Site icon Vistara News

ED Raid: ಮಾಜಿ ಸಚಿವ ಬಿ. ನಾಗೇಂದ್ರ, ಶಾಸಕ ದದ್ದಲ್‌ಗೆ ಇಡಿ ದಾಳಿ ಶಾಕ್!‌ ಬೆಂಗಳೂರು, ಬಳ್ಳಾರಿ ನಿವಾಸಗಳಲ್ಲಿ ತೀವ್ರ ಶೋಧ

ed raid b nagendra

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Corporation Scam) ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ (SIT Enquiry) ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ (Ex minister B Nagendra) ಹಾಗೂ ಕಾಂಗ್ರೆಸ್‌ ಶಾಸಕ (Congress MLA) ಬಸವನಗೌಡ ದದ್ದಲ್‌ (Basavanagowda Daddal) ಅವರ ಮನೆಗಳ ಮೇಲೆ ಇಂದು ಮುಂಜಾನೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ (ED Raid) ನಡೆಸಿದ್ದಾರೆ. ಇದರೊಂದಿಗೆ, ವಾಲ್ಮೀಕಿ ಹಗರಣದಲ್ಲಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕೇಂದ್ರ ತನಿಖಾ ಸಂಸ್ಥೆಗಳು ಫೀಲ್ಡಿಗಿಳಿದಿರುವುದು ಖಚಿತವಾಗಿದೆ.

ನಾಗೇಂದ್ರ ಅವರಿಗೆ ಸೇರಿದ ಡಾಲರ್ಸ್ ಕಾಲೋನಿಯ ಮನೆ ಮೇಲೆ ದಾಳಿ ಮಾಡಲಾಗಿದೆ. ಅವರ ಆಸ್ತಿಗಳಿರುವ ಬಿಇಎಲ್ ರೋಡ್, ಮತ್ತಿಕೆರೆ ಹಾಗೂ ಮಲ್ಲೇಶ್ವರಂ ಸೇರಿದಂತೆ ಬೆಂಗಳೂರಿನಲ್ಲಿ ನಾಲ್ಕು ಕಡೆ ದಾಳಿಗಳು ನಡೆದಿವೆ. ಬಳ್ಳಾರಿಯ ಅವರ ಮನೆಯ ಮೇಲೂ ದಾಳಿ ನಡೆಸಲಾಗಿದೆ. ಬೆಂಗಳೂರು ಹೊರತುಪಡಿಸಿ ರಾಯಚೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ಮಧ್ಯೆ ಪ್ರವೇಶಿಸಬಹುದು ಎಂಬ ಮಾಹಿತಿ ದೊರೆತಿತ್ತು.

ವಾಲ್ಮೀಕಿ ನಿಗಮದ ಹಗರಣದಲ್ಲಿ 183 ಕೋಟಿ ರೂ. ಅವ್ಯವಹಾರ ನಡೆದಿತ್ತು. ಇದರ ವ್ಯಾಪ್ತಿ ಕೆಳಹಂತದ ಅಧಿಕಾರಿಗಳಿಂದ ಹಿಡಿದು ಮೇಲಿನವರೆಗೂ ವ್ಯಾಪಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್‌ ಡೆತ್‌ನೋಟ್‌ನಲ್ಲಿಯೂ ಸಚಿವರ ಬಗ್ಗೆ ಉಲ್ಲೇಖ ಇದೆ.

ಬ್ಯಾಂಕ್‌ಗಳಲ್ಲಿ ಬಹುಕೋಟಿ ಹಣ ಅಕ್ರಮ ನಡೆದಾಗ ಈ ವಿಚಾರದಲ್ಲಿ ರಾಜ್ಯ ಯಾವುದೇ ಒಪ್ಪಿಗೆ ನೀಡದೆಯೂ ಸಿಬಿಐ ಹಾಗೂ ಇಡಿ ಇದರಲ್ಲಿ ಮಧ್ಯೆ ಪ್ರವೇಶಿಸಿ ತನಿಖೆ ಕೈಗೆತ್ತಿಕೊಳ್ಳಬಹುದಾಗಿದೆ. ಎರಡೂ ಸಂಸ್ಥೆಗಳು ಈ ಪ್ರಕರಣದ ಬಗ್ಗೆ ಆಸಕ್ತಿ ವಹಿಸಿವೆ ಎಂದು ಗೊತ್ತಾಗಿತ್ತು. ಅಕ್ರಮ ನಡೆದ ಸಂದರ್ಭದಲ್ಲಿ ಬಿ. ನಾಗೇಂದ್ರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಶಾಸಕ ದದ್ದಲ್‌ ಈಗಲೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಡಿ ದಾಳಿ ಮಹತ್ವ ಪಡೆದಿದೆ.

