ತಿರುವನಂತಪುರಂ: ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಐದು ವರ್ಷದ ಬಾಲಕಿಯ ಶವ (Kerala Horror) ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆರೋಪದಲ್ಲಿ ಬಿಹಾರ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ (ಜುಲೈ 28) ಸಂಜೆ ಅಲುವಾ ಮಾರುಕಟ್ಟೆಯಲ್ಲಿ ಐದು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಶನಿವಾರ (ಜುಲೈ 29) ಸಂಜೆ ಬಾಲಕಿಯ ಶವವು ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ಬಿಹಾರದಿಂದ ವಲಸೆ ಬಂದು ಎರ್ನಾಕುಲಂ ಜಿಲ್ಲೆಯಲ್ಲಿ ಕಾರ್ಮಿಕವಾಗಿ ಕೆಲಸ ಮಾಡುತ್ತಿರುವ ಅಶ್ಫಾಕ್ ಅಸ್ಲಾಂ (Asfaq Aslam) ಎಂಬಾತನು ಡ್ರಗ್ಸ್ ಮತ್ತಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಗೋಣಿ ಚೀಲದಲ್ಲಿ ಕಟ್ಟಿ ಬಿಸಾಡಿದ್ದಾನೆ ಎಂದು ತಿಳಿದುಬಂದಿದೆ.
ಬಾಲಕಿಯನ್ನು ಗೋಣಿ ಚೀಲದಲ್ಲಿ ಕಟ್ಟಿ ಹಾಕಿದ ಕಾರಣ ಆಕೆಯು ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದಾಗ್ಯೂ, ಬಾಲಕಿಯ ತಂದೆಯು ಶವವನ್ನು ಗುರುತಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡವು ಸ್ಥಳದಲ್ಲಿ ಹೆಚ್ಚಿನ ಪರಿಶೀಲನೆ ನಡೆಸುತ್ತಿದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: Physical abuse : 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದು ಗರ್ಭಿಣಿ ಮಾಡಿದ ಧೂರ್ತ ಅರೆಸ್ಟ್
“ಬಾಲಕಿ ನಾಪತ್ತೆಯಾದ ಕುರಿತು ಮಾಹಿತಿ ಲಭ್ಯವಾಗುತ್ತಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದೆವು. ಅಶ್ಫಾಕ್ ಅಸ್ಲಾಂನು ಬಾಲಕಿಯನ್ನು ಹೊತ್ತುಕೊಂಡು ಹೋಗುವುದನ್ನು ಗಮನಿಸಿ, ಬಳಿಕ ಆತನನ್ನು ಬಂಧಿಸಿದೆವು. ಇಡೀ ರಾತ್ರಿ ವಿಚಾರಣೆ ನಡೆಸಿದಾಗ ಆತನು ಅಪರಾಧ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ” ಎಂದು ಎರ್ನಾಕುಲಂ ಗ್ರಾಮೀಣ ಎಸ್‌ಪಿ ವಿವೇಕ್ ಕುಮಾರ್ ಮಾಹಿತಿ ನೀಡಿದರು.