ನವದೆಹಲಿ: ಐಷರಾಮಿ ಹೋಟೆಲ್‌ನಲ್ಲಿ ತಂಗಿ ಬಿಲ್ ಪಾವತಿಸದೆ ವಂಚಿಸಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ಮಹಿಳೆ ಇತ್ತೀಚೆಗೆ ದೆಹಲಿಯ ಏರೋಸಿಟಿಯ ಐಷಾರಾಮಿ ಹೋಟೆಲ್‌ನಲ್ಲಿ ಸುಮಾರು 15 ದಿನಗಳ ಕಾಲ ತಂಗಿದ್ದಳು. ಪುಲ್ಮನ್ ಹೋಟೆಲ್‌ನ (Pullman Hotel) ಒಟ್ಟು ಬಿಲ್ ಸುಮಾರು 6 ಲಕ್ಷ ರೂ. ಆಗಿತ್ತು. ಅದರಲ್ಲಿ 2 ಲಕ್ಷ ರೂ. ಸ್ಪಾ ಸೇವೆಯ ಫೀಸ್. ಆದರೆ ಆಕೆ ಹಣ ಪಾವತಿ ಮಾಡಿರಲಿಲ್ಲ. ಹೀಗಾಗಿ ಹೋಟೆಲ್‌ಗೆ ಮೋಸ ಮಾಡಿದ ಆರೋಪದ ಮೇಲೆ ಆ ಮಹಿಳೆಯನ್ನು ಬಂಧಿಸಲಾಗಿದೆ. ಈ ವೇಳೆ ಆಕೆಯ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಕೇವಲ 41 ರೂ.ಗಳಿರುವುದು ಪತ್ತೆಯಾಗಿದೆ. ಇದೀಗ ಆಕೆಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ (Fraud Case).
ಮಹಿಳೆಯನ್ನು ಆಂಧ್ರ ಪ್ರದೇಶದ ಝಾನ್ಸಿ ರಾಣಿ ಸ್ಯಾಮ್ಯುಯೆಲ್ (Jhansi Rani Samuel) ಎಂದು ಗುರುತಿಸಲಾಗಿದೆ. ಆಕೆ ಡಿಸೆಂಬರ್ 13ರಂದು 15 ದಿನಗಳವರೆಗೆ ಹೋಟೆಲ್ ಅನ್ನು ಕಾಯ್ದಿರಿಸಿದ್ದಳು. ಹೋಟೆಲ್ ಸಿಬ್ಬಂದಿಯ ಪ್ರಕಾರ ಝಾನ್ಸಿ ರಾಣಿ ಸ್ಯಾಮ್ಯುಯೆಲ್ 2.11 ಲಕ್ಷ ರೂ.ಗಳ ಸ್ಪಾ ಸೇವೆಯನ್ನು ಪಡೆಯಲು ಇಶಾ ದವೆ ಎಂಬಾಕೆಯ ನಕಲಿ ಗುರುತಿನ ಚೀಟಿಯನ್ನು ಹಾಜರು ಪಡಿಸಿದ್ದಳು.
