ಕೊಚ್ಚಿ: ಕೇರಳದ ಕೋಜಿಕ್ಕೋಡ್‌ನಲ್ಲಿ ರೈಲಿನ ಬೋಗಿಯಲ್ಲಿ ಬೆಂಕಿ ಹಚ್ಚಿ ಮೂವರ ಸಾವಿಗೆ ಕಾರಣನಾದ ಆರೋಪಿಯನ್ನು ಗುರುತಿಸಲಾಗಿದೆ. ಈತ ನೋಯಿಡಾ ನಿವಾಸಿ ಎಂದು ಗೊತ್ತಾಗಿದ್ದು, ಈತನ ಶೋಧ ನಡೆದಿದೆ.
ದುರ್ಘಟನೆ ನಡೆದ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎನ್‌ಐಎ ಈ ಘಟನೆಯ ತನಿಖೆಯನ್ನು ಕೈಗೆತ್ತಿಕೊಂಡಿಲ್ಲವಾದರೂ, ಉಗ್ರ ಸಂಚಿನ ಶಂಕೆ ಇರುವ ಯಾವುದೇ ಕೃತ್ಯವನ್ನು ಎನ್‌ಐಎ ಪರಿಶೀಲಿಸುವ ಹಿನ್ನೆಲೆಯಲ್ಲಿ ಇದನ್ನೂ ಪರಿಶೀಲಿಸಲಾಗಿದೆ.
ಬೆಂಕಿ ಹಚ್ಚಿದ ಆರೋಪಿಯನ್ನು ನೋಯಿಡಾ ನಿವಾಸಿ ಶಾರೂಖ್ ಸೈಫಿ ಎಂದು ಗುರುತಿಸಲಾಗಿದೆ. ಈತ ಆಲಪ್ಪುರ- ಕಣ್ಣೂರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದ. ಭಾನುವಾರ ರಾತ್ರಿ 9.45ರ ಸುಮಾರಿಗೆ ಕೋರಾಪುಳ ಸೇತುವೆಯಲ್ಲಿ ರೈಲಿನ ಬೋಗಿಯಲ್ಲಿದ್ದ ಸಹ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬೋಗಿಯಿಂದ ನೆಗೆದು ಪರಾರಿಯಾಗಿದ್ದ. ಇದರಿಂದ ಎಂಟು ಮಂದಿ ಸುಟ್ಟ ಗಾಯಗಳಿಗೀಡಾಗಿದ್ದರು.
ಕೆಲವು ಗಂಟೆಗಳ ಬಳಿಕ, ರೈಲು ಹಳಿಗಳ ಮೇಲೆ ಇದೇ ರೈಲಿನ ಪ್ರಯಾಣಿಕರಾಗಿದ್ದ ಮೂವರ ಶವಗಳನ್ನು ಪೊಲೀಸರು ಪತ್ತೆ ಮಾಡಿದ್ದರು. ಇವರಲ್ಲಿ ಒಬ್ಬಾಕೆ ಮಹಿಳೆ, ಒಬ್ಬ ಪುರುಷ ಹಾಗೂ ಒಂದು ಮಗುವಾಗಿತ್ತು. ಬೆಂಕಿ ಹಚ್ಚಿದ ಸಂದರ್ಭದಲ್ಲಿ ಭಯಭೀತರಾದ ಇವರು ರೈಲಿನಿಂದ ನೆಗೆದ ಪರಿಣಾಮ ಸತ್ತಿರಬಹುದು ಎಂದು ಶಂಕಿಸಲಾಗಿದೆ.
ಈ ನಡುವೆ, ದುಷ್ಕರ್ಮಿಗಾಗಿ ಕೇರಳ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ದಳ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇದನ್ನೂ ಓದಿ: Fire in Train: ರೈಲಿನಲ್ಲಿ ಬೆಂಕಿ ಹಚ್ಚಿದ ಕೃತ್ಯ ಪೂರ್ವಯೋಜಿತ, ಉಗ್ರ ಸಂಚಿನ ಸುಳಿವು