ಮುಂಬಯಿ: ಮ್ಯಾಗಜಿನ್ ಒಂದಕ್ಕಾಗಿ ಬೆತ್ತಲೆ ಫೋಟೊ ಶೂಟ್ ಮಾಡಿಸಿಕೊಂಡು ಹುಬ್ಬೇರಿಸಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಈಗ ಕಾನೂನು ಬಲೆಯೊಳಗೆ ಬಿದ್ದಿದ್ದಾರೆ. ಈ ನಗ್ನ ಫೋಟೊ ಶೂಟ್ ಮೂಲಕ ರಣವೀರ್ ಸಿಂಗ್ ಅವರು ಮಹಿಳೆಯರಿಗೆ ಅಗೌರವ ತೋರಿದ್ದಾರೆ, ಅವರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಾರೆ ಎಂದು ಆಪಾದಿಸಿ ಮಹಿಳಾ ವಕೀಲರೊಬ್ಬರು ದೂರು ದಾಖಲಿಸಿದ್ದರು. ಅದನ್ನು ಆಧರಿಸಿ ಈಗ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ರಣವೀರ್ ಅವರು ಮೈಮೇಲೆ ತುಂಡು ಬಟ್ಟೆ ಇಲ್ಲದ ರೀತಿಯಲ್ಲಿ ನಗ್ನ ಫೋಟೊ ಶೂಟ್ ಮಾಡಿಸಿಕೊಂಡಿದ್ದರು. ಮ್ಯಾಗಜಿನ್‌ಗಾಗಿ ಮಾಡಿಸಿದ ಫೋಟೊಶೂಟ್‌ನ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲೂ ಹಂಚಿಕೊಂಡು ಸಂಭ್ರಮಿಸಿದ್ದರು. ಈ ಚಿತ್ರ ಕೆಲವರ ಆಕ್ರೋಶಕ್ಕೆ ಮತ್ತು ಅಭಿಮಾನಿಗಳ ಅಪಾರ ಸಂಭ್ರಮಕ್ಕೆ ಕಾರಣವಾಗಿತ್ತು.
ಈ ನಡುವೆ, ಮುಂಬಯಿ ಮೂಲದ ವಕೀಲೆ ವೇದಿಕಾ ಚೌಬೆ ಅವರು ಚೆಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಲ್ಲಿ ʻʻರಣವೀರ್ ಅವರ ಈ ಫೋಟೊ ಶೂಟ್ ಮಹಿಳೆಯರ ಭಾವನೆಗಳಿಗೆ ಘಾಸಿಯುಂಟು ಮಾಡಿದೆ ಮತ್ತು ಅವರು ಚಿತ್ರಗಳ ಮೂಲಕ ಮಹಿಳೆಯರ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆʼʼ ಎಂದು ಆರೋಪಿಸಲಾಗಿತ್ತು.
ಇದೀಗ ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಫೋಟೊಗಳಿಗೆ ಸಂಬಂಧಿಸಿ ಚೆಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಣವೀರ್ ವಿರುದ್ಧ ಸೆಕ್ಷನ್ ೨೯೨(ಸಾರ್ವಜನಿಕರ ಸಭ್ಯತೆ ಮತ್ತು ನೈತಿಕತೆಯನ್ನು ಮೀರಿ ಅಶ್ಲೀಲವಾಗಿ ನಡೆದುಕೊಂಡಿರುವುದು), ಸೆಕ್ಷನ್ ೨೯೩ (ಯುವಜನರ ಮುಂದೆ ಅಶ್ಲೀಲ ವಸ್ತುಗಳನ್ನು ಪ್ರದರ್ಶಿಸುವುದು), ಸೆಕ್ಷನ್ ೫೦೯(ಮಹಿಳೆಯರ ಗೌರವಕ್ಕೆ ಅಪಮಾನ ಉಂಟು ಮಾಡುವ ಉದ್ದೇಶ ಹೊಂದಿರುವ ಶಬ್ದ, ನಡವಳಿಕೆ ಬಳಕೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಈ ನಡುವೆ, ಒಂದು ಎನ್‌ಜಿಒ ಮತ್ತು ಒಬ್ಬ ಮಹಿಲಾ ವಕೀಲರು ಕೂಡಾ ರಣವೀರ್ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಮಾಜಿ ಪತ್ರಕರ್ತರು, ವಕೀಲರು ಸಲ್ಲಿಸಿರುವ ದೂರಿನಲ್ಲಿ ರಣವೀರ್ ಅವರ ಕೃತ್ಯವು ಮಹಿಳೆಯರ ಗೌರವಕ್ಕೆ ಧಕ್ಕೆ ಉಂಟು ಮಾಡುವಂತಿದೆ ಎಂದು ಆಪಾದಿಸಲಾಗಿದೆ.
ಈ ಮಧ್ಯೆ, ರಣವೀರ್ ಸಿಂಗ್ ಅವರು ಫೋಟೊಶೂಟ್‌ಗೆ ಸಂಬಂಧಿಸಿದ ಒಂದು ಪ್ರಶ್ನೆಗೆ ಅತ್ಯಂತ ಅಸಭ್ಯವಾಗಿ ಉತ್ತರಿಸಿದ್ದು ಕೂಡಾ ಕೆಲವರನ್ನು ಕೆರಳಿಸಿದೆ.
ಇದನ್ನೂ ಓದಿ| Ranveer singh | ಬೆತ್ತಲೆ ಪೋಸ್ ಕೊಟ್ಟ ರಣವೀರ್ ಕೂತ ಕಾರ್ಪೆಟ್ ಬೆಲೆ ಎಷ್ಟು?!