Site icon Vistara News

Fire Accident: ಭೀಕರ ಅಗ್ನಿ ದುರಂತ; ಒಂದೇ ಕುಟುಂಬದ 7 ಮಂದಿ ಸಜೀವ ದಹನ

Fire Accident

Fire Accident

ಪಟನಾ: ಯುಗಾದಿ ದಿನವೇ (ಏಪ್ರಿಲ್‌ 9) ಬಿಹಾರದಲ್ಲಿ ದೊಡ್ಡ ಅಗ್ನಿ ದುರಂತವೊಂದು (Fire Accident) ಸಂಭವಿಸಿದೆ. ಗುಡಿಸಲಿಗೆ ಬಿದ್ದ ಬೆಂಕಿಯಿಂದ ಒಂದೇ ಕುಟುಂಬದ 7 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಐವರು ಮಕ್ಕಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಹಾರದ ರೋಹ್ಟಾಸ್ ಜಿಲ್ಲೆಯಲ್ಲಿ ಈ ಮನ ಕಲುಕುವ ಘಟನೆ ನಡೆದಿದೆ.

ʼʼಸಸಾರಾಮ್ನ ನಸ್ರಿಗಂಜ್ ಉಪವಿಭಾಗದ ಇಬ್ರಾಹಿಂಪುರ ಗ್ರಾಮದಲ್ಲಿ ಮಂಗಳವಾರ ಅಪರಾಹ್ನ ಈ ಘಟನೆ ನಡೆದಿದೆ. ಈ ದುರಂತದಲ್ಲಿ ಮಕ್ಕಳು ಸೇರಿದಂತೆ 7 ಮಂದಿ ಸುಟ್ಟು ಕರಕಲಾಗಿದ್ದಾರೆʼʼ ಎಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರನ್ನು ಪುಷ್ಪಾ ದೇವಿ (30), ಆಕೆಯ ಮೂವರು ಮಕ್ಕಳಾದ ಕಾಜಲ್ ಕುಮಾರಿ (4), ಗುಡಿಯಾ (2) ಮತ್ತು ಭಜರಂಗಿ ಕುಮಾರ್ (6) ಮತ್ತು ಪುಷ್ಪಾ ದೇವಿ ಅವರ ಸಂಬಂಧಿಕರಾದ ಕಾಂತಿ ಕುಮಾರಿ (6), ಶಿವಾನಿ (3) ಮತ್ತು ಮಾಯಾ ದೇವಿ (25) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮಹಿಳೆ ರಾಜು ದೇವಿ ಅವರಿಗೆ ಸುಟ್ಟ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿವರ

ಸುದ್ದಿಗಾರರೊಂದಿಗೆ ಮಾತನಾಡಿದ ಬಿಕ್ರಮ್ಗಂಜ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅನಿಲ್ ಬಸಕ್ “ಮಂಗಳವಾರ ಅಪರಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡಾಗ ಎಲ್ಲ ಸಂತ್ರಸ್ತರು ಗುಡಿಸಲಿನ ಒಳಗೆ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಾಹಿತಿ ಪಡೆದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ರಕ್ಷಣಾ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ್ದರು. ಆದರೆ ಅಷ್ಟರಲ್ಲಾಗಲೇ ದುರಂತ ಸಂಭವಿಸಿತ್ತು. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆʼʼ ಎಂದು ಅವರು ತಿಳಿಸಿದ್ದಾರೆ.

ಸಂತ್ರಸ್ತರ ಕುಟುಂಬ ಸದಸ್ಯರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಗುಡಿಸಲಿನ ಬಳಿಯ ವಿದ್ಯುತ್ ಟ್ರಾನ್ಸ್‌ಫಾರ್ಮ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಇದು ಗುಡಿಸಲಿಗೆ ಹರಡಿದೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Fire Tragedy: ನೈಟ್‌ ಕ್ಲಬ್‌ನಲ್ಲಿ ಬೆಂಕಿ ಅವಘಡ; 29 ಮಂದಿ ಸಜೀವ ದಹನ

ಉಸಿರುಗಟ್ಟಿ ಮೃತಪಟ್ಟ ಸಹೋದರಿಯರು

ವಾರದ ಹಿಂದೆ ದೆಹಲಿಯಲ್ಲಿ ನಡೆದ ಬೆಂಕಿ ಆಕಸ್ಮಿಕದಲ್ಲಿ ಸಹೋದರಿಯರಿಬ್ಬರು ಮೃತಪಟ್ಟಿದ್ದರು. ಉತ್ತರ ದೆಹಲಿಯ ಸದರ್ ಬಜಾರ್ ಪ್ರದೇಶದ ಮನೆಯೊಂದರಲ್ಲಿ ಏಪ್ರಿಲ್‌ 2ರಂದು ಬೆಂಕಿ ಕಾಣಿಸಿಕೊಂಡಿದ್ದು, 14 ವರ್ಷದ ಬಾಲಕಿ ಮತ್ತು ಆಕೆಯ 12 ವರ್ಷದ ಸಹೋದರಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಗುಲಾಶ್ನಾ (14) ಮತ್ತು ಅನಾಯಾ (12) ಎಂದು ಗುರುತಿಸಲಾಗಿದೆ. ಮೃತ ಸಹೋದರಿಯರಾದ ಗುಲಾಶ್ನಾ ಮತ್ತು ಅನಾಯಾ ಮೊದಲ ಮಹಡಿಯ ಬಾತ್‌ರೂಮ್‌ನಲ್ಲಿ ಸಿಲುಕಿಕೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version