ಇಂದು ನಾಗೇಂದ್ರ ಹಾಗೂ ದದ್ದಲ್‌ ಇಬ್ಬರೂ ಎಸ್‌ಐಟಿ ವಿಚಾರಣೆಯನ್ನೂ ಮತ್ತೆ ಎದುರಿಸಬೇಕಿದೆ. ನಿನ್ನೆ ಇಬ್ಬರೂ ಕ್ರಮವಾಗಿ ಎಂಟು ಹಾಗೂ ನಾಲ್ಕು ಗಂಟೆಗಳ ಕಾಲ ಎಸ್‌ಐಟಿ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದ್ದರು. ಹಲವಾರು ವಿಚಾರಗಳಿಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಇಂದು ಮತ್ತೆ ಇಬ್ಬರಿಗೂ ಬುಲಾವ್‌ ನೀಡಲಾಗಿದೆ. ಇಡಿ ದಾಳಿಯ ಸಂಕಷ್ಟದ ಜೊತೆಗೆ ಎಸ್‌ಐಟಿ ವಿಚಾರಣೆಯ ತಲೆನೋವನ್ನು ಕೂಡ ಇವರಿಬ್ಬರು ಏಕಕಾಲಕ್ಕೆ ಎದುರಿಸಬೇಕಿದೆ.

ಆರೋಪಿಗಳ ರಹಸ್ಯ ಮೀಟಿಂಗ್‌

ಹಗರಣಕ್ಕೆ ಸಂಬಂಧಿಸಿ ಆತ್ಮಹತ್ಯೆ ಮಾಡಿಕೊಂಡ ಅಧೀಕ್ಷಕ ಚಂದ್ರಶೇಖರ್ ಸಾವಿಗೆ ಎರಡು ದಿನ ಮುಂಚೆ ನಿಗಮದ ಎಂಡಿ ಪದ್ಮನಾಭ್ ಹಾಗೂ ಲೆಕ್ಕ ಪರಿಶೋಧಕ ಪರಶುರಾಮ್‌ ರಹಸ್ಯವಾಗಿ ಮೀಟಿಂಗ್‌ ನಡೆಸಿದ್ದು ದಾಖಲಾಗಿದೆ. ಮೇ.24ರಂದು ಒಂದು ಹೋಟೆಲ್‌ನಲ್ಲಿ ಇವರ ಸೀಕ್ರೆಟ್ ಮೀಟಿಂಗ್ ನಡೆದಿತ್ತು. ಹಗರಣದ ಬಗ್ಗೆ ಎಂಡಿ ಪದ್ಮನಾಭ್, ಪರಶುರಾಮ್‌ ಜೊತೆ ಬಿಸಿಬಿಸಿ ಚರ್ಚೆ ಮಾಡಿದ್ದ.

ಎಂಡಿ ತನ್ನನ್ನು ಸಿಕ್ಕಿ ಹಾಕಿಸಬಹುದು ಎಂಬ ಅನುಮಾನದಲ್ಲಿ ಪರಶುರಾಮ್ ಮೀಟಿಂಗ್‌ನ ವಿಡಿಯೋ ಹಾಗೂ ಆಡಿಯೋ ಮಾಡಿಕೊಂಡಿದ್ದ. ಸದ್ಯ ಪ್ರಕರಣದಲ್ಲಿ ಪದ್ಮನಾಭ್ A7 ಹಾಗೂ ಪರಶುರಾಮ್ A8 ಆರೋಪಿಗಳಾಗಿದ್ದಾರೆ. ಹಗರಣವನ್ನು ಮುಚ್ಚಿಹಾಕುವ ವಿಚಾರದಲ್ಲಿ ಪರಶುರಾಮ್ ಹಿಂದೇಟು ಹಾಕಿದ್ದ. ಆದ್ರೆ ಸೈಲೆಂಟ್‌ ಆಗಿರುವಂತೆ MD ಪದ್ಮನಾಭ್ ಬಾಯಿ ಮುಚ್ಚಿಸಿದ್ದ.

ಹಗರಣದ ಬಗ್ಗೆ ಅಧ್ಯಕ್ಷರಿಗೆ ಹೇಳೋದು ಒಳ್ಳೆಯದು ಎಂದು ಆಡಿಯೋದಲ್ಲಿ ಪರಶುರಾಮ್ ಹೇಳುತ್ತಿರುವುದು ಸ್ಪಷ್ಟವಾಗಿದೆ. ʼಹೇಳಿದ್ರೆ ದೊಡ್ಡ ರಾದ್ಧಾಂತ ಆಗುತ್ತೆ. ಸ್ವಲ್ಪ ದಿನ ಹೇಳೋದು ಬೇಡʼ ಎಂದು ಪದ್ಮನಾಭ್ ಹೇಳಿದ್ದ. ನಂತರ ಚಂದ್ರಶೇಖರ್‌ನನ್ನು ಇದರಲ್ಲಿ ಸಿಕ್ಕಿಸಿ ಹಾಕುವುದು ಹೇಗೆ ಎಂಬ ಬಗ್ಗೆ, ಆತನ ಇನ್‌ವಾಲ್ವ್‌ಮೆಂಟ್‌ ಬಗ್ಗೆ ಮಾತು ನಡೆದಿತ್ತು. ಮೀಟಿಂಗ್ ನಡೆದ ಎರಡೇ ದಿನಗಳಲ್ಲಿ ಚಂದ್ರಶೇಖರ್ ಸೂಸೈಡ್ ಮಾಡಿಕೊಂಡಿದ್ದರು.

ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮ ಹಗರಣದಲ್ಲಿ ಮುಂದುವರಿದ ಮಾಜಿ ಸಚಿವರ ಪಿಎಸ್‌ ವಿಚಾರಣೆ; ನಾಗೇಂದ್ರಗೆ ಢವಢವ!

Exit mobile version