Site icon Vistara News

ED Raid: ಇಡಿ ಇಕ್ಕಳಕ್ಕೆ ಬೆದರಿ ಕುಟುಂಬ ಸಮೇತ ಕಣ್ಮರೆಯಾದ ಶಾಸಕ ಬಸವನಗೌಡ ದದ್ದಲ್‌!

basanagouda daddal ED raid

ಬೆಂಗಳೂರು: ನಿನ್ನೆ ಇಡೀ ದಿನ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳ ಕೈಯಿಂದ ಪಾರಾಗಲು ಎಸ್‌ಐಟಿ (SIT) ಮುಂದೆ ಕುಳಿತಿದ್ದ ರಾಯಚೂರು ಗ್ರಾಮೀಣ ಶಾಸಕ (Raichur Rural MLA) ಬಸವನಗೌಡ ದದ್ದಲ್‌ (Basanagouda Daddal), ನಿನ್ನೆ ರಾತ್ರಿ ವಿಚಾರಣೆ ಮುಗಿದ ಕೂಡಲೇ ನಾಪತ್ತೆಯಾಗಿದ್ದಾರೆ. ಅವರಿಗಾಗಿಯೇ ಕಾಯುತ್ತಿದ್ದ ಇಡಿ ಅಧಿಕಾರಿಗಳ (ED Raid) ಕೈಗೆ ಸಿಗದೆ ಕಣ್ಮರೆಯಾಗಿದ್ದಾರೆ.

ನಿನ್ನೆ ವಿಚಾರಣೆಗೆ ಬರುವಂತೆ ದದ್ದಲ್‌ ಅವರಿಗೆ ಎಸ್ಐಟಿ ನೋಟೀಸ್‌ ನೀಡಿತ್ತು. ಅತ್ತ ಇಡಿ ತಂಡ ಕೂಡ ದದ್ದಲ್‌ ಮನೆಗಳ ಮೇಲೆ ದಾಳಿ ನಡೆಸಿದ್ದು, ಅವರನ್ನು ಪ್ರಶ್ನಿಸಿತ್ತು. ಇಡಿ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ತತ್ತರಿಸಿದ್ದ ದದ್ದಲ್‌, ನಿನ್ನೆ ಎಸ್‌ಐಟಿ ನೆವ ಮಾಡಿ ಹೊರಬಿದ್ದವರು ಆ ಬಳಿಕ ಮನೆಗೂ ಮರಳಿಲ್ಲ. ಇತ್ತ ರಾಯಚೂರಿನ ಅವರ ಮನೆಯಲ್ಲಿ ಅವರಿಗಾಗಿಯೇ ಕಾಯುತ್ತಿದ್ದ ಇಡಿ ಅಧಿಕಾರಿಗಳು ನಂತರ ಅಲ್ಲಿಂದ ಖಾಲಿ ಕೈಯಲ್ಲಿ ತೆರಳಿದ್ದಾರೆ.

ನಿನ್ನೆ ಬೆಳಗ್ಗೆ ದದ್ದಲ್ ವಶಕ್ಕೆ ಪಡೆಯಲು ಹುಡುಕಾಟ ನಡೆಸಿದ್ದ ಇಡಿ ಅಧಿಕಾರಿಗಳು, ನಂತರ ಎಸ್ಐಟಿ ಕಚೇರಿಗೆ ಆಗಮಿಸಿದ್ದರು. ಆದರೆ ಎಸ್ಐಟಿ ಅಧಿಕಾರಿಗಳು ದದ್ದಲ್‌ ಅವರನ್ನು ಹೊರಗಡೆ ಬಿಟ್ಟಿರಲೇ ಇಲ್ಲ. ಸುಮಾರು 8 ಗಂಟೆಗಳ ಕಾಲ ವಿಚಾರಣೆ ಎದುರಿಸಿ ಸಂಜೆ ಅಲ್ಲಿಂದ ದದ್ದಲ್‌ ಹೊರಟಿದ್ದರು. ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಸೂಚಿಸಿತ್ತು. ಸಿಐಡಿ ಕಚೇರಿಯಿಂದ ತೆರಳಿದ ಶಾಸಕ ಆ ಬಳಿಕ ಕಣ್ಮರೆಯಾಗಿದ್ದಾರೆ.

