ಬೆಂಗಳೂರು: ಭ್ರೂಣ ಲಿಂಗ ಪತ್ತೆಯು (Gender Detection) ಶಿಕ್ಷಾರ್ಹ ಅಪರಾಧ ಎಂಬುದು ತಿಳಿದಿದ್ದರೂ ಹಲವರು ಕಾನೂನು ಬಾಹಿರವಾಗಿ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ (Fetus Gender Detection) ಮಾಡುತ್ತಿದ್ದಾರೆ. ಸದ್ಯ ಬೈಯಪ್ಪನಹಳ್ಳಿ ಠಾಣಾ ಪೊಲೀಸರು (Baiyappanahalli Police) ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಒಂದಲ್ಲ, ಎರಡಲ್ಲ ಬರೋಬ್ಬರಿ 900ಕ್ಕೂ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಭ್ರೂಣ ಲಿಂಗ ಪತ್ತೆಗಾಗಿ ಮಹಿಳೆಯನ್ನು ಬೆಂಗಳೂರಿಂದ ಮಂಡ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಶಿವಲಿಂಗೇಗೌಡ ಅಲಿಯಾಸ್ ಶಿವು (50), ನಯನ್ ಕುಮಾರ್ ಅಲಿಯಾಸ್ ನಯನ್ (36) ಎಂಬುವವರು ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆ ಜಾಲದ ಕುರಿತು ಮಾಹಿತಿ ನೀಡಿದ್ದರು.
ಇವರು ನೀಡಿದ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಹೆಣ್ಣು ಭ್ರೂಣದ ಗರ್ಭಪಾತ ಮಾಡುತ್ತಿದ್ದ ಮೈಸೂರಿನ ಮಾತಾ ಆಸ್ಪತ್ರೆಯನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಈ ಕೃತ್ಯ ನಡೆಸುತ್ತಿದ್ದ ಮಾತಾ ಆಸ್ಪತ್ರೆಯ ವೈದ್ಯ, ಮಾಲೀಕ ಹಾಗೂ ಇತರೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ ಮೂಲದ ತುಳಸಿರಾಮ್, ಡಾ ಚಂದನ್ ಬಲ್ಲಾಳ್ (ಮೈಸೂರು ಮಾತಾ ಆಸ್ಪತ್ರೆ ಮಾಲೀಕ), ಆಸ್ಪತ್ರೆಯ ರಿಸಪ್ಶನಿಸ್ಟ್ ಮೀನಾ ಹಾಗೂ ಚಂದನ್ ಬಲ್ಲಾಳ್ ಪತ್ನಿ ರಿಜ್ಮಾ, ಲ್ಯಾಬ್ ಟೆಕ್ನಿಶಿಯನ್ ನಿಸ್ಸಾರ್ ಎಂಬುವವರನ್ನು ಬಂಧಿಸಿದ್ದಾರೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ.
ಭ್ರೂಣ ಲಿಂಗ ಪತ್ತೆಗೆ 20 ಸಾವಿರ ರೂ. ಹಾಗೂ ಹೆಣ್ಣು ಭ್ರೂಣ ಹತ್ಯೆಗೆ 20 ರಿಂದ 25 ಸಾವಿರ ರೂ. ದರವನ್ನು ನಿಗಧಿ ಮಾಡಿದ್ದರು. ಬಂಧಿತರು ಕಳೆದ ಎರಡು ವರ್ಷದಿಂದ ಈ ಕೃತ್ಯದಲ್ಲೇ ತೊಡಗಿದ್ದು, ಈವರೆಗೆ 900ಕ್ಕೂ ಹೆಚ್ಚು ಭ್ರೂಣ ಹತ್ಯೆ ಮಾಡಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ: Murder Case: ಅನೈತಿಕ ಸಂಬಂಧಕ್ಕೆ ಆರೋಗ್ಯಾಧಿಕಾರಿ ಬಲಿ; ಕತ್ತು ಹಿಸುಕಿ ಕೊಂದ ಪತಿ!
ಆರೋಪಿಗಳು ಸಿಕ್ಕಿದ್ದು ಹೇಗೆ?
ಅ.15ರಂದು ಪೊಲೀಸರು ಹಳೆ ಮದ್ರಾಸ್ ರಸ್ತೆಯಲ್ಲಿ ವಾಹನ ತಪಾಸಣೆ ಮಾಡಲು ರಸ್ತೆ ಬದಿ ನಿಂತಿದ್ದರು. ವಾಹನವನ್ನು ತಡೆದು ತಪಾಸಣೆ ಮಾಡುತ್ತಿದ್ದಾಗ ಅನುಮಾನಾಸ್ಪದವಾಗಿ ಕಾರೊಂದು ಬರುವುದನ್ನು ಗಮನಿಸಿದ್ದರು. ಅನುಮಾನ ಬಂದಾಕ್ಷಣ ತಡಮಾಡದೆ ಆ ಕಾರಿಗೆ ಕೈ ತೋರಿಸಿ ನಿಲ್ಲಿಸುವಂತೆ ಹೇಳಿದ್ದರು.
