ಆನೇಕಲ್: ಬೇಕಾದಷ್ಟು ಸಾಲ ಕೊಡುವುದಾಗಿ ಹೇಳಿ, ಅದರಲ್ಲಿ ಅರ್ಧದಷ್ಟು ಸಬ್ಸಿಡಿ ಸಿಗುತ್ತೆ ಎಂದೆಲ್ಲ ಹೇಳಿ ಖತರ್ನಾಕ್ ಲೇಡಿಯೊಬ್ಬಳು ಅಮಾಯಕ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ (Fraud Case) ಪ್ರಕರಣ ನಡೆದಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಹಾಗೂ ಆರ್‌ಬಿಐ (RBI) ಹೆಸರು ಹೇಳಿಕೊಂಡು ಈಕೆ ಮುಗ್ಧರಿಗೆ ನಾಮ (Crime news) ಹಾಕಿದ್ದಾಳೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ಈಕೆಯ ಕಳ್ಳಾಟ ನಡೆದಿದೆ. ತಮಿಳುನಾಡಿನ ಹೊಸೂರು ಮೂಲದ ಪವಿತ್ರ ಎಂಬಾಕೆ ಹೀಗೆ ವಂಚಿಸಿದವಳು. ಬ್ಲೂ ವಿಂಗ್ಸ್ ಎಂಬ ಹೆಸರಿನ ಟ್ರಸ್ಟ್ ಮಾಡಿಕೊಂಡು ಅಮಾಯಕ ಜನರಿಗೆ ವಂಚನೆ ಮಾಡುವುದನ್ನು ಕಸುಬಾಗಿ ಮಾಡಿಕೊಂಡಿದ್ದಾಳೆ.
ಟ್ರಸ್ಟ್‌ಗೆ ಆರ್‌ಬಿಐನಿಂದ 17 ಕೋಟಿ ರೂ. ಬಂದಿರುವುದಾಗಿ ಮೊದಲು ಈಕೆ ಜನರಿಗೆ ನಂಬಿಸಿದ್ದಾಳೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿ ಇರುವಂತೆ ನಕಲಿ ಪತ್ರ ಸೃಷ್ಟಿಸಿಕೊಂಡು ಅದನ್ನು ತೋರಿಸಿದ್ದಾಳೆ. ಕಂತೆ ಕಂತೆ ಹಣದ ನೋಟುಗಳ ವಿಡಿಯೋಗಳನ್ನು ಕಳುಹಿಸಿ ಜನರನ್ನು ನಂಬಿಸಿದ್ದಳು. ಸುಲಭವಾಗಿ ಸಾಲ ಕೊಡುತ್ತೇನೆ. ಒಬ್ಬರಿಗೆ ಹತ್ತು ಲಕ್ಷ ಲೋನ್ ನೀಡಿದರೆ ಅದರಲ್ಲಿ ಐದು ಲಕ್ಷ ಸಬ್ಸಿಡಿ ಎಂದು ಹೇಳಿದ್ದಾಳೆ. ಆದರೆ ಲೋನ್ ಬೇಕು ಅಂದರೆ ಮೊದಲು ಹಣ ಡೆಪಾಸಿಟ್ ಮಾಡಬೇಕು ಎಂದು ಕಥೆ ಕಟ್ಟಿದ್ದಳು.
ಇದನ್ನು ನಂಬಿದ ಜನರು ಒಂದು ಗುಂಪು ಮಾಡಿಕೊಂಡು ಈಕೆಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ಸಿಕ್ಕ ಸಿಕ್ಕ ಕಡೆಗಳಲ್ಲಿ ಸಾಲ ಮಾಡಿ ಹಣ ಕೊಟ್ಟಿದ್ದರು. ತಿಂಗಳುಗಳು ಕಳೆದರೂ ಲೋನ್ ಬಾರದೆ ಇದ್ದಾಗ ವಂಚಕಿ ಪವಿತ್ರಾಳ ಕಳ್ಳಾಟ ಬಯಲಾಗಿದೆ. ಸಾಲದ ಸುಳಿಗೆ ಸಿಲುಕಿದ ಅಮಾಯಕ ಜನರು ಬೀದಿಪಾಲಾಗಿದ್ದಾರೆ. ಚಂದಾಪುರು, ಅತ್ತಿಬೆಲೆ, ಹೊಸೂರು, ಧರ್ಮಪುರಿ ಸೇರಿದಂತೆ ಹಲವು ಕಡೆಗಳಲ್ಲಿ ಈಕೆ ವಂಚನೆ ಮಾಡಿದ್ದು, ನೂರಾರು ಮಂದಿಗೆ ವಂಚಿಸಿದ್ದಾಳೆ.
ಸೂರ್ಯನಗರ, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ವಂಚಕಿ ಪವಿತ್ರ ಹಾಗೂ ಆಕೆಯ ಜೊತೆಗಾರರಾದ ಪ್ರವೀಣ್, ಯಲ್ಲಪ್ಪ, ಶೀಲ, ರುಕ್ಮಿಣಿ, ರಾಧ, ಮಮತಾ, ನೆಹರೂಜಿ, ಶರತ್ ಕುಮಾರ್, ಸತೀಶ್, ಮಂಜುಳಾ, ಹಾಲ್ಬರ್ಟ್ ಮಾರ್ಟಿನ್, ಹೇಮಲತಾ, ಶಾಲಿನಿ ಹೀಗೆ ವಂಚನೆ ಮಾಡಿದ ಒಟ್ಟು ಹದಿನಾಲ್ಕು ಮಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Deepfake Scam: ಡೀಪ್‌ಫೇಕ್ ಬಳಸಿ ಕಂಪನಿಗೆ 200 ಕೋಟಿ ರೂ. ವಂಚಿಸಿದ ದುಷ್ಟರು! ಹೇಗೆ?