ಇದೀಗ ಮಾಜಿ ಸಚಿವ ನಾಗೇಂದ್ರ ವಾಲ್ಮೀಕಿ ನಿಗಮ ಹಗರಣದಲ್ಲಿ ಇಡಿ ಇಕ್ಕಳಕ್ಕೆ ಸಿಲುಕಿದ್ದಾರೆ. ಇಡಿ ಅಧಿಕಾರಿಗಳಿಂದ ಮಾಜಿ‌ ಸಚಿವ ನಾಗೇಂದ್ರ ಬಂಧನ ಆಗಿರುವ ಹಿನ್ನೆಲೆಯಲ್ಲಿ, ಬಸವನ ಗೌಡ ದದ್ದಲ್‌ಗೆ ಢವಢವ ಶುರುವಾಗಿದೆ. ರಾಯಚೂರು ಹಾಗು ಬೆಂಗಳೂರಿನಲ್ಲಿ ನಿನ್ನೆಯಿಂದ ಬೀಡು ಬಿಟ್ಟಿರುವ ಇಡಿ ತಂಡಗಳು, ದದ್ದಲ್ ಫೋನ್ ಅನ್ನು ಟ್ರ್ಯಾಪ್ ಮಾಡುತ್ತಿದೆ. ದದ್ದಲ್ ಪ್ರತಿ ಚಲನವಲದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಇಂದು ದದ್ದಲ್‌ ಕಂಡುಬಂದಲ್ಲಿ ಅವರನ್ನು ವಶಕ್ಕೆ ಪಡೆದು ಆರೆಸ್ಟ್‌ ಮಾಡುವ ಸಾಧ್ಯತೆ ಇದೆ.

ನಿನ್ನೆಯಿಂದ ಬೆಂಗಳೂರಿನ ನಿವಾಸಕ್ಕೆ ದದ್ದಲ್ ಬಂದಿಲ್ಲ. ಎಸ್ಐಟಿ ವಿಚಾರಣೆ ಮುಗಿಸಿದ ಬಳಿಕ ಕುಟುಂಬಸ್ಥರ ಸಮೇತ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಯಲಹಂಕದ ಕೋಗಿಲು ಬಳಿ ಇರುವ ದದ್ದಲ್ ವಿಲ್ಲಾದಲ್ಲಿ ಮನೆಯ ಇಬ್ಬರು ಕೆಲಸದವರು ಮಾತ್ರ ಇದ್ದು, ಕುಟುಂಬದ ಯಾವ ಸದಸ್ಯರೂ ಮನೆಯಲ್ಲಿಲ್ಲ. ಕುಟುಂಬ ಸಮೇತ ತೆರಳಿರುವುದಾಗಿ ಮನೆ ಕೆಲಸದವರಿಂದ ಮಾಹಿತಿ ಬಂದಿದೆ.

ದದ್ದಲ್‌ ಮಗನಿಗೂ ಇಡಿ ನೋಟೀಸ್?

ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮಗನಿಗೂ ಸಂಕಷ್ಟ ಸಾಧ್ಯತೆ ಕಂಡುಬಂದಿದೆ. ದದ್ದಲ್ ಮಗನಿಗೂ ಇ.ಡಿ ನೋಟಿಸ್ ನೀಡಲಿದೆ ಎಂದು ಗೊತ್ತಾಗಿದೆ.

4 ಎಕರೆ 30 ಗುಂಟೆ ಜಮೀನು ಖರೀದಿಯ ವಿವರಣೆ ಕೇಳಿ ನೋಟಿಸ್ ನೀಡಲಾಗುತ್ತಿದ್ದು, ಮಗ ತ್ರಿಶೂಲ್ ನಾಯಕ್ ಹೆಸರಲ್ಲಿ ದದ್ದಲ್ ಖರೀದಿಸಿರುವ ಜಮೀನು ಇದಾಗಿದೆ. ಅಧಿಕಾರಿ ಚಂದ್ರಶೇಖರ ಆತ್ಮಹತ್ಯೆಗೂ ಮುನ್ನವೇ ಜಮೀನು ಖರೀದಿ ಮಾಡಲಾಗಿತ್ತು. ಎಕರೆಗೆ 36 ಲಕ್ಷ ರೂ ಹಾಗೆ ಕೊಟ್ಟು ತ್ರಿಶೂಲ್ ಹೆಸರಲ್ಲಿ ಜಮೀನು ಖರೀದಿ ಮಾಡಲಾಗಿದೆ.

ಸಿರವಾರ ಹೋಬಳಿ ಗಣದಿನ್ನಿ ಗ್ರಾಮದಲ್ಲಿ ಸರ್ವೇ ನಂ 33/1 ನಂಬರಿನ, ಬಸನಗೌಡ ತಂ ಸಿದ್ದನಗೌಡ ಎಂಬುವರಿಂದ ಜಮೀನು ಖರೀದಿ ಮಾಡಲಾಗಿದ್ದು, 22-05-2024 ರಲ್ಲಿ ತ್ರಿಶೂಲ್ ನಾಯಕ್ ಹೆಸರಲ್ಲಿ ರಿಜಿಸ್ಟರ್ ಮಾಡಲಾಗಿದೆ. ಸದ್ಯ ದದ್ದಲ್ ಪುತ್ರ ತ್ರಿಶೂಲ್ ದೆಹಲಿಯಲ್ಲಿ ವೈದ್ಯರಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Education News: ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಕರ್ನಾಟಕದ 148 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಎಬಿಬಿ ಇಂಡಿಯಾ ನೆರವು

Exit mobile version