ನವದೆಹಲಿ: ಸೈಬರ್ ಅಪರಾಧ (Cyber crimes) ಮತ್ತು ಆನ್‌ಲೈನ್ ಗೇಮಿಂಗ್ (Online gaming) ಮೂಲಕ ಸಾಮಾನ್ಯ ಜನರಿಗೆ ಸುಮಾರು 5,000 ಕೋಟಿ ರೂ.ಗಳನ್ನು ವಂಚಿಸಿದ ಆರೋಪದ ಮೇಲೆ ದೆಹಲಿ ಮೂಲದ ವ್ಯಕ್ತಿಯನ್ನು ಇತ್ತೀಚೆಗೆ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (Enforcement Directorate) ಬುಧವಾರ ತಿಳಿಸಿದೆ.
ಸೈಬರ್ ವಂಚಕ ದೆಹಲಿಯ ಗ್ರೇಟರ್ ಕೈಲಾಶ್ ನಿವಾಸಿ ಆಶಿಶ್ ಕಕ್ಕರ್‌ನನ್ನು ಮಾರ್ಚ್ 2ರಂದು ಗುರುಗ್ರಾಮದ ಹೋಟೆಲ್‌ನಿಂದ ವಶಕ್ಕೆ ಪಡೆಯಲಾಗಿದೆ ಎಂದು ಇ.ಡಿ ಹೇಳಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (PMLA) ಪ್ರಕಾರ ವಿಶೇಷ ನ್ಯಾಯಾಲಯವು ಆತನಿಗೆ ಮಾರ್ಚ್ 12ರ ವರೆಗೆ ನ್ಯಾಯಾಂಗ ವಿಧಿಸಿತ್ತು. ನಂತರದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲು ಇ.ಡಿ ನಿರಾಕರಿಸಿದೆ.
ವಂಚನೆ ಜಾಲದ ಕಿಂಗ್ ಪಿನ್
2020-2024ರ ಅವಧಿಯಲ್ಲಿ ದೇಶಾದ್ಯಂತ ನಡೆದ ವಿವಿಧ ಸೈಬರ್ ಅಪರಾಧಗಳು ಮತ್ತು ಆನ್‌ಲೈನ್ ಗೇಮಿಂಗ್‌ನಿಂದ ಸುಮಾರು 4,978 ಕೋಟಿ ರೂ.ಗಳನ್ನು ವಂಚಿಸಿದ ಗ್ಯಾಂಗ್‌ನ ಕಿಂಗ್ ಪಿನ್ ಬಂಧಿತ ಆಶಿಶ್ ಎಂದು ಇ.ಡಿ ತಿಳಿಸಿದೆ. ಪ್ರಕರಣಗಳು ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ ಮತ್ತು ಇತರ ಕೆಲವು ರಾಜ್ಯಗಳಲ್ಲಿ ವರದಿಯಾಗಿತ್ತು.
ಹೂಡಿಕೆ, ಅರೆಕಾಲಿಕ ಉದ್ಯೋಗದ ಆಮಿಷ, ಆನ್‌ಲೈನ್ ಶಾಪಿಂಗ್ ಮತ್ತು ಸಾಲ ವಂಚನೆಯಂತಹ ವಿವಿಧ ಮಾರ್ಗಗಳ ಮೂಲಕ ಈ ಗ್ಯಾಂಗ್ ಹಣ ದೋಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದರಲ್ಲೂ ಉತ್ತಮ ಆದಾಯದ ಭರವಸೆಯೊಂದಿಗೆ ಮೋಸದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಜನರನ್ನು ಆಕರ್ಷಿಸುವುದು ಈ ವಂಚಕರ ಸಾಮಾನ್ಯ ತಂತ್ರಗಳಲ್ಲಿ ಒಂದು. ಅವರ ಮಾತಿಗೆ ಮರುಳಾಗಿ ಠೇವಣಿದಾರರು ತಮ್ಮ ಜೀವಮಾನದ ಉಳಿತಾಯವನ್ನು ಹೂಡಿಕೆ ಮಾಡುತ್ತಾರೆ. ಕೊನೆಗೆ ಅವರು ತಮ್ಮ ಆದಾಯವನ್ನು ಕೇಳಿದಾಗ ವಂಚಕರು ಕೆಲವು ತೆರಿಗೆ ಅಥವಾ ಸಂಸ್ಕರಣಾ ಶುಲ್ಕ ಇತ್ಯಾದಿಗಳ ಸೋಗಿನಲ್ಲಿ ಮತ್ತಷ್ಟು ಮೊತ್ತವನ್ನು ಪಾವತಿಸಲು ಸೂಚಿಸುತ್ತಾರೆ. ಗ್ರಾಹಕರು ಸ್ವತಃ ಹೂಡಿಕೆ ಮಾಡುವುದನ್ನು ನಿಲ್ಲಿಸುವವರೆಗೆ ಈ ವಂಚನೆ ನಡೆಯುತ್ತಲೇ ಇರುತ್ತದೆ ಎಂದು ಇ.ಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Inhuman Behaviour : ಹಣಕ್ಕಾಗಿ ರಾಕ್ಷಸಿ ಕೃತ್ಯ; ಬಾಲಕಿಯ ತೊಡೆಗೆ ಇಸ್ತ್ರಿ ಪೆಟ್ಟಿಗೆ ಇಟ್ಟು ಸುಟ್ಟ ದೊಡ್ಡಮ್ಮ
ʼʼಈ ಪ್ರಕರಣದಲ್ಲಿ ಇದೇ ರೀತಿಯ ತಂತ್ರವನ್ನು ಅನುಸರಿಸಲಾಗಿದೆ. ಹೀಗೆ ಗಳಿಸಿದ ಆದಾಯವನ್ನು ಆಶಿಶ್ ಕಕ್ಕರ್ ಮತ್ತು ಆತನ ಸಹವರ್ತಿಗಳು ತಮ್ಮ ನಿಯಂತ್ರಣದಲ್ಲಿರುವ ಕಂಪೆನಿಗಳು ಅಥವಾ ಸಂಸ್ಥೆಗಳ ಬ್ಯಾಂಕ್ ಖಾತೆಗಳಲ್ಲಿ ಸಂಗ್ರಹಿಸಿದ್ದಾರೆ. ಜತೆಗೆ ವಿದೇಶಕ್ಕೂ ಸಾಗಿಸಿರುವ ಶಂಕೆ ಇದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದೇ ಕಾರಣಕ್ಕೆ ಇವರು 200ಕ್ಕೂ ಅಧಿಕ ಕಂಪೆನಿಗಳನ್ನು ಹುಟ್ಟು ಹಾಕಿದ್ದರು. ಆಶಿಶ್ ಕಕ್ಕರ್ ಈ ಕಂಪೆನಿಗಳ ಬ್ಯಾಂಕ್ ಖಾತೆಗಳ ಪ್ರತಿಯೊಂದು ವ್ಯವಹಾರವನ್ನು ತನ್ನ ನಿಷ್ಠಾವಂತ ಸಹವರ್ತಿಗಳ ಮೂಲಕ ನಿಯಂತ್ರಿಸುತ್ತಿದ್ದ. ಮಾತ್ರವಲ್ಲ ಆತ ಹವಾಲಾ ಅಥವಾ ಮೋಸದ ವಹಿವಾಟಿನ ಉದ್ದೇಶಕ್ಕಾಗಿ ಆಮದು-ರಫ್ತು ವ್ಯವಹಾರವನ್ನೂ ನಡೆಸಿದ್ದ ಎಂದು ಇ.ಡಿ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