ಲಿ ಕಳ್ಳತನ, ಹೀಗೆ ಹಲವು ಅವ್ಯವಹಾರಗಳಲ್ಲಿ ಕೇಳಿಬಂದಿದೆ ಎನ್ನಲಾಗಿದೆ. ಈ ಬಗ್ಗೆ ನೊಂದವರು ಹಾಗೂ ಬಿಲ್ಡರ್‌ಗಳ ಸಮೀಪವರ್ತಿಗಳು ದೂರು ನೀಡಿದ್ದು, ದೊರೆತುಬಂದ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಕೆಲವು ತಿಂಗಳ ಹಿಂದೆ ಅಕ್ರಮ ಹಣ ಲೇವಾದೇವಿ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ಬೆಂಗಳೂರಿನಲ್ಲಿ ಎಂಟು ಕಡೆ ದಾಳಿ (ED Raid) ನಡೆಸಿ 11.5 ಕೋಟಿ ರೂ. ವಶಪಡಿಸಿಕೊಂಡಿದ್ದರು. ಹಣ ಲೇವಾದೇವಿ ಮತ್ತು ಅಕ್ರಮ ವಹಿವಾಟಿಗೆ ಸಂಬಂಧಿಸಿ ಕೆಲವೊಂದು ಮಾಹಿತಿಯನ್ನು ಪಡೆದುಕೊಂಡಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಗ್ರಾಹಕರಿಗೆ ವಂಚನೆ ನಡೆಸಿದ ಆರೋಪ

ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕೆಲ ಕಂಪನಿಗಳು ಸೈಟ್‌ ಕೊಡಿಸುವುದಾಗಿ ವಂಚನೆ ಮಾಡಿವೆ ಎಂದು ಬೆಂಗಳೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಸೈಟ್‌ ಕೊಡಿಸುವುದಾಗಿ ವಂಚನೆ ಮಾಡಿದ್ದರಿಂದಾಗಿ ಪೊಲೀಸರು ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತರಕ್ಷಣಾ ಕಾಯಿದೆ 2024 (Karnataka Protection of Interest of Depositors in Financial Establishments Act, 2004-KPIDFE) ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇವರು ಜನರಿಂದ ಪಡೆದ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಿದ್ದರು ಎಂಬ ಆರೋಪಗಳಿದ್ದವು. ಈ ವಿಚಾರಗಳು ಜಾರಿ ನಿರ್ದೇಶನಾಲಯದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅವರು ದಾಖಲೆ ಪರಿಶೀಲಿಸಿ, ಈಗ ದಾಳಿಯನ್ನು ಸಂಘಟಿಸಿದ್ದಾರೆ.

ಇದನ್ನೂ ಓದಿ: Lokayukta Raid: ಲೋಕಾಯುಕ್ತ ದಾಳಿ; 30 ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಎಫ್‌ಡಿಎ

Exit mobile version