ತಾನು ಐಸಿಐಸಿಐ ಬ್ಯಾಂಕ್ ಯುಪಿಐ ಅಪ್ಲಿಕೇಶನ್‌ನಲ್ಲಿ ವಹಿವಾಟು ನಡೆಸುತ್ತಿದ್ದೇನೆ ಎಂದು ಝಾನ್ಸಿ ರಾಣಿ ಸ್ಯಾಮ್ಯುಯೆಲ್ ಹೋಟೆಲ್ ಸಿಬ್ಬಂದಿ ಬಳಿ ಹೇಳಿದ್ದಳು. ಆದರೆ ಯಾವುದೇ ಪಾವತಿಯನ್ನು ಸ್ವೀಕರಿಸಿಲ್ಲ ಎನ್ನುವುದು ಬಳಿಕ ಹೋಟೆಲ್ ಸಿಬ್ಬಂದಿ ಗಮನಕ್ಕೆ ಬಂದಿತ್ತು. “ಆಕೆ ಬಳಸಿದ ಅಪ್ಲಿಕೇಶನ್ ಅನುಮಾನಾಸ್ಪದವಾಗಿದೆʼʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಗಳಿಂದ ಪರಿಶೀಲನೆ
ಜನವರಿ 13ರಂದು ಪೊಲೀಸರು ಆ ಮಹಿಳೆಯನ್ನು ಬಂಧಿಸಿದ್ದರು. ಬಳಿಕ ತನಿಖೆ ನಡೆಸಿದ ವೇಳೆ ಆಕೆಯ ಬ್ಯಾಂಕ್ ಖಾತೆಯಲ್ಲಿ ಕೇವಲ 41 ರೂ.ಗಳಿವೆ ಎನ್ನುವುದು ಪೊಲೀಸರು ತಿಳಿದು ಬಂದಿತ್ತು. ತಾನು ಮತ್ತು ಪತಿ ವೈದ್ಯೆಯಾಗಿದ್ದು, ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದೇವೆ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಳು. ಆದರೆ ಅವರ ಗುರುತನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ. ಆಕೆಯ ಉದ್ದೇಶ ಏನಾಗಿತ್ತು ಎನ್ನುವುದನ್ನು ಇಲ್ಲಿಯವರೆಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ದೆಹಲಿ ಪೊಲೀಸರು ಆಕೆಯ ನಿಜವಾದ ವಿಳಾಸ ಮತ್ತು ಕುಟುಂಬ ಸದಸ್ಯರ ಬಗ್ಗೆ ವಿವರಗಳನ್ನು ಒದಗಿಸಲು ಆಂಧ್ರಪ್ರದೇಶದ ಪೊಲೀಸರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಹಕರಿಸುತ್ತಿಲ್ಲ
ʼʼಝಾನ್ಸಿ ರಾಣಿ ಸ್ಯಾಮ್ಯುಯೆಲ್‌ನನ್ನು ವಿಚಾರಣೆ ಮತ್ತು ಕೌನ್ಸಿಲಿಂಗ್‌ಗೆ ಒಳಪಡಿಸಲಾಗಿದೆ. ಆದರೆ ಆಕೆ ನಮ್ಮೊಂದಿಗೆ ಸಹಕರಿಸುತ್ತಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರಂಭದಲ್ಲಿ ವಂಚನೆಗಾಗಿ ಆಕೆಯನ್ನು ಬಂಧಿಸಲಾಯಿತು. ನಂತರ ಐಪಿಸಿಯ ಸೆಕ್ಷನ್ 419, 468 (ಮೋಸದ ಉದ್ದೇಶಕ್ಕಾಗಿ ಫೋರ್ಜರಿ) ಮತ್ತು 471 (ನಕಲಿ ದಾಖಲೆಯನ್ನು ಬಳಸುವುದು) ಅನ್ನು ಎಫ್ಐಆರ್‌ಗೆ ಸೇರಿಸಲಾಗಿದೆ. ತನಿಖೆ ಮುಂದುವರಿದಿದೆʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ದೆಹಲಿಯ ಐಷಾರಾಮಿ ಹೋಟೆಲ್ ಇಂತಹ ವಂಚನೆಗೆ ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ವ್ಯಕ್ತಿಯೊಬ್ಬ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಸರ್ಕಾರದ ಅಧಿಕಾರಿ ಎಂದು ಹೇಳಿ ದೆಹಲಿಯ ಐಷಾರಾಮಿ ಹೋಟೆಲ್ವೊಂದರಲ್ಲಿ ವಾಸ್ತವ್ಯ ಹೂಡಿ 23 ಲಕ್ಷ ರೂ.ಗೂ ಹೆಚ್ಚು ಮೊತ್ತದ ಬಾಕಿ ಬಿಲ್ ಪಾವತಿಸದೆ ಪರಾರಿಯಾಗಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