ಇಂದೋರ್: ಇಲ್ಲಿನ ಮಹಾತ್ಮ ಗಾಂಧಿ ಸ್ಮಾರಕ ಮೆಡಿಕಲ್ (ಎಂಜಿಎಂ) ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಸೀನಿಯರ್ ವಿದ್ಯಾರ್ಥಿಗಳು ತಮಗೆ ಮಾಡಿದ ರ‍್ಯಾಗಿಂಗ್‌ನ ಭಯಾನಕತೆಯನ್ನು ಬಿಚ್ಚಿಟ್ಟಿದ್ದು, ಈ ಕುರಿತು ಪೊಲೀಸ್ ದೂರು ದಾಖಲಾಗಿದೆ.
ಸೀನಿಯರ್ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಅಸಭ್ಯ, ಅಶ್ಲೀಲ ಹಾಗೂ ಅಸಹಜ ಲೈಂಗಿಕ ಕೃತ್ಯಗಳನ್ನು ಮಾಡಿಸಿದ್ದಾರೆ. ಈ ಕುರಿತು ಯುಜಿಸಿ ಹೆಲ್ಪ್‌ಲೈನ್‌ನಲ್ಲಿ ದೂರು ದಾಲಾಗಿದೆ. ಕಾಲೇಜು ಆಡಳಿತ ಮಂಡಳಿ ಕೂಡ ಈ ಕುರಿತು ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಿರಿಯ ವಿದ್ಯಾರ್ಥಿಗಳು ತಮಗೆ ನೀಡಲಾದ ಚಿತ್ರಹಿಂಸೆಯ ಆಡಿಯೋ ಮುದ್ರಿಕೆ ಹಾಗೂ ಫೋಟೋಗಳನ್ನು ಕೂಡ ಮಾಡಿಕೊಂಡಿದ್ದು, ಅವುಗಳನ್ನು ದೂರಿನೊಂದಿಗೆ ಒದಗಿಸಿದ್ದಾರೆ. ಹಿರಿಯ ವಿದ್ಯಾರ್ಥಿಗಳ ಫ್ಲ್ಯಾಟ್‌ನಲ್ಲಿ ಈ ಕೃತ್ಯಗಳು ನಡೆದಿವೆ. ತಡವಾಗಿ ಬಂದವರನ್ನು ಕುರ್ಚಿಯಂತೆ ಕೂರಿಸಿದ್ದು, ತಮ್ಮ ಕ್ಲಾಸಿನ ಮಹಿಳಾ ಸಹಪಾಠಿಗಳ ಕುರಿತು ಅಶ್ಲೀಲವಾಗಿ ಮಾತಾಡಲು ತಿಳಿಸಿರುವುದು, ಪರಸ್ಪರ ಹೊಡೆಯಲು ಒತ್ತಾಯಿಸಿರುವುದು, ನಿರಾಕರಿಸಿದವರಿಗೆ ತಾವೇ ಕಪಾಲಮೋಕ್ಷ ಮಾಡಿರುವುದು ದಾಖಲಾಗಿದೆ. ಕಿರಿಯ ವಿದ್ಯಾರ್ಥಿಗಳನ್ನು ಲೈಬ್ರರಿಗೆ ಹಾಗೂ ಕ್ಯಾಂಟೀನ್‌ಗೆ ಹೋಗದಂತೆ ತಡೆಯೊಡ್ಡಲಾಗಿದೆ. ಈ ಕೃತ್ಯಗಳು ನಡೆಯುವಾಗ ಕಿರಿಯ ವಿದ್ಯಾರ್ಥಿಗಳು ಮೊಬೈಲ್ ಬಳಸಿ ಚಿತ್ರೀಕರಣ ನಡೆಸದಂತೆ ಕೂಡ ಅವರ ಮೊಬೈಲ್‌ಗಳನ್ನು ಕಿತ್ತಿಟ್ಟುಕೊಳ್ಳಲಾಗಿದೆ.
ಕೆಲವು ಪ್ರೊಫೆಸರ್‌ಗಳು ಕೂಡ ʻಪರ್ಸನಾಲಿಟಿ ಡೆವಲಪ್‌ಮೆಂಟ್ʼ ಹೆಸರಿನಲ್ಲಿ ಈ ರ‍್ಯಾಗಿಂಗ್ ಅನ್ನು ಸಮರ್ಥಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕೃತ್ಯದಲ್ಲಿ ಪಾಲ್ಗೊಂಡ ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಡಿಸ್ಮಿಸ್ ಮಾಡಲಾಗಿದೆ. ಪೊಲೀಸರು ಭಾರತೀಯ ದಂಡಸಂಹಿತೆಯ 294, 341, 342, 323, 506, 34 ಮತ್ತು ಯುಜಿಸಿ ಕಾಯಿದೆಯ 5, 17 ಆಕ್ಟ್‌ಗಳಡಿ ದೂರು ದಾಖಲಿಸಿದ್ದಾರೆ.
ಕೆಲವು ಕಾಲೇಜುಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರಿಂದ ಲೈಂಗಿಕ ವರ್ತನೆಗಳನ್ನು ಅಪೇಕ್ಷಿಸುವುದು ರ‍್ಯಾಗಿಂಗ್ ಹೆಸರಿನಲ್ಲಿ ನಡೆಯುತ್ತಿದೆ ಎಂಬ ಸುದ್ದಿಯಿದ್ದರೂ, ಈ ಕುರಿತು ದಾಖಲಾಗುತ್ತಿರುವ ಮೊದಲ ಪ್ರಕರಣ ಇದಾಗಿದೆ.
ಇದನ್ನೂ ಓದಿ: ಬೆತ್ತಲೆ ಫೋಟೊಶೂಟ್: ರಣವೀರ್ ಸಿಂಗ್ ವಿರುದ್ಧ ಸಿಡಿದೆದ್ದ ಮಹಿಳೆಯರು, ಎಫ್‌ಐಆರ್ ದಾಖಲು