ಆದರೆ ಪೊಲೀಸರನ್ನು ಕಂಡೊಡನೆ ಚಾಲಕ ಕಾರನ್ನು ನಿಲ್ಲಿಸದೇ, ಏಕಾಏಕಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿದ್ದ. ಹೀಗಾಗಿ ಅಲರ್ಟ್ ಆದ ಪೊಲೀಸರು ಕೂಡಲೇ ಬೈಕ್ ಮೂಲಕ ಕಾರನ್ನು ಹಿಂಬಾಲಿಸಿ ಚೇಸಿಂಗ್ ಮಾಡಿದ್ದರು. ಹಳೇ ಮದ್ರಾಸ್ ರಸ್ತೆಯ ಎನ್‌ಜಿಎಫ್ ಸಿಗ್ನಲ್‌ನ ರಸ್ತೆಯಲ್ಲಿ ಕಾರು ತಡೆದಿದ್ದರು.
ಕಾರಲ್ಲಿದ್ದ ಶಿವಲಿಂಗೇಗೌಡ ಅಲಿಯಾಸ್ ಶಿವು (50), ನಯನ್ ಕುಮಾರ್ ಅಲಿಯಾಸ್ ನಯನ್ (36) ಕೂಡಲೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಅಸಾಮಿಗಳು ಪೊಲೀಸರ ಮುಂದೆ ತಡವರಿಸಿದ್ದರು. ಇದಾದ ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆಗೆ ನಡೆಸಿದಾಗ ಕೃತ್ಯವನ್ನೆಲ್ಲ ಬಾಯಿಬಿಟ್ಟಿದ್ದಾರೆ.
ಭ್ರೂಣ ಲಿಂಗ ಪತ್ತೆ ದಂಧೆ
ಭ್ರೂಣ ಲಿಂಗ ಪತ್ತೆಗಾಗಿ ಮಹಿಳೆಯೊಬ್ಬರನ್ನು ಮಂಡ್ಯಕ್ಕೆ ಕರೆದೊಯ್ಯುವಾಗಲೇ ಶಿವಲಿಂಗೇಗೌಡ ಹಾಗೂ ನಯನ್ ಕುಮಾರ್ ಪೊಲೀಸರಿಗೆ ಲಾಕ್ ಆಗಿದ್ದರು. ಪೊಲೀಸರನ್ನು ಕಂಡು ಎಸ್ಕೇಪ್ ಆಗಲು ಹೋಗಿ ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆ ಮಂಡ್ಯದಲ್ಲಿ ಸುನಂದ ಮತ್ತು ವಿರೇಶ್, ಸಿದ್ದೇಶ್ ಎಂಬುವವರು ಸ್ಕ್ಯಾನ್ ಮಾಡಿ ಹೊಟ್ಟೆಯಲ್ಲಿರುವ ಮಗು ಗಂಡು ಅಥವಾ ಹೆಣ್ಣು ಎಂಬುದನ್ನು ತಿಳಿಸುತ್ತಿದ್ದರು. ಒಂದು ವೇಳೆ ಹೆಣ್ಣಾಗಿದ್ದರೆ ಅದು ಬೇಡ ಎಂದರೆ ಅದನ್ನೂ ತೆಗೆಸುವ ಕೆಲಸವನ್ನು ಮಾಡುತ್ತಿದ್ದರು. ವಿರೇಶ್ ಎಂಬಾತ ಆತನಿಗೆ ತಿಳಿದಿರುವ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸುತ್ತಿದ್ದ ಎಂಬ ವಿಷಯವನ್ನು ಬಹಿರಂಗ ಮಾಡಿದ್ದಾರೆ.
ಮಂಡ್ಯದ ಆಲೆಮನೆಯೇ ಸ್ಕ್ಯಾನಿಂಗ್ ಸೆಂಟರ್
ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಹಲವು ಭಾಗದಲ್ಲಿ ಹೆಣ್ಣು ಮಕ್ಕಳು ಬೇಡ ಎನ್ನುವವರನ್ನು ಟಾರ್ಗೆಟ್ ಮಾಡುತ್ತಿದ್ದರು. ಗರ್ಭಿಣಿಯರನ್ನು ಕರೆದುಕೊಂಡು ಹೋಗುತ್ತಿದ್ದ ಆರೋಪಿಗಳು, ಮಂಡ್ಯದ ಆಲೆಮನೆಯಲ್ಲಿಯೇ ಸ್ಕ್ಯಾನಿಂಗ್ ಮಾಡುತ್ತಿದ್ದರು. ಭ್ರೂಣ ಲಿಂಗ ಪತ್ತೆ ಕುರಿತು ಬೈಯಪ್ಪನಹಳ್ಳಿ ಪೊಲೀಸರಿಗೆ ಮಾಹಿತಿ ದೊರೆತಾಗ ಇನ್ಸ್‌ಪೆಕ್ಟರ್ ಪ್ರಶಾಂತ್ ಅವರ ತಂಡವು ಕಾರ್ಯಾಚರಣೆ ಕೈಗೊಂಡಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.