ಕೊಡಗು: ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿಯಾಗಿರುವ ಕೊಡಗು ಜಿಲ್ಲೆಯಲ್ಲಿ (Kodagu News) ರಾಜ್ಯದ ಜನರೇ ಬೆಚ್ಚಿಬೀಳುವ ಘಟನೆ ನಡೆದಿದೆ. ಡ್ರಾಪ್ ಕೊಡುವ ನೆಪದಲ್ಲಿ ಐವರು ಬಾಲಕಿಯರನ್ನು ಕಾರಿನಲ್ಲಿ ಹತ್ತಿಸಿಕೊಂಡ ದುರುಳರು ಒಬ್ಬ ಬಾಲಕಿಯ ಮೇಲೆ ಅತ್ಯಾಚಾರ (Physical Abuse) ಎಸಗಿದ್ದಾರೆ. ಇನ್ನೊಬ್ಬ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಬಾಲಕಿಯರು ತಪ್ಪಿಸಿಕೊಂಡು ಓಡಿಹೋಗಿ, ಸ್ಥಳೀಯರ ನೆರವು ಕೋರಿದ ಕಾರಣ ಭೀಕರ ದುರಂತವೊಂದು ತಪ್ಪಿದೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಮತ್ತೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಐವರೂ ದುರುಳರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಐವರಲ್ಲಿ ಇಬ್ಬರು ಕುಟ್ಟಾದವರಾದರೆ, ಇನ್ನೂ ಮೂವರು ಕೇರಳದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತರನ್ನು ಕುಟ್ಟಾ ನಿವಾಸಿಗಳಾದ ನವೀಂದ್ರ (24), ಅಕ್ಷಯ (27), ಕೇರಳದವರಾದ ರಾಹುಲ್ ತೋಲ್ಪಟ್ಟಿ (21), ಮನು ತೋಲ್ಪಟ್ಟಿ (25) ಹಾಗೂ ಸಂದೀಪ್ ತೋಲ್ಪಟ್ಟಿ (27) ಎಂಬುದಾಗಿ ಗುರುತಿಸಲಾಗಿದೆ. ಐವರ ವಿರುದ್ಧವೂ ಪೋಕ್ಸೊ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ.
ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕುಟ್ಟಾ-ನಾಗರಹೊಳೆ ರಸ್ತೆಯಲ್ಲಿ ಐವರು ಬಾಲಕಿಯರು ನಡೆದುಕೊಂಡು ಹೋಗುವಾಗ ಕಾರಿನಲ್ಲಿ ಬಂದ ಐವರು ದುರುಳರು, ಬಾಲಕಿಯರನ್ನು ನಿಮ್ಮ ಮನೆಗೆ ಡ್ರಾಪ್ ಮಾಡುತ್ತೇವೆ ಎಂದು ನಂಬಿಸಿ ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡಿದ್ದಾರೆ. ಇದಾದ ಬಳಿಕ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಒಬ್ಬ ಬಾಲಕಿ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ. ಇನ್ನೂ ಮೂವರು ಮತ್ತೊಬ್ಬ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ನಿರ್ಜನ ಪ್ರದೇಶದಲ್ಲಿ ದುರುಳರ ದುರ್ವರ್ತನೆಗೆ ಬೆಚ್ಚಿ ಬಿದ್ದ ಬಾಲಕಿಯರು, ಜನರು ಇರುವ ಕಡೆ ಓಡಿ ಹೋಗಿ, ನೆರವು ಕೋರಿದ್ದಾರೆ. ಇದಾದ ಬಳಿಕ ಜನರು ಬಂದು ಬಾಲಕಿಯರನ್ನು ರಕ್ಷಿಸಿದ್ದಾರೆ. ಜುಲೈ 9ರಂದೇ ಘಟನೆ ನಡೆದಿದ್ದು, ತಡವಾಗಿ ಸುದ್ದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಟ್ಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Physical Abuse: ಎಚ್‌ಐವಿ ಪೀಡಿತ ವ್ಯಕ್ತಿಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ, ಚಿನ್ನಾಭರಣ ದರೋಡೆ