Site icon Vistara News

Encounter in UP: ವಾರದ ಅಂತರದಲ್ಲಿ ಯೋಗಿ ನಾಡಲ್ಲಿ ಮತ್ತೊಂದು ಎನ್‌ಕೌಂಟರ್‌; ಕೊಲೆ ಆರೋಪಿ ಫಿನಿಶ್‌

shoot out

shoot out

ಲಕ್ನೋ: ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಗುರುವಾರ (ಜನವರಿ 11) ಮುಂಜಾನೆ ಗುಂಡಿನ ಮೊರೆತದ ಸದ್ದು ಕೇಳಿ ಬಂದಿದೆ. ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲೆ ಅಪರಾಧಿ ಸಾವನ್ನಪ್ಪಿದ್ದು, ಆತನ ಸಹಚರ ಗಾಯಗೊಂಡಿದ್ದಾನೆ. ಮೃತನನ್ನು ಇಜ್ಹಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಆರೋಪಿಯ ಹೆಸರು ತಾಲಿಬ್ ಎಂದು ಪೊಲೀಸರು ತಿಳಿಸಿದ್ದಾರೆ. (Encounter in UP).

ಕನೌಜ್‌ ಜಿಲ್ಲೆಯ ಸಂಧನ್ ಪಟ್ಟಣದಲ್ಲಿ ಆಭರಣ ಅಂಗಡಿ ನಡೆಸುತ್ತಿದ್ದ ಮೊಹಮ್ಮದ್ ಅಯಾಜ್ (32) ಎಂಬಾತನನ್ನು ಜನವರಿ 5ರಂದು ಈ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಅಂಗಡಿಯನ್ನು ಮುಚ್ಚಿ ಮನೆಗೆ ಹಿಂದಿರುಗುತ್ತಿದ್ದ ಮೊಹಮ್ಮದ್ ಅಯಾಜ್ ಮೇಲೆ ದಾಳಿ ನಡೆಸಿ ಸುಮಾರು 35 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿದ್ದರು ಎಂದು ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ಈ ದುಷ್ಕರ್ಮಿಗಳನ್ನು ಬಂಧಿಸಲು ತೆರಳಿದ ವೇಳೆ ಎನ್‌ಕೌಂಟರ್‌ ನಡೆದಿದೆ. ಬಂಧಿತರಿಂದ 20 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ವಾಹನ ತಪಾಸಣೆಯ ಸಮಯದಲ್ಲಿ ಇಬ್ಬರು ಅಪರಾಧಿಗಳು ಪರಾರಿಯಾಗಲು ಪ್ರಯತ್ನಿಸಿದಾಗ ಪೊಲೀಸ್ ತಂಡ ಗುಂಡು ಹಾರಿಸಿತ್ತು. ಘಟನೆಯಲ್ಲಿ ಕಾನ್ಸ್‌ಟೇಬಲ್‌ಗಳಾದ ಅಮನ್ ಸಿಂಗ್ ಮತ್ತು ವಿನಯ್ ಕುಮಾರ್ ಗಾಯಗೊಂಡಿದ್ದಾರೆ ಎಂದು ಪ್ರಶಾಂತ್ ಕುಮಾರ್ ವಿವರಿಸಿದ್ದಾರೆ. ಗಾಯಗೊಂಡಿದ್ದ ಇಜ್ಹಾರ್ ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದರೆ, ತಾಲಿಬ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ ಬಲಿ!

ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗ್ಯಾಂಗ್‌ಸ್ಟರ್‌, ಶಾರ್ಪ್‌ ಶೂಟರ್‌ ವಿನೋದ್‌ ಕುಮಾರ್‌ ಉಪಾಧ್ಯಾಯ ಬಲಿಯಾದ ವಾರದ ಬಳಿಕ ಮತ್ತೆ ಈ ಘಟನೆ ವರದಿಯಾಗಿದೆ. ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (UP STF) ಜನವರಿ 5ರ ಮುಂಜಾನೆ ನಡೆಸಿದ ದಾಳಿಯಿಂದ ವಿನೋದ್‌ ಕುಮಾರ್‌ ಸಾವನ್ನಪ್ಪಿದ್ದ. ಸುಲ್ತಾನ್‌ಪುರದ ದೆಹತ್ ಕೊಟ್ವಾಲಿ ಪ್ರದೇಶದ ಎಸ್‌ಟಿಎಫ್‌ ಪ್ರಧಾನ ಕಚೇರಿಯ ಡಿವೈಎಸ್ಪಿ ದೀಪಕ್ ಕುಮಾರ್ ಸಿಂಗ್ ನೇತೃತ್ವದ ತಂಡ ಈ ಎನ್‌ಕೌಂಟರ್‌ ನಡೆಸಿತ್ತು.

ವಿನೋದ್‌ ಕುಮಾರ್‌ ವಿರುದ್ಧ ಲಕ್ನೋ ಮತ್ತು ಗೋರಖ್‌ಪುರ ಸೇರಿದಂತೆ ಉತ್ತರ ಪ್ರದೇಶದಾದ್ಯಂತ ಅಪಹರಣ, ದರೋಡೆ, ಸುಲಿಗೆಯ ಅನೇಕ ಪ್ರಕರಣಗಳು ದಾಖಲಾಗಿವೆ. ಆತನನ್ನು ಬಂಧಿಸುವವರಿಗೆ ಗೋರಖ್‌ಪುರ ಪೊಲೀಸರು 1 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದರು. ಈತ ಗೋರಖ್‌ಪುರ, ಬಸ್ತಿ, ಸಂತ ಕಬೀರ್ ನಗರ ಮತ್ತು ಲಕ್ನೋದಲ್ಲಿ ಆತ ಹಲವು ಕೊಲೆಗಳನ್ನು ನಡೆಸಿದ್ದ. ಇದಲ್ಲದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರವಾದ ಗೋರಖ್‌ಪುರದ ಗೋರಖನಾಥ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ ವಿನೋದ್ ಕುಮಾರ್‌ ಹೆಸರಿನಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಇನ್ನೂ 31 ಪ್ರಕರಣಗಳಿದ್ದವು.

ಇದನ್ನೂ ಓದಿ: Encounter in UP: ಯೋಗಿ ನಾಡಿನಲ್ಲಿ ಮತ್ತೊಂದು ಎನ್‌ಕೌಂಟರ್‌, ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ ಬಲಿ!

Exit mobile version