Site icon Vistara News

Filming Adult Movies: ಅಶ್ಲೀಲ ವಿಡಿಯೊ ಚಿತ್ರೀಕರಣ, ಪ್ರಸಾರ; ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ

crime

crime

ಮುಂಬೈ: ಅಶ್ಲೀಲ ವಿಡಿಯೊ ಚಿತ್ರೀಕರಣ (Filming Adult Movies) ಮತ್ತು ಲೈವ್ ಆಗಿ ಪ್ರಸಾರ (Live-streamin) ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಪಿಹು (Pihu) ಎಂಬ ಚಂದಾದಾರಿಕೆ ಆಧಾರಿತ ಅಪ್ಲಿಕೇಶನ್‌ನಲ್ಲಿ ಈ ವಿಡಿಯೊವನ್ನು ಪ್ರಸಾರ ಮಾಡಲಾಗಿತ್ತು. ಪಿಹು ಆ್ಯಪ್‌ ಓನ್ಲಿ ಫ್ಯಾನ್ಸ್ ಪ್ಲಾಟ್‌ಫಾರ್ಮ್‌ ಅನ್ನು ಹೋಲುತ್ತದೆ. ಅಲ್ಲಿ ಬಳಕೆದಾರರು ಮಾಸಿಕ ಚಂದಾದಾರಿಕೆಯೊಂದಿಗೆ ಅಪ್‌ಲೋಡ್‌ ಆಗಿರುವ ಖಾಸಗಿ ವಿಡಿಯೊಗಳನ್ನು ವೀಕ್ಷಿಸುತ್ತಾರೆ.

ವರ್ಸೊವಾ ಪೊಲೀಸ್ ಅಧಿಕಾರಿಗಳ ಪ್ರಕಾರ, ಬಂಧಿತ ಆರೋಪಿಗಳ ಪೈಕಿ ಇಬ್ಬರು ಮಹಿಳೆಯರು. 20 ಮತ್ತು 34 ವರ್ಷದ ಇಬ್ಬರು ಮಹಿಳೆಯರು ಮತ್ತು 27 ವರ್ಷದ ಪುರುಷ ಅಪ್ಲಿಕೇಶನ್‌ಗೆ ವಿಡಿಯೊ ಚಿತ್ರೀಕರಿಸಿ ಅಪ್‌ಲೋಡ್‌ ಮಾಡುತ್ತಿರುವುದು ಕಂಡುಬಂದಿತ್ತು. ಆ್ಯಪ್‌ನಲ್ಲಿ ಬಳಕೆದಾರರು ಮಹಿಳೆಯರೊಂದಿಗೆ ಆಡಿಯೋ ಅಥವಾ ವಿಡಿಯೊ ಕರೆಗಳನ್ನು ಕಾಯ್ದಿರಿಸುವ ಸೌಲಭ್ಯ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ʼʼಕೆಲವು ವಾರಗಳಿಂದ ಅಂಧೇರಿ ಪಶ್ಚಿಮ ಭಾಗದಿಂದ ಇಂತಹ ವಿಡಿಯೊಗಳನ್ನು ಚಿತ್ರೀಕರಿಸಿ ಆ್ಯಪ್‌ಗೆ ಅಪ್‌ಲೋಡ್‌ ಮಾಡುತ್ತಿರುವುದನ್ನು ಗಮನಿಸಿದ್ದೆವು. ಸೂಕ್ತ ಸಮಯಕ್ಕಾಗಿ ಕಾದು ದಾಳಿ ನಡೆಸಿದ್ದೇವೆʼʼ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಪಶ್ಚಿಮ ಅಂಧೇರಿಯ ಫೋರ್ ಬಂಗಲೆಯಲ್ಲಿ ಒಂದು ಕಡೆ ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದಾಳಿಯ ಸಮಯದಲ್ಲಿ ಪತ್ತೆಯಾದ ಮೂವರನ್ನು ನಂತರ ಬಂಧಿಸಲಾಯಿತು. ಇವರು ಕೇವಲ ‘ನಟರು’ ಮಾತ್ರ. ಅಪ್ಲಿಕೇಶನ್‌ನ ಮಾಲಕರು ಮತ್ತು ನಿರ್ವಾಹಕರು ಇನ್ನೂ ಪತ್ತೆಯಾಗಿಲ್ಲ. ಅವರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಆ್ಯಪ್‌ ಹೇಗೆ ಕಾರ್ಯ ನಿರ್ವಹಿಸುತ್ತದೆ?

ʼʼಇನ್‌ಸ್ಟಾಗ್ರಾಮ್‌ ಮೂಲಕ ಆ್ಯಪ್‌ನ ಗ್ರಾಹಕರಿಗೆ ವಿಡಿಯೊ ಪ್ರಸಾರದ ಸಮಯವನ್ನು ನೇರವಾಗಿ ತಿಳಿಸಲಾಗುತ್ತದೆ. ಗ್ರಾಹಕರು ಸ್ಟ್ರೀಮ್ ಆಗುವ ವಿಡಿಯೊವನ್ನು ವೀಕ್ಷಿಸಲು ಇನ್-ಅಪ್ಲಿಕೇಶನ್ ಕಾಯಿನ್‌ಗಳನ್ನು ಖರೀದಿಸಬೇಕಾಗುತ್ತದೆ. ಆ್ಯಪ್‌ನಲ್ಲಿ ತಮ್ಮ ಪ್ರೊಫೈಲ್‌ಗಳನ್ನು ಹೊಂದಿದ್ದ ಮಹಿಳೆಯರ ಜತೆ ಆಡಿಯೋ ಮತ್ತು ವಿಡಿಯೊ ಕರೆಗಳಂತಹ ಸೌಲಭ್ಯಗಳನ್ನೂ ಒದಗಿಸಲಾಗಿತ್ತುʼʼ ಎಂದು ವರ್ಸೊವಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೀಸ್‌ ಎಷ್ಟು?

ಈ ಆ್ಯಪ್‌ನ ನೋಂದಣಿ ಶುಲ್ಕ 7,500 ರೂ. ಗ್ರಾಹಕರು ತಾವು ವೀಕ್ಷಿಸುವ ಪ್ರತಿ ಕಂಟೆಂಟ್‌ಗೆ ಮೊದಲೇ ಹಣ ಪಾವತಿಸಬೇಕು ಮತ್ತು ಕರೆಗಳಿಗೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತಿತ್ತು. ʼʼಹಣ ಪಾವತಿ ಸಂಪೂರ್ಣ ಡಿಜಿಟಲ್‌ ವಿಧಾನದ ಮೂಲಕವೇ ನಡೆಯುತ್ತದೆ. ಗ್ರಾಹಕರು ಕಾಯಿನ್‌ ಖರೀದಿಸಬೇಕಾಗುತ್ತದೆ. ಈ ಆ್ಯಪ್‌ಗೆ ಗ್ರಾಹಕರು ಪ್ರವೇಶ ಪಡೆದ ನಂತರ ಅವರು ವಿವಿಧ ಮಹಿಳೆಯರ ಪ್ರೊಫೈಲ್‌ಗಳನ್ನು ವೀಕ್ಷಿಸಬಹುದು. ಮಹಿಳೆಯರು ಸಾಮಾನ್ಯವಾಗಿ ತಮ್ಮ ಪ್ರೊಫೈಲ್‌ಗಳಲ್ಲಿ ಕೆಲವು ವಿಡಿಯೊಗಳನ್ನು ಅಪ್‌ಲೋಡ್‌ ಮಾಡುತ್ತಾರೆ. ಅದರ ಮೂಲಕ ಬಳಕೆದಾರರು ಅವರನ್ನು ಸಂಪರ್ಕಿಸಬಹುದು. ಕಂಡುಬಂದ ಹೆಚ್ಚಿನ ಸ್ಟ್ರೀಮ್‌ಗಳು ಲೈವ್ ಕಾಮೆಂಟರಿಯೊಂದಿಗೆ ಇದ್ದವು” ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಇದನ್ನೂ ಓದಿ: Delhi Air Pollution: ತಾಜ್ ಮಹಲ್ ನಾಪತ್ತೆ! ಇದು ವಾಯು ಮಾಲಿನ್ಯದ ಎಫೆಕ್ಟ್

ಈ ಆ್ಯಪ್‌ ಅನ್ನು ಇದೀಗ ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಆ್ಯಪಲ್‌ ಸ್ಟೋರ್‌ನಿಂದ ತೆಗೆದು ಹಾಕಲಾಗಿದೆ. ಬಂಧಿತರಾದ ಮೂವರ ವಿರುದ್ಧ ಸೆಕ್ಷನ್‌ 292 (ಅಶ್ಲೀಲ ವಿಷಯವನ್ನು ಮಾರಾಟ ಮಾಡುವುದು ಅಥವಾ ಸಾರ್ವಜನಿಕವಾಗಿ ವಿತರಿಸುವುದು), ಸೆಕ್ಷನ್‌ 293 (ಇಪ್ಪತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಗೆ ಅಶ್ಲೀಲ ವಿಷಯವನ್ನು ಮಾರಾಟ ಮಾಡುವುದು ಅಥವಾ ವಿತರಿಸುವುದು) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

“ಎಲ್ಲ ಆರೋಪಿಗಳು ಪ್ರಸ್ತುತ ನಮ್ಮ ವಶದಲ್ಲಿದ್ದಾರೆ. ಬಳಕೆದಾರರು ಪಾವತಿಸಿದ ಖಾತೆಗಳನ್ನು ನಾವು ಈಗ ಪರಿಶೀಲಿಸುತ್ತಿದ್ದೇವೆ. ನಾವು ಪ್ರಕರಣವನ್ನು ಎಲ್ಲ ದೃಷ್ಟಿಯಿಂದಲೂ ಗಮನಿಸುತ್ತಿದ್ದೇವೆ. ನಿರ್ದಿಷ್ಟವಾಗಿ ಕೆಲವು ಜನರು ಇಂತಹ ಆ್ಯಪ್‌ಗಳಿಂದ ಲಾಭ ಪಡೆಯುತ್ತಿದ್ದಾರೆ. ಅದರ ಕುರಿತೂ ತನಿಖೆ ನಡೆಸಲಾಗುತ್ತಿದೆ. ಯಾವುದೇ ಮಹಿಳೆಯನ್ನು ಈ ಕೃತ್ಯ ಎಸಗಲು ಒತ್ತಾಯಿಸಲಾಗಿದೆಯೇ ಎನ್ನುವುